ಸಾಧನೆಗೆ ದೈಹಿಕ ನ್ಯೂನತೆ ಎಂದಿಗೂ ಅಡ್ಡಿಯಾಗದು

Physical disability
Physical disability
Published on
ಲೇಖಕರು, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು
ಶಾಲಾ ಮಕ್ಕಳಿಗೆ ಆಯೋಜಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸುವ ಸಮಾರಂಭ ಅದು. ಗಣ್ಯರೆಲ್ಲ ವೇದಿಕೆಯಲ್ಲಿ ಆಸೀನರಾಗಿ ಮಕ್ಕಳಿಗೆ ಬಹುಮಾನ, ಪ್ರಶಸ್ತಿ ಪತ್ರ ಕೊಟ್ಟು, ನಾಲ್ಕು ಒಳ್ಳೆಯ ಮಾತುಗಳನ್ನು ಆಡಬೇಕೆಂದು ಕಾತರರಾಗಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಭಾಷಣ ಸ್ಪರ್ಧೆಯಲ್ಲಿ ವಿಜೇತಳಾದ ಹುಡುಗಿಯೊಬ್ಬಳು ವೇದಿಕೆ ಹತ್ತಿ ಭಾಷಣ ಮಾಡಲು ಪ್ರಾರಂಭಿಸಿದಳಷ್ಟೆ ಸಭೆ ಸ್ತಬ್ಧವಾಯಿತು. ನಿರರ್ಗಳವಾಗಿ ಆಕೆ ತನ್ನ ಚಿಕ್ಕ, ಚೊಕ್ಕ ಭಾಷಣ ಮಾಡಿ ಮುಗಿಸಿದಾಗ ಸಭೆಯಲ್ಲಿದ್ದವರೆಲ್ಲರೂ ಕರತಾಡನದ ಮೂಲಕ ಆ ಪುಟ್ಟ ಹುಡುಗಿಯನ್ನು ಅಭಿನಂದಿಸಿದರು.
ಆಕೆ ಅಷ್ಟು ಚೆನ್ನಾಗಿ ಭಾಷಣ ಮಾಡುತ್ತಾಳೆಂದು ಯಾರೂ ಊಹಿಸಿರಲಿಲ್ಲ. ಯಾಕೆಂದರೆ ಭಾಷಣ ಮಾಡಲು ಆಕೆ ಎದ್ದು ವೇದಿಕೆಯತ್ತ ಹೋಗುವಾಗ ಕೆಲವು ತುಂಟ ಹುಡುಗರು ಹೋ... ಕುಳ್ಳಿ, ಡುಮ್ಮಿ ಎಂದೆಲ್ಲ ಹೇಳಿ ಛೇಡಿಸಲು ಶುರು ಮಾಡಿದ್ದರು. ಆದರೆ ಹುಡುಗಿಯ ಭಾಷಣಕ್ಕೆ ಬಂದ ಚಪ್ಪಾಳೆಗಳ ಸುರಿಮಳೆ ನೋಡಿ ಆಕೆಯನ್ನು ಛೇಡಿಸಿದವರ ಮೊಗದಲ್ಲಿ ಪಶ್ಚಾತ್ತಾಪದ ಭಾವನೆ ಮೂಡಿತ್ತು. ಅಯ್ಯೋ ಈಕೆಯನ್ನು ಛೇಡಿಸಬಾರದಿತ್ತು ಎಂದೆನಿಸಿತ್ತು ಅವರಿಗೆ. ಇದೊಂದು ಉದಾಹರಣೆಯಷ್ಟೇ. ಇಂದಿನ ದಿನಗಳಲ್ಲಿ ಬಾಡಿ ಶೇಮಿಂಗ್, ಅಂದರೆ ವ್ಯಕ್ತಿಯ ದೇಹದ ರೂಪ, ಗಾತ್ರ, ಬಣ್ಣ, ಎತ್ತರ, ತೂಕ, ಅಂಗವೈಕಲ್ಯ, ಕೂದಲು, ಚರ್ಮ ಇತ್ಯಾದಿಗಳ ಬಗ್ಗೆ ಹಾಸ್ಯ, ಟೀಕೆ ಅಥವಾ ಅವಮಾನ ಮಾಡುವ ವರ್ತನೆ ಅಲ್ಲಲ್ಲಿ ಬೆಳಕಿಗೆ ಬರುತ್ತಿರುತ್ತಿವೆ. ಇಂತಹ ವರ್ತನೆಗಳಿಂದ ಮನ ನೊಂದು ಅನೇಕರು ಆತ್ಮಹತ್ಯೆ ಮಾಡಿಕೊಳ್ಳುವ, ಖಿನ್ನತೆಗೆ ಜಾರುವ ಘಟನೆಗಳೂ ನಡೆಯುತ್ತಿರುತ್ತವೆ.
