ಟೌನ್‌ಶಿಪ್ ವಿರೋಧಿಸಿ ಪಿಂಡ ಪ್ರದಾನ

'Pinda Pradana' ritual performed in protest against the township.
'Pinda Pradana' ritual performed in protest against the township.
Published on
ಬಿಡದಿ:ಸಮಗ್ರ ಉಪ ನಗರ ಯೋಜನೆಯ ಪರ ಹಾಗೂ ವಿರೋಧದ ಪ್ರತಿಭಟನೆಗಳು ಬುಧವಾರವೂ ಮುಂದುವರಿದವು.
ಯೋಜನೆ ವಿರೋಧಿಸುತ್ತಿರುವ ರೈತರು ಪಿಂಡ ಪ್ರದಾನ ಮಾಡಿದರೆ, ಯೋಜನೆ ಪರವಾಗಿರುವ ರೈತರು ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ಈ ಯೋಜನೆ ವಿರೋಧಿಸಿ 500ಕ್ಕೂ ಹೆಚ್ಚು ದಿನಗಳಿಂದ ರೈತರು ಬೈರಮಂಗಲ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮಂಡಲಹಳ್ಳಿಯಲ್ಲಿ ಎರಡು ದಿನಗಳ ಹಿಂದೆ ಸರ್ವೇ ವಿಚಾರವಾಗಿ ನಡೆದ ಗಲಾಟೆಯ ನಂತರ ಹೋರಾಟದ ಕಾವು ಹೆಚ್ಚಾಗಿದೆ.
ಇನ್ನು ಯೋಜನೆಯ ಪರವಾಗಿ ನಡೆಯುತ್ತಿರುವ ರೈತರ ಹೋರಾಟವು ದಿನದಿಂದ ದಿನಕ್ಕೆ ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದೆ.
ಪಿಂಡ ಪ್ರದಾನದ ಅಣುಕು: ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಸರ್ಕಾರಕ್ಕೆ ಪಿಂಡ ಪ್ರದಾನ ಮಾಡಿ ನಮ್ಮ ಪಾಲಿಗೆ ಸರ್ಕಾರ ಸತ್ತುಹೋಗಿದೆ ಎಂದು ಘೋಷಣೆ ಕೂಗಿದರು. ಹಾರೋಹಳ್ಳಿ- ಬಿಡದಿ ಮುಖ್ಯ ರಸ್ತೆಯಲ್ಲಿ ಪಿಂಡ ಪ್ರದಾನದ ಕಲ್ಪಿತ ಪ್ರದರ್ಶನ ಮಾಡಿ ರೈತರ ಪಾಲಿಗೆ ಸರ್ಕಾರ ಇಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಶಾಸಕ ಎಚ್.ಸಿ.ಬಾಲಕೃಷ್ಣ ವಿರುದ್ಧ ರೈತ ಮಹಿಳೆಯರು ಆಕ್ರೋಶ ಹೊರಹಾಕಿದರು.
ರೈತರ ಪ್ರತಿಭಟನೆ ಜೆಡಿಎಸ್ ಕೃಪಾಪೋಷಿತ ನಾಟಕ ಎಂಬ ಬಾಲಕೃಷ್ಣ ಹೇಳಿಕೆಗೆ ಕಿಡಿಕಾರಿದ ಮಹಿಳೆಯರು, ಬಾಲಕೃಷ್ಣ ರೈತ ಮಹಿಳೆಯರಿಗೆ ಅವಮಾನ ಮಾಡಿದ್ದಾರೆ. ಸ್ವಾಭಿಮಾನದಿಂದ ಜೀವನ ಮಾಡುತ್ತಿರುವ ಮಹಿಳೆಯರನ್ನು ನಾಟಕ ಮಾಡುವವರು ಅಂದಿದ್ದಾರೆ. ಕೂಡಲೇ ಅವರು ರೈತ ಮಹಿಳೆಯರ ಕ್ಷಮೆ ಕೇಳಬೇಕು, ಇಲ್ಲವಾದರೆ ಬಾಲಕೃಷ್ಣ ಮನೆ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಈ ವೇಳೆ ಸುಮಾ, ಜಯಮ್ಮ, ಭಾಗ್ಯ ನಾಗರಾಜ್, ಸುಜಾತ, ಸುಮಾ ಅಶ್ವತ್ಥ್, ನೇತ್ರಾ, ಜ್ಯೋತಿ, ಗೀತಾ, ಸುಮಿತ್ರಮ್ಮ, ಭಾಗ್ಯಮ್ಮ, ರಮ್ಯಾ, ಪ್ರೇಮ ಕುಮಾರಿ, ಅನಿತಾ, ಮಂಗಳಾ, ತ್ರಿವೇಣಿ ಇದ್ದರು.
