ಇಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ; ಬೆಂಗಳೂರು-ಮೈಸೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ: ಸಂಚಾರ ಮಾರ್ಗ ಬದಲಾವಣೆ | PM Modi

ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು (ನ. 13) ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆಯಲಿರುವ ವಿವಿಧ ಮಹತ್ವದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಬೆಂಗಳೂರಿನಲ್ಲಿ ಪ್ರಧಾನಿ ಭೇಟಿ ವೇಳೆ ಹಿನ್ನೆಲೆ ಹಲವು ಮಾರ್ಗಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ.
ಇಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ; ಬೆಂಗಳೂರು-ಮೈಸೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ: ಸಂಚಾರ ಮಾರ್ಗ ಬದಲಾವಣೆ | PM Modi
Published on: 

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು (ನ. 13) ರಾಜ್ಯ ಪ್ರವಾಸ ಕೈಗೊಳ್ಳಲಿದ್ದು, ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆಯಲಿರುವ ವಿವಿಧ ಮಹತ್ವದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಬೆಂಗಳೂರಿನಲ್ಲಿ ಪ್ರಧಾನಿ ಭೇಟಿ ವೇಳೆ ಹಿನ್ನೆಲೆ ಹಲವು ಮಾರ್ಗಗಳಲ್ಲಿ ಸಂಚಾರ ಬದಲಾವಣೆ ಮಾಡಲಾಗಿದೆ.

ಪ್ರಧಾನಿ ಮೋದಿ ಇಂದು ಬೆಳಗ್ಗೆ ಸುಮಾರು 10:45ಕ್ಕೆ ಆನೇಕಲ್​ನಲ್ಲಿರುವ ಪ್ರಶಾಂತಿ ಕುಟೀರದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಲಿದ್ದು, ಈ ಸಂದರ್ಭದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಳಿಕ ಮಧ್ಯಾಹ್ನ ಸುಮಾರು 12:45ಕ್ಕೆ ತಾವರೆಕೆರೆಯಿಂದ ಐಐಎಂ ಬೆಂಗಳೂರು (IIM Bangalore) ಮೆಟ್ರೋ ನಿಲ್ದಾಣದವರೆಗೆ ಮೆಟ್ರೋ ರೈಲಿಗೆ ಹಸಿರು ನಿಶಾನೆ ತೋರಿಸಿ, ಅದರಲ್ಲಿ ಪ್ರಯಾಣಿಸಲಿದ್ದಾರೆ.

ನಂತರ ಮಧ್ಯಾಹ್ನ ಸುಮಾರು 1:15ಕ್ಕೆ ಬೆಂಗಳೂರಿನಲ್ಲಿ 15,600 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಈ ವೇಳೆಯೂ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎನ್ನಲಾಗಿದೆ.

Also Read
ಸಂವಿಧಾನವನ್ನು ಜೇಬಿನಲ್ಲಿಟ್ಟುಕೊಂಡವರಿಗೆ ಅಧಿಕಾರದ ಅಮಲು ಇನ್ನೂ ಇಳಿದಿಲ್ಲ: ರಾಹುಲ್ ಗಾಂಧಿಗೆ ಪ್ರಧಾನಿ ಮೋದಿ ಟಾಂಗ್! | PM Modi dig at Rahul Gandhi
ಇಂದು ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ; ಬೆಂಗಳೂರು-ಮೈಸೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ: ಸಂಚಾರ ಮಾರ್ಗ ಬದಲಾವಣೆ | PM Modi

