‘ಜನಪ್ರಿಯ ಯೋಜನೆಗಳ ಹೆಸರಲ್ಲಿ ಯೋಜನಾಬದ್ಧ ಅಭಿವೃದ್ಧಿ ಕುಂಠಿತ’

ವಿಚಾರ ಸಂಕಿರಣದಲ್ಲಿ ನ್ಯಾ.ನಾಗಮೋಹನ್ ದಾಸ್ ಅಭಿಮತ

Floral tributes were paid to the portraits of the dignitaries at an event held at Gandhi Bhavan on Friday, organized in the context of the birth centenary celebrations of Ramakrishna Hegde. Justice Nagamohan Das, B. R. Patil, and others were present.
ರಾಮಕೃಷ್ಣ ಹೆಗಡೆ ಜನ್ಮಶತಮೋನೋತ್ಸವದ ಹಿನ್ನೆಲೆಯಲ್ಲಿ ಗಾಂಧಿಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗಣ್ಯರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು. ನ್ಯಾ.ನಾಗಮೋಹನ್ ದಾಸ್, ಬಿ.ಆರ್.ಪಾಟೀಲ್ ಮತ್ತಿತರರಿದ್ದರು.
Published on: 

ಬೆಂಗಳೂರು : ಭಾರತ ಮಾತ್ರವಲ್ಲದೆ ಜಗತ್ತಿನಾದ್ಯಂತ ಯೋಜನಾಬದ್ಧ ಹೂಡಿಕೆ ಮತ್ತು ಅಭಿವೃದ್ಧಿಗಿಂತ ಜನಪ್ರಿಯ ಯೋಜನೆಗಳು ಹಾಗೂ ತಕ್ಷಣದ ಬೆಳವಣಿಗೆಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಯೋಜನೆಯಿಲ್ಲದೆ ವೆಚ್ಚ ಹೆಚ್ಚಾಗುತ್ತಿದ್ದು, ಯೋಜನಾಬದ್ಧ ಅಭವೃದ್ಧಿಯ ಕುಂಠಿತವಾಗುತ್ತಿದೆ ಎಂದು ನ್ಯಾಯಮೂರ್ತಿ ನಾಗಮೋಹನ್ ದಾಸ್ ಹೇಳಿದರು.