ಮತ್ತೊಂದೆಡೆ ಯೋಜನೆ ಪರವಾಗಿ ಬೈರಮಂಗಲದಲ್ಲೇ ಪ್ರತಿಭಟನೆ ನಡೆಸುತ್ತಿರುವ ರೈತರು, ಮತ್ತೆ ನಾಲ್ಕು ಗ್ರಾಮಗಳಲ್ಲಿ ಭೂ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ ಎಂದು ಸಿಹಿ ಹಂಚಿ ಸಂಭ್ರಮಿಸಿದರು. ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ ಎಂದು ಮಂಗಳವಾರ ರಾತ್ರಿಯೆ ಆಯಾ ಗ್ರಾಮಗಳಲ್ಲಿ ಸಂಭ್ರಮಿಸಿದ್ದ ಯೋಜನೆ ಪರವಿರುವ ರೈತರು, ಬುಧವಾರ ಬೆಳಗ್ಗೆ ಹೋರಾಟ ನಡೆಸುತ್ತಿದ್ದ ಸ್ಥಳದಲ್ಲಿ ಸಿಹಿ ಹಂಚಿ, ಸಿಎಂ ಡಿ.ಕೆ.ಶಿವಕುಮಾರ್, ಶಾಸಕ ಬಾಲಕೃಷ್ಣ ಹಾಗೂ ಜಿಬಿಡಿಎ ಅಧ್ಯಕ್ಷ ಗಾಣಕಲ್ ನಟರಾಜ್ ಅವರ ಪರವಾಗಿ ಘೋಷಣೆ ಕೂಗಿ ಸಂಭ್ರಮಾಚರಣೆ ಮಾಡಿದರು.
ಕೈ ಮುಖಂಡ ಹೊಸೂರು ರಾಜಣ್ಣ ಮಾತನಾಡಿ, ನಮ್ಮ ಹೋರಾಟ ಯಾರ ವಿರುದ್ಧವೂ ಅಲ್ಲ. ನಮ್ಮ ಬದುಕಿನ ಹೋರಾಟ. ಇದೀಗ 4 ಗ್ರಾಮಗಳಿಗೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಇನ್ನೂ 2 ಗ್ರಾಮಗಳು ಬಾಕಿ ಇದ್ದು ಆ ಗ್ರಾಮಗಳಿಗೂ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಬೇಕು. 20 ವರ್ಷದ ನಮ್ಮ ಹೋರಾಟದ ಫಲವಾಗಿ ಇಂದು ನಮಗೆ ಈ ರೆಡ್ ಜೋನ್ ನಿಂದ ಮುಕ್ತಿಸಿಕ್ಕಿದೆ ಎಂದರು.
ಬೈರಮಂಗಲ ವಿ.ಎಸ್.ಎಸ್.ಎನ್ ಅಧ್ಯಕ್ಷ ಮಂಜುನಾಥ್, ಮಾಜಿ ಅಧ್ಯಕ್ಷ ಸಿದ್ದರಾಜು ಮುಖಂಡರಾದ ಶಿವರಾಮು, ಅಪ್ಪಾಜಿಗೌಡ, ಯೋಗಾನಂದ, ಎಚ್.ಎಂ ನಾಗರಾಜು, ನರಸಿಂಹರಾಜು ಸೇರಿ ಹಲವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net