ಬಿಡದಿಯಲ್ಲಿ ಪೋಸ್ಟರ್ ಅಪಪ್ರಚಾರ: ಸಿಎಂ ವಿರುದ್ಧ ಹರಿಹಾಯ್ದ ಎಚ್‌ಡಿಕೆ

ಎಚ್.ಡಿ.ಕುಮಾರಸ್ವಾಮಿ
ಎಚ್.ಡಿ.ಕುಮಾರಸ್ವಾಮಿ
Published on

ಪ್ರಮುಖ ಮುಖ್ಯಾಂಶಗಳು

  • ಬೆನ್ನಿಗಾನಹಳ್ಳಿಯಲ್ಲಿ ಸತ್ತವರ ಹೆಬ್ಬೆಟ್ಟು ಒತ್ತಿಸಿ ಜಮೀನು ತೆಗೆದುಕೊಂಡ ವ್ಯಕ್ತಿಯಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?
  • ನನ್ನ ಹೆಸರಿನಲ್ಲಿ 46 ಎಕರೆ ಭೂಮಿ ಮಾತ್ರ ಇದೆ. ಅದನ್ನು 40 ವರ್ಷಗಳ ಹಿಂದೆ ಕಷ್ಟಪಟ್ಟು ಖರೀದಿಸಿದ್ದೇನೆ.
ಬಿಡದಿಯಲ್ಲಿ ಪೋಸ್ಟರ್ ಅಪಪ್ರಚಾರ:
ಸಿಎಂ ವಿರುದ್ಧ ಹರಿಹಾಯ್ದ ಎಚ್‌ಡಿಕೆ
ವಿಜಯವಾಣಿ ಸುದ್ದಿಜಾಲ, ಬೆಂಗಳೂರು:
ಬಿಡದಿ ಪ್ರದೇಶದಲ್ಲಿ ತಮ್ಮ ಹಾಗೂ ಕುಟುಂಬದ ವಿರುದ್ಧ ಪೋಸ್ಟರ್‌ಗಳ ಮೂಲಕ ಅಪಪ್ರಚಾರ ನಡೆಸಲಾಗುತ್ತಿದೆ. ಸಿಎಂ ಆದ ನಂತರವೂ ಪೋಸ್ಟರ್ ಅಂಟಿಸುವ ಕಯಾಲಿ ಬಿಟ್ಟಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಡಿಕೆಶಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಬೆಂಗಳೂರಿನ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿ, ಬೆನ್ನಿಗಾನಹಳ್ಳಿಯಲ್ಲಿ ಸತ್ತವರ ಹೆಬ್ಬೆಟ್ಟು ಒತ್ತಿಸಿ ಜಮೀನು ತೆಗೆದುಕೊಂಡ ವ್ಯಕ್ತಿಯಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ? ಭೂಮಿ ಲಪಟಾಯಿಸಿದ ಚರಿತ್ರೆ ಇರುವವರು ಇಂದು ಪೋಸ್ಟರ್‌ಗಳ ಮೂಲಕ ಇತರರ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಡದಿ ರೈತರ ಪರ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಕುಟುಂಬದ ವಿರುದ್ಧ ಪೋಸ್ಟರ್ ಅಂಟಿಸಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ವೈಯಕ್ತಿಕವಾಗಿ ಅಪಪ್ರಚಾರ ಮಾಡಿದರೆ ನಾನು ಕುಗ್ಗುವ ವ್ಯಕ್ತಿಯಲ್ಲ. ಕೈಲಾಗದವರ ಕೊನೆಯ ಅಸ್ತ್ರವೇ ಅಪಪ್ರಚಾರ. ಪೋಸ್ಟರ್ ಅಂಟಿಸುವ ಮೂಲಕ ನನ್ನ ಮತ್ತು ನನ್ನ ಕುಟುಂಬದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಕುಮಾರಸ್ವಾಮಿ ಹೇಳಿದರು.
ಪೋಸ್ಟರ್‌ಗಳಲ್ಲಿ ತಮ್ಮ ಹಾಗೂ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಚಿತ್ರಗಳನ್ನು ಬಳಸಿ 100 ಎಕರೆ ಭೂಮಿ ಹೊಂದಿದ್ದಾರೆ ಎಂದು ಆರೋಪಿಸಿರುವುದನ್ನು ತಳ್ಳಿಹಾಕಿದ ಅವರು, ನನ್ನ ಹೆಸರಿನಲ್ಲಿ 46 ಎಕರೆ ಭೂಮಿ ಮಾತ್ರ ಇದೆ. ಅದನ್ನು 40 ವರ್ಷಗಳ ಹಿಂದೆ ಕಷ್ಟಪಟ್ಟು ಖರೀದಿಸಿದ್ದೇನೆ. ಪತ್ನಿ ಅನಿತಾ ಕುಮಾರಸ್ವಾಮಿ ಅವರ ಹೆಸರಿನಲ್ಲಿ 36-37 ಎಕರೆ ಭೂಮಿ ಇದೆ. ಅದನ್ನು ಹೊರತುಪಡಿಸಿ ಬೇರೆ ಯಾವುದೇ ಭೂಮಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ, ವಿರೋಧ ಪಕ್ಷದ ನಾಯಕರು ಹಾಗೂ ಬಿಜೆಪಿ ಮುಖಂಡರ ವಿರುದ್ಧವೂ ಇದೇ ರೀತಿಯ ಪೋಸ್ಟರ್ ಅಭಿಯಾನ ನಡೆಸಲಾಗಿದೆ ಎಂದು ಆರೋಪಿಸಿದ ಅವರು, ತಪ್ಪು ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಿ. ಆದರೆ ಪೋಸ್ಟರ್ ಅಂಟಿಸಿ ವ್ಯಕ್ತಿತ್ವ ಹರಣ ಮಾಡುವುದು ಸರಿಯಲ್ಲ ಎಂದು ಹೇಳಿದರು.
ತಮ್ಮ ಬದುಕು ತೆರೆದ ಪುಸ್ತಕ ಎಂದು ಹೇಳಿದ ಕುಮಾರಸ್ವಾಮಿ, ಯಾವುದೇ ಬೆದರಿಕೆ ಅಥವಾ ಅಪಪ್ರಚಾರಕ್ಕೆ ಹೆದರುವ ಪ್ರಶ್ನೆಯೇ ಇಲ್ಲ ಎಂದರು. ಜನರ ಹಾಗೂ ರೈತರ ಪರ ಹೋರಾಟ ಮುಂದುವರಿಯುತ್ತದೆ. ಬಿಡದಿ ಟೌನ್‌ಶಿಪ್ ಯೋಜನೆಗೆ ಜನ ವಿರೋಧ ವ್ಯಕ್ತಪಡಿಸಿದ ಕಾರಣ ಅದನ್ನು ಕೈಬಿಟ್ಟಿದ್ದೆ. ಜನರ ಇಚ್ಛೆಗೆ ವಿರುದ್ಧವಾಗಿ ಯಾವುದೇ ಯೋಜನೆಯನ್ನು ಜಾರಿಗೆ ತರಲು ನಾನು ಮುಂದಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

*ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಭೂಮಿ ಸ್ವಾಧೀನ ಪ್ರಕ್ರಿಯೆ ನಡೆಸುತ್ತಿರುವ ಸರ್ಕಾರದ ಉದ್ದೇಶದ ಮೇಲೂ ಪ್ರಶ್ನೆ ಎತ್ತಿದ ಅವರು, ಕೆಲಸ ಮಾಡುವುದಕ್ಕಿಂತ ಎಷ್ಟು ಹಣ ಗಳಿಸಬಹುದು ಎಂಬುದೇ ಕೆಲವರ ಚಿಂತನೆಯಾಗಿದೆ

- ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ



ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net