ರಾಮಕೃಷ್ಣ ಹೆಗಡೆ ಜನ್ಮ ಶತಮಾನೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗವು ಗಾಂಧಿಭವನದಲ್ಲಿ ಆಯೋಜಿಸಿದ್ದ ವಿಕೇಂದ್ರೀಕರಣ ಹಾಗೂ ಯೋಜನಾಬದ್ಧ ಅಭಿವೃದ್ಧಿ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಸಮಾಜದ ಮೂಲಭೂತ ಅಗತ್ಯಗಳನ್ನು ಪೂರೈಸಲು ಹಾಗೂ ಅಸಮಾನತೆ, ಹಸಿವು, ಅಭದ್ರತೆಯಂತಹ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಯೋಜನಾಬದ್ಧ ಹೂಡಿಕೆ ಮತ್ತು ಅಭಿವೃದ್ಧಿ ಅಗತ್ಯ. ಎಲ್ಲವನ್ನೂ ಮಾರುಕಟ್ಟೆಯ ತೀರ್ಮಾನಕ್ಕೆ ಬಿಟ್ಟರೆ ಸಮಾಜದಲ್ಲಿ ಅನೇಕ ಅನಾಹುತಗಳು ಸಂಭವಿಸುತ್ತವೆ. ಸಮಾಜಕ್ಕೆ, ದೇಶಕ್ಕೆ ಯಾವುದು ಅಗತ್ಯ, ಯಾವುದು ಅನಗತ್ಯ ಎಂಬುದನ್ನು ನಿರ್ಧರಿಸುವ ಹೊಣೆಯನ್ನು ಸಂಪೂರ್ಣವಾಗಿ ಮಾರುಕಟ್ಟೆಗೆ ವಹಿಸಲು ಸಾಧ್ಯವಿಲ್ಲ. ಯಾವುದೇ ಪಕ್ಷದ ಸರ್ಕಾರ ಅಧಿಕಾರದಲ್ಲಿದ್ದರೂ ಸಮಾಜದ ಹಿತದೃಷ್ಟಿಯಿಂದ ಯೋಜನಾಬದ್ಧ ಆರ್ಥಿಕತೆಯನ್ನು ಅನುಸರಿಸಬೇಕು. ಉದಾರೀಕರಣ ಮತ್ತು ಜಾಗತೀಕರಣದ ಪರಿಣಾಮವಾಗಿ ಖಾಸಗಿ ಕಂಪನಿಗಳು ದೇಶದ ವಿವಿಧ ಕ್ಷೇತ್ರಗಳಲ್ಲಿ ವ್ಯಾಪಕವಾಗಿ ವಿಸ್ತರಿಸಿವೆ. ಹಿಂದೆ ನೀರು ಮಾರಾಟದ ವಸ್ತುವಾಗಿರಲಿಲ್ಲ. ಆದರೆ ಇಂದು ಭಾರತದಲ್ಲಿ ನೂರಾರು ಕಂಪನಿಗಳು ಬಾಟಲಿ ನೀರನ್ನು ಮಾರಾಟ ಮಾಡುತ್ತಿವೆ. ವರ್ಷಕ್ಕೆ ಸುಮಾರು ಒಂದು ಲಕ್ಷ ಕೋಟಿ ರೂ. ವಹಿವಾಟು ನಡೆಯುತ್ತಿದೆ. ಜಾಗತೀಕರಣದ ಪರಿಣಾಮವಾಗಿ ಕಂಪನಿಗಳ ವ್ಯಾಪ್ತಿ ಗಡಿಗಳನ್ನು ಮೀರಿ ವಿಸ್ತರಿಸುತ್ತಿದೆ. ಇದರಿಂದ ದೇಶಗಳ ಸಾರ್ವಭೌಮತೆ ಮತ್ತು ಸರ್ಕಾರಗಳ ನಿಯಂತ್ರಣದ ವ್ಯಾಪ್ತಿ ಕುಸಿಯುವ ಸವಾಲು ಎದುರಾಗಿದೆ ಎಂದು ನಾಗಮೋಹನ್ ದಾಸ್ ಆತಂಕ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಅಧ್ಯಕ್ಷ ಹಾಗೂ ಶಾಸಕ ಬಿ.ಆರ್.ಪಾಟೀಲ್, ಸದಸ್ಯ ಡಾ.ಟಿ.ಎನ್.ಪ್ರಕಾಶ್ ಕಮ್ಮರಡಿ, ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಡಾ.ಎಸ್.ಎಸ್. ಮಿನಾಕ್ಷಿ ಸುಂದರಂ, ಮುಖಂಡರಾದ ಡಿ.ಆರ್.ಪಾಟೀಲ್, ಸಿ.ನಾರಾಯಣಸ್ವಾಮಿ, ಮಮತ ನಿಚ್ಚಾನಿ, ವಿ.ವೈ.ೋರ್ಪಡೆ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ ಮತ್ತಿತರರು ಪಾಲ್ಗೊಂಡಿದ್ದರು.

Dignitaries who participated in the seminar organized on the occasion of Ramakrishna Hegde's birth centenary.
ರಾಮಕೃಷ್ಣ ಹೆಗಡೆ ಜನ್ಮ ಶತಮಾನೋತ್ಸವ ಹಿನ್ನೆಲೆಯಲ್ಲಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದ ಗಣ್ಯರು

‘ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಿ’

ಅಧಿಕಾರ ವಿಕೇಂದ್ರಿಕ್ರರಣ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸಲು ಸ್ಥಳೀಯ ಸಂಸ್ಥೆಗಳಿಗೆ ಕಾಲಕಾಲಕ್ಕೆ ಚುನಾವಣೆಗಳು ನಡೆಯಬೇಕು. ಆದರೆ ಕಳೆದ ಕೆಲ ವರ್ಷಗಳಿಂದ ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯದಿರುವುದು ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿದೆ. ಸರ್ಕಾರ ಕೂಡಲೇ ಭಾಕಿ ಉಳಿದಿರುವ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕು ಎಂದು ನ್ಯಾ.ನಾಗಮೋಹನ್ ದಾಸ್ ಒತ್ತಾಯಿಸಿದ್ದಾರೆ.