ನೀನು ತುಂಬಾ ದಪ್ಪ ಇದ್ದೀಯಾ, ತೆಳ್ಳಗಿದ್ದೀಯಾ, ಕಪ್ಪಗಿದ್ದೀಯಾ. ನಿನ್ನ ಹಲ್ಲು ತುರೆಮಣೆಯಂತೆ ಇದೆಯಲ್ಲ. ಹೀಗೆಲ್ಲ ಕುಹಕ ಮಾತುಗಳಿಂದ ವ್ಯಕ್ತಿಯ ಆತ್ಮವಿಶ್ವಾಸ ಕುಗ್ಗುವುದು, ಮನಸ್ಸು ಒತ್ತಡಕ್ಕೆ ಒಳಗಾಗುವುದು, ಖಿನ್ನತೆಗೊಳಗಾಗಿ ಸಾಮಾಜಿಕವಾಗಿ ದೂರವುಳಿಯುವುದು, ಅನಾರೋಗ್ಯಕ್ಕೀಡಾಗುವುದು ಹೀಗೆ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಹುಟ್ಟುವಾಗಲೇ ತೆಳ್ಳಗೆ, ಬೆಳ್ಳಗೆ, ಮುದ್ದಾಗಿ ಹುಟ್ಟಬೇಕು ಎಂಬ ನಿರೀಕ್ಷೆ ಮಾಡಲು ಖಂಡಿತ ಸಾಧ್ಯವಿಲ್ಲ. ಪ್ರಕೃತಿ ಪ್ರತಿಯೊಬ್ಬರನ್ನೂ ಒಂದೇ ಮಾದರಿಯಲ್ಲಿ ಸೃಷ್ಟಿಸಿಲ್ಲ. ಪ್ರತಿಯೊಬ್ಬ ಮನುಷ್ಯ ವಿಭಿನ್ನ ದೇಹರಚನೆ, ಚರ್ಮದ ಬಣ್ಣ, ಎತ್ತರ, ತೂಕ ಮತ್ತು ಮುಖದ ಆಕಾರದೊಂದಿಗೆ ಹುಟ್ಟುತ್ತಾನೆ. ಆದರೆ ಇಂದಿನ ದಿನಗಳಲ್ಲಿ ಈ ಸಹಜ ವೈವಿಧ್ಯವನ್ನು ಒಪ್ಪಿಕೊಳ್ಳುವ ಮನೋಭಾವ ಎಲ್ಲರಲ್ಲೂ ಇಲ್ಲವಾಗಿದೆ. ಅವರವರು ಹೇಗೆ ಇರುತ್ತಾರೋ ಹಾಗೆಯೇ ಒಪ್ಪಿಕೊಳ್ಳುವ ವಿಶಾಲ ಮನೋಭಾವ ಬೆಳೆಸಿಕೊಳ್ಳಬೇಕಾಗಿದೆ.
ಶಾಲೆ, ಕಾಲೇಜು, ಕೆಲಸದ ಸ್ಥಳ, ಸಮಾರಂಭ ಹೀಗೆ ಎಲ್ಲೆಡೆ ದೇಹದ ಆಕಾರ ಮತ್ತು ಬಣ್ಣದ ಆಧಾರದ ಮೇಲೆ ವ್ಯಕ್ತಿಯನ್ನು ಅಳೆಯುವ ಪ್ರವೃತ್ತಿ ಹೆಚ್ಚಾಗಿದೆ. ಇಂತಹ ಮಾತುಗಳನ್ನು ತಮಾಷೆಗೆ ಹೇಳಿದರೂ ಅವು ವ್ಯಕ್ತಿಯ ಮನಸ್ಸಿನ ಮೇಲೆ ಆಳವಾದ ಗಾಯ ಮಾಡುತ್ತವೆ. ದೈಹಿಕ ಲಕ್ಷಣಗಳನ್ನಿಟ್ಟುಕೊಂಡು ಅವಮಾನಿಸುವುದು ಅಥವಾ ಹೀನಾಯವಾಗಿ ಮಾತನಾಡುವುದು ಸರಿಯಲ್ಲ. ಹಿರಿಯರು ಮಾತ್ರವಲ್ಲದೆ ಮಕ್ಕಳಲ್ಲೂ ಇಂತಹ ಅಭ್ಯಾಸಗಳನ್ನು ಕಾಣುತ್ತೇವೆ. ಶಾಲೆಯ ತರಗತಿಯಲ್ಲಿ ಸಹಪಾಠಿಗಳೊಂದಿಗೆ ತಮಾಷೆಗೆ ಹೇಳುವ ಮಾತು ಮಕ್ಕಳಿಗೆ ಮಾನಸಿಕ ಆಘಾತವನ್ನು ನೀಡುವ ಸಾಧ್ಯತೆ ಹೆಚ್ಚಿರುತ್ತದೆ. ತಮ್ಮದೇ ದೇಹದ ಬಗ್ಗೆ ಹೀನಾಭಿಪ್ರಾಯ ಬೆಳೆಸಿಕೊಳ್ಳುತ್ತಾರೆ. ಸಾಮಾಜಿಕವಾಗಿ ಎಲ್ಲರಿಂದಲೂ ದೂರ ಉಳಿಯಲು ಪ್ರಯತ್ನಿಸುತ್ತಾರೆ. ಹಾಗಾಗಿ ಬೆಳೆಯುವ ಮಕ್ಕಳಿಗೆ ಈ ಬಗ್ಗೆ ಸರಿಯಾದ ಮಾಹಿತಿ, ತಿಳಿವಳಿಕೆ ನೀಡಬೇಕು. ಎಲ್ಲರನ್ನು ಸಮಾನವಾಗಿ, ಗೌರವದಿಂದ ಕಾಣಲು ಕಲಿಸಿಕೊಡಬೇಕು.
ಪ್ರಕೃತಿದತ್ತವಾದ ದೇಹವನ್ನು ಪ್ರತಿಯೊಬ್ಬರೂ ಸಹಜವಾಗಿ ಒಪ್ಪಿಕೊಳ್ಳುವುದು ಅವಶ್ಯ. ದೇಹದ ಬಣ್ಣ ಅಥವಾ ಆಕಾರ ವ್ಯಕ್ತಿಯ ಸಾಮರ್ಥ್ಯವನ್ನು ನಿರ್ಧರಿಸುವುದಿಲ್ಲ. ಬುದ್ಧಿಮತ್ತೆ, ಮಾನವೀಯತೆ, ಶ್ರಮ, ಸಂಸ್ಕಾರ ಇವೇ ವ್ಯಕ್ತಿಯ ನಿಜವಾದ ಮೌಲ್ಯ ಹಾಗೂ ವ್ಯಕ್ತಿತ್ವವನ್ನು ತೋರಿಸುತ್ತವೆ. ದೇಹದ ವೈಕಲ್ಯವು ವ್ಯಕ್ತಿಯ ಬುದ್ಧಿ, ಜ್ಞಾನ, ಸಾಧನೆಗೆ ಅಡ್ಡಿಯಾಗುವುದಿಲ್ಲ. ಇಂದಿನ ದಿನಗಳಲ್ಲಿ ಅದೆಷ್ಟೋ ವಿಕಲಾಂಗರು ಸಾಕಷ್ಟು ಸಾಧನೆ ಮಾಡಿದ್ದಾರೆ. ತಮ್ಮ ಪರಿಶ್ರಮದಿಂದ ಬದುಕನ್ನು ಕಟ್ಟಿಕೊಂಡಿದ್ದಾರೆ. ಮೌಂಟ್ ಎವರೆಸ್ಟ್ ಏರಿದ್ದಾರೆ, ಉದ್ಯಮ ಕಟ್ಟಿ ನೂರಾರು ಜನರಿಗೆ ಉದ್ಯೋಗ ನೀಡಿದ್ದಾರೆ, ಇತರರಿಗೆ ಪ್ರೇರಣೆ, ಮಾದರಿಯಾಗಿದ್ದಾರೆ.
ಪುರಾಣದ ಅಷ್ಟಾವಕ್ರನಿಗೆ ಹುಟ್ಟಿನಿಂದಲೇ ದೇಹದ 8 ಕಡೆ ಊನವಿತ್ತು. ಆ ಕಾರಣದಿಂದಲೇ ಆ ಹೆಸರು ಬಂತು. ಆತನ ದೇಹವನ್ನು ನೋಡಿ ಜನ ಹಾಸ್ಯ ಮಾಡುತ್ತಿದ್ದರು. ಆದರೆ ಅವನಲ್ಲಿ ಅಪಾರ ಜ್ಞಾನವಿತ್ತು. ಜನಕ ಮಹಾರಾಜನ ಅರಮನೆಯಲ್ಲಿದ್ದ ಮಹಾನ್ ಪಂಡಿತರನ್ನೆಲ್ಲಾ ಅಷ್ಟಾವಕ್ರ ತನ್ನ ತರ್ಕಶಕ್ತಿಯಿಂದ ಸೋಲಿಸಿದ. ದೇಹದ ವೈಕಲ್ಯ ಇದ್ದರೂ ಜ್ಞಾನ ಮತ್ತು ಆತ್ಮವಿಶ್ವಾಸ ಅವನನ್ನು ಮಹಾನ್ ಋಷಿಯನ್ನಾಗಿ ಮಾಡಿತು. ಅವನಲ್ಲಿದ್ದ ಜ್ಞಾನ ಇಂದಿಗೂ ಆತನ ಹೆಸರನ್ನು ಅಜರಾಮರ ಆಗಿಸಿದೆ. ಹಾಗೆಯೇ ಧೃತರಾಷ್ಟ ಜನ್ಮತಃ ಅಂಧನಾಗಿದ್ದರೂ ಹಸ್ತಿನಾಪುರದ ರಾಜನಾಗಿ ಆಳ್ವಿಕೆ ನಡೆಸಿದ. ದೃಷ್ಟಿ ಇರದಿದ್ದರೂ ಆಡಳಿತ ಜವಾಬ್ದಾರಿ ನಿರ್ವಹಿಸುವ ಸಾಮರ್ಥ್ಯವಿತ್ತು. ದೈಹಿಕ ನ್ಯೂನತೆಗಳು ನಾಯಕತ್ವಕ್ಕೆ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಆತ ಉತ್ತಮ ಉದಾಹರಣೆ.
ದೈಹಿಕವಾಗಿ ಹೇಗೇ ಇರಲಿ, ವಿಶೇಷಚೇತನರನ್ನು ಹೀನವಾಗಿ ನೋಡುವ ಮನೋಭಾವವನ್ನು ತ್ಯಜಿಸಬೇಕು. ಅವರೂ ತಮ್ಮ ಸಾಮರ್ಥ್ಯವನ್ನು ಗುರುತಿಸಿಕೊಂಡು ಎಲ್ಲರಂತೆ ಆತ್ಮವಿಶ್ವಾಸದಿಂದ ಬದುಕುವ ಹಕ್ಕು ಹೊಂದಿದ್ದಾರೆ. ಸರಿಯಾದ ಪ್ರೋತ್ಸಾಹ, ಆರೈಕೆ ಇಲ್ಲದೆ ವಿಶೇಷಚೇತನರಿಗೆ ಸಮಾಜದಲ್ಲಿ ಮುಂದುವರೆಯಲು ಸಾಧ್ಯವಾಗದಿರಬಹುದು. ಅದನ್ನು ಗಮನದಲ್ಲಿರಿಸಿಕೊಂಡು ಅಂತಹ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಸದುದ್ದೇಶದಿಂದ ಮಂಗಳೂರಿನಲ್ಲಿ ಎಸ್