ವಿಮಾನದಲ್ಲಿ ಪಾರಿವಾಳದ ಹಾರಾಟ: ಇಂಡಿಗೋ ಸಂಕಷ್ಟ ಹೆಚ್ಚಿಸಿದ ವಿಚಿತ್ರ ಘಟನೆ! IndiGo Flight

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಬೆಂಗಳೂರು: ದೇಶಾದ್ಯಂತ ಇಂಡಿಗೋ ವಿಮಾನಗಳು (IndiGo Flight) ವಿಳಂಬ ಹಾಗೂ ರದ್ದತಿಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಸಂಸ್ಥೆಯ ಮತ್ತೊಂದು ವಿಮಾನದಲ್ಲಿ ನಡೆದ ಅಸಾಮಾನ್ಯ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಮಂಗಳವಾರ ಬೆಂಗಳೂರು–ವಡೋದರಾ ವಿಮಾನದಲ್ಲಿ ಟೇಕ್‌ ಆಫ್‌ಗೆ ಕೆಲವೇ ಕ್ಷಣಗಳು ಬಾಕಿಯಿರುವಾಗ, ಪಾರಿವಾಳವೊಂದು (Pigeon) ಅಕಸ್ಮಿಕವಾಗಿ ವಿಮಾನದೊಳಗೆ ನುಗ್ಗಿದ್ದು, ಇದು ಸ್ವಲ್ಪ ಸಮಯದವರೆಗೆ ಪ್ರಯಾಣಿಕರು ಮತ್ತು ಸಿಬ್ಬಂದಿಗಳಲ್ಲಿ ಗೊಂದಲವನ್ನುಂಟುಮಾಡಿತು.
ವೈರಲ್‌ ಆಗಿರುವ ದೃಶ್ಯದಲ್ಲಿ, ಪಾರಿವಾಳವು ಹೊರಬರಲು ದಾರಿಕಾಣದೆ ಪ್ರಯಾಣಿಕರ ತಲೆಯ ಮೇಲೆ ಹಾರಾಟ ನಡೆಸುತ್ತಿದೆ. ಕೆಲವು ಪ್ರಯಾಣಿಕರು ಅದನ್ನು ಪಕ್ಕಕ್ಕೆ ಓಡಿಸಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದಾಗಿದೆ. ಸಿಬ್ಬಂದಿ ಪರಿಸ್ಥಿತಿಯನ್ನು ಶಾಂತಗೊಳಿಸಲು ಎಷ್ಟೇ ಪ್ರಯತ್ನಿಸುತ್ತಿದ್ದರೂ, ಕ್ಷಣಕ್ಷಣಕ್ಕೂ ಪಾರಿವಾಳದ ಚಟುವಟಿಕೆಗಳು ಎಲ್ಲರ ಗಮನಸೆಳೆಯುತ್ತಿದ್ದವು.
ಘಟನೆಯ ನಂತರ ವಿಮಾನವು ನಿಗದಿತ ಸಮಯಕ್ಕಿಂತ ಸ್ವಲ್ಪ ತಡವಾಗಿ ಹಾರಾಟ ಮುಂದುವರಿಸಿಕೊಂಡಿದೆ ಎಂದು ಮೂಲಗಳು ತಿಳಿಸಿವೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋವನ್ನು ಡಿಜಿಟಲ್ ಸೃಷ್ಟಿಕರ್ತರೊಬ್ಬರು ರೆಕಾರ್ಡ್ ಮಾಡಿದ್ದು, ನಂತರ ಅದನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ವಿಮಾನದಲ್ಲಿ ಅಚ್ಚರಿಯ ಅತಿಥಿ... ಸಂತೋಷ ಮತ್ತು ಹಾಸ್ಯದ ಕ್ಷಣ. ಆನಂದಿಸಿದೆ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್​ ಮಾಡಿದ್ದಾರೆ.

ಇಂಡಿಗೋ ವಿಮಾನ ರದ್ದತಿಗಳ ಬಗ್ಗೆ

ಇತ್ತೀಚಿನ ದಿನಗಳಲ್ಲಿ ಇಂಡಿಗೋ ಏರ್‌ಲೈನ್‌ಗಳು ದೇಶಾದ್ಯಂತ ಗಣನೀಯ ಸಂಖ್ಯೆಯಲ್ಲಿ ವಿಮಾನ ರದ್ದತಿಗಳು ಮತ್ತು ವಿಳಂಬಗಳನ್ನು ಎದುರಿಸುತ್ತಿವೆ. ತಾಂತ್ರಿಕ ಸಮಸ್ಯೆಗಳು, ಸಿಬ್ಬಂದಿಯ ಅನುಪಸ್ಥಿತಿ, ವಾತಾವರಣದ ಅಸಮರ್ಪಕತೆ ಹಾಗೂ ಕಾರ್ಯಾಚರಣೆಯ ಸವಾಲುಗಳು ಈ ಸ್ಥಿತಿಗೆ ಪ್ರಮುಖ ಕಾರಣ ಎಂದು ಮೂಲಗಳು ತಿಳಿಸಿವೆ.
ಈ ಅಡತಡೆಗಳಿಂದ ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಗಂಟೆಗಳಷ್ಟು ಕಾಲ ಕಾಯಬೇಕಾದ ಪರಿಸ್ಥಿತಿ ಉಂಟಾಗಿದ್ದು, ಹಲವಾರು ಪ್ರಯಾಣಿಕರು ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಇನ್ನು ರದ್ದತಿಗಳ ಪರಿಣಾಮವಾಗಿ ಮರುಬುಕಿಂಗ್ ಮತ್ತು ಮರುಪಾವತಿ ಪ್ರಕ್ರಿಯೆಯಲ್ಲಿ ವಿಳಂಬ ಉಂಟಾಗಿದ್ದು, ಪ್ರಯಾಣಿಕರು ಹೆಚ್ಚುವರಿ ತೊಂದರೆಯನ್ನು ಅನುಭವಿಸುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಹಾಗಾಗಿ ಸೇವಾ ಸುಧಾರಣೆಗೆ ಇಂಡಿಗೋ ಕ್ರಮ ಕೈಗೊಳ್ಳುತ್ತಿರುವುದಾಗಿ ಕಂಪನಿ ತಿಳಿಸಿದೆ.
ಡಿಸೆಂಬರ್ 7 ರಂದು, ಇಂಡಿಗೋ ಸುಮಾರು 650 ವಿಮಾನಗಳನ್ನು ರದ್ದುಗೊಳಿಸಿತು. ಅದರ ನಿಗದಿತ 2,300 ಸೇವೆಗಳಲ್ಲಿ ಕೇವಲ 1,650 ವಿಮಾನಗಳನ್ನು ಮಾತ್ರ ಕಾರ್ಯ ನಿರ್ವಹಿಸುತ್ತಿವೆ. ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್, ಕೋಲ್ಕತ್ತಾ ಮತ್ತು ಚೆನ್ನೈ ವಿಮಾನ ನಿಲ್ದಾಣಗಳು ಹೆಚ್ಚು ಪರಿಣಾಮ ಬೀರಿದ್ದು, ಹಲವಾರು ಪ್ರಯಾಣಿಕರು ಊರನ್ನು ತಲುಪದೇ ಕಣ್ಣಿರು ಹಾಕುತ್ತಾ ನಿಂತಿರುವ ದೃಶ್ಯಗಳು ವೈರಲ್​ ಆಗಿವೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net