ಮಧ್ಯಾಹ್ನದ ಬಳಿಕ ಪ್ರಧಾನಿ ಮೋದಿ ಮೈಸೂರಿಗೆ ಪ್ರಯಾಣಿಸಲಿದ್ದು, ಅಲ್ಲಿ ಮಧ್ಯಾಹ್ನ ಸುಮಾರು 3:30ಕ್ಕೆ ಭಾರತ್ ವನದಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಂಜೆ ಸುಮಾರು 4 ಗಂಟೆಗೆ ಪ್ರಧಾನಮಂತ್ರಿಯವರು ಕಾಸ್ಮೋಸ್-ಮೈಸೂರು ತಾರಾಲಯವನ್ನು ಉದ್ಘಾಟಿಸಲಿದ್ದು, ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಪ್ರಧಾನಿಗಳ ಬೆಂಗಾವಲು ಪಡೆ ಸಂಚರಿಸುವ ಮಾರ್ಗಗಳು ಮತ್ತು ಕಾರ್ಯಕ್ರಮದ ಸ್ಥಳಗಳ ಸುತ್ತಮುತ್ತ ಸಂಚಾರ ಪೊಲೀಸರು ಈ ಕೆಳಗಿನಂತೆ ಸಂಚಾರ ನಿರ್ಬಂಧ ಮತ್ತು ಪರ್ಯಾಯ ಮಾರ್ಗಗಳನ್ನು ಪ್ರಕಟಿಸಿದ್ದಾರೆ.

ಆಡುಗೋಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿ

ಸಂಚಾರ ನಿರ್ಬಂಧ: ಕಾರ್ಯಕ್ರಮದ ಸಮಯದಲ್ಲಿ ಆಡುಗೋಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಬನ್ನೇರುಘಟ್ಟ ರಸ್ತೆಯಲ್ಲಿ ಆನೆಪಾಳ್ಯ ಜಂಕ್ಷನ್‌ನಿಂದ ಡೈರಿ ಸರ್ಕಲ್ ಮೂಲಕ ಜಯದೇವ ಆಸ್ಪತ್ರೆ ಕಡೆಗೆ ಸಾಗುವ ಎಲ್ಲಾ ವಾಹನಗಳ ಸಂಚಾರವನ್ನು ಮೈಕೋಬಂಡೆ ಜಂಕ್ಷನ್ ಮತ್ತು ಡೈರಿ ಸರ್ಕಲ್ ಅಂಡರ್‌ಪಾಸ್ ಬಳಿ ತಾತ್ಕಾಲಿಕವಾಗಿ ನಿರ್ಬಂಧಿಸಲಾಗುವುದು.

ಪರ್ಯಾಯ ಮಾರ್ಗ: ಆನೆಪಾಳ್ಯ ಜಂಕ್ಷನ್‌ನಿಂದ ಡೈರಿ ಸರ್ಕಲ್ ಮೂಲಕ ಜಯದೇವ ಆಸ್ಪತ್ರೆ ಕಡೆಗೆ ಹೋಗುವ ವಾಹನಗಳು ಮೈಕೋಬಂಡೆ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು, ನ್ಯೂ ಮೈಕೋಬಂಡೆ ರಸ್ತೆ ಮೂಲಕ ಆಡುಗೋಡಿ ಜಂಕ್ಷನ್ ತಲುಪಿ, ಅಲ್ಲಿಂದ ಬಲ ತಿರುವು ಪಡೆದು ಹೊಸೂರು ಲಷ್ಕರ್ ಮುಖ್ಯ ರಸ್ತೆಯ ಮೂಲಕ ಸಾಗಬಹುದು. ಅಥವಾ, ಬನ್ನೇರುಘಟ್ಟ ರಸ್ತೆ ಮೂಲಕ ಸಾಗಿ, ಡೈರಿ ಸರ್ಕಲ್ ಸರ್ವಿಸ್ ರಸ್ತೆಯಲ್ಲಿ ಮುಂದುವರಿದು, ಡೈರಿ ಸರ್ಕಲ್ ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಡಾ. ಮರಿಗೌಡ ರಸ್ತೆ ಮೂಲಕ ಮಡಿವಾಳ ಚೆಕ್ ಪೋಸ್ಟ್ ಮತ್ತು ಹೊಸೂರು ರಸ್ತೆ ತಲುಪಿ ತಮ್ಮ ಪ್ರಯಾಣ ಮುಂದುವರಿಸಬಹುದು.

ಜಯನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿ

ಸಂಚಾರ ನಿರ್ಬಂಧ: ವಿವಿಐಪಿಗಳ ಸಂಚಾರದ ಸಮಯದಲ್ಲಿ 28ನೇ ಮುಖ್ಯ ರಸ್ತೆಯಿಂದ ಮಾರೇನಹಳ್ಳಿ ಮುಖ್ಯ ರಸ್ತೆ ಮೂಲಕ ಜಯದೇವ ಆಸ್ಪತ್ರೆ ಜಂಕ್ಷನ್ ಕಡೆಗೆ ಬರುವ ವಾಹನಗಳನ್ನು ನಿರ್ಬಂಧಿಸಲಾಗುವುದು. ಹಾಗೆಯೇ, ಈಸ್ಟ್ ಎಂಡ್ ಜಂಕ್ಷನ್‌ನಿಂದ ಸ್ವಾಗತ್ ಜಂಕ್ಷನ್ ಮೂಲಕ ಬನ್ನೇರುಘಟ್ಟ ರಸ್ತೆ ಕಡೆಗೆ ಬರುವ ವಾಹನಗಳ ಸಂಚಾರಕ್ಕೂ ನಿರ್ಬಂಧವಿರುತ್ತದೆ.

ಪರ್ಯಾಯ ಮಾರ್ಗ: 28ನೇ ಮುಖ್ಯ ರಸ್ತೆಯಲ್ಲಿ ಸಾಮಾನ್ಯ ವಾಹನ ಸಂಚಾರ ನಿರ್ಬಂಧವಿರುವುದರಿಂದ, ಬನಶಂಕರಿಯಿಂದ ಸಿಲ್ಕ್ ಬೋರ್ಡ್ ಕಡೆಗೆ ಹೋಗುವ ವಾಹನಗಳು (ವಿಐಪಿ ಸಂಚಾರದ ಸಮಯ ಹೊರತುಪಡಿಸಿ) ರಾಗಿಗುಡ್ಡ ಡಬಲ್ ಡೆಕ್ಕರ್ ರಸ್ತೆಯನ್ನು ಬಳಸಿ ಸಿಲ್ಕ್ ಬೋರ್ಡ್ ತಲುಪಬಹುದು. ಈಸ್ಟ್ ಎಂಡ್ ಜಂಕ್ಷನ್‌ನಿಂದ ಸ್ವಾಗತ್ ಜಂಕ್ಷನ್ ಕಡೆಗೆ ಬರುವ ವಾಹನಗಳು 28ನೇ ಮುಖ್ಯ ರಸ್ತೆ ಮತ್ತು ಈಸ್ಟ್ ಎಂಡ್ ರಸ್ತೆ ಮೂಲಕ ಸಾಗಿ, ಅಗತ್ಯಕ್ಕೆ ತಕ್ಕಂತೆ ಬಲ ಅಥವಾ ಎಡ ತಿರುವು ಪಡೆದು ಸ್ವಾಗತ್ ರಸ್ತೆ ಮತ್ತು ಜೆ.ಪಿ. ನಗರ ಡಾಲ್ಮಿಯಾ ಜಂಕ್ಷನ್ ಕಡೆಗೆ ಸಂಚರಿಸಬಹುದು.

ಜೆ ಪಿ ನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿ

ಸಂಚಾರ ನಿರ್ಬಂಧ: ಹೊರ ವರ್ತುಲ ರಸ್ತೆಯ 15ನೇ ಕ್ರಾಸ್ ಮತ್ತು 24ನೇ ಮುಖ್ಯ ರಸ್ತೆ ಜಂಕ್ಷನ್‌ನಿಂದ ಬನ್ನೇರುಘಟ್ಟ ರಸ್ತೆಯ ಜೆ.ಡಿ. ಮರ ಜಂಕ್ಷನ್‌ವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಇದರೊಂದಿಗೆ ಆರ್.ವಿ. ಡೆಂಟಲ್ ಜಂಕ್ಷನ್‌ನಿಂದ ಬನ್ನೇರುಘಟ್ಟ ಮುಖ್ಯ ರಸ್ತೆಯ (9ನೇ ಕ್ರಾಸ್ ರಸ್ತೆ) ವರೆಗೆ ಹಾಗೂ ಬಿಪಿಎಲ್ ಅರಕೆರೆ ಮುಖ್ಯ ರಸ್ತೆಯಿಂದ ಬನ್ನೇರುಘಟ್ಟ ಮುಖ್ಯ ರಸ್ತೆಯವರೆಗೆ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

ಪರ್ಯಾಯ ಮಾರ್ಗ: 15ನೇ ಕ್ರಾಸ್‌ನಿಂದ ಜೆ.ಡಿ. ಮರದವರೆಗೆ ಸಂಚಾರ ನಿರ್ಬಂಧವಿರುವುದರಿಂದ, ಹೊಸೂರು ರಸ್ತೆ ಕಡೆಗೆ ಸಾಗುವ ವಾಹನ ಸವಾರರು ಕನಕಪುರ ಮುಖ್ಯ ರಸ್ತೆ, ಬನಶಂಕರಿ ಬಸ್ ನಿಲ್ದಾಣ ಮತ್ತು 46ನೇ ಕ್ರಾಸ್ ರಸ್ತೆಯ ಮೂಲಕ ಸಂಚರಿಸಬಹುದು. ಬನ್ನೇರುಘಟ್ಟ ರಸ್ತೆ ಕಡೆಗೆ ಹೋಗುವ ವಾಹನಗಳು ಕನಕಪುರ ಮುಖ್ಯ ರಸ್ತೆಯಲ್ಲಿ ಮುಂದುವರಿದು ಕೋಣನಕುಂಟೆ ಕ್ರಾಸ್ ಅಥವಾ ಎ2ಬಿ (A2B) ಜಂಕ್ಷನ್‌ನಲ್ಲಿ ಎಡ ತಿರುವು ಪಡೆದು ಸಾಗಬಹುದು. ಇನ್ನು ಬಿಪಿಎಲ್ ಅರಕೆರೆ ಮುಖ್ಯ ರಸ್ತೆಯಲ್ಲಿ ಸಂಚರಿಸುವ ವಾಹನಗಳು ಕೊತ್ತನೂರು ದಿಣ್ಣೆ ರಸ್ತೆಯನ್ನು ಪರ್ಯಾಯವಾಗಿ ಬಳಸಬಹುದಾಗಿದೆ.

ಸಾರ್ವಜನಿಕರು ಮತ್ತು ವಾಹನ ಸವಾರರು ಸಂಚಾರ ದಟ್ಟಣೆಯನ್ನು ತಪ್ಪಿಸಲು ಪೊಲೀಸರು ಸೂಚಿಸಿರುವ ಈ ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಕೋರಲಾಗಿದೆ.

ಬಿಗಿ ಭದ್ರತೆ

ಈ ನಡುವೆ, ಯಾವುದೇ ಭದ್ರತಾ ಲೋಪವಾಗದಂತೆ ತಡೆಯಲು ಬೆಂಗಳೂರು ಪೊಲೀಸರು ನಗರದಾದ್ಯಂತ ಭದ್ರತೆಯನ್ನು ಹೆಚ್ಚಿಸಿದ್ದು, ಮೂರು ಪ್ರಮುಖ ಸ್ಥಳಗಳ ಸುತ್ತಮುತ್ತಲಿನ 1 ಕಿ.ಮೀ ವ್ಯಾಪ್ತಿಯನ್ನು ತಾತ್ಕಾಲಿಕ ನೋ-ಫ್ಲೈ ಜೋನ್ ಎಂದು ಘೋಷಿಸಿದ್ದಾರೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಹೊರಡಿಸಿರುವ ಈ ನಿಷೇಧಾಜ್ಞೆಯು ಬೆಳಗ್ಗೆ 7 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಜಾರಿಯಲ್ಲಿರುತ್ತದೆ(ಏಜೆನ್ಸೀಸ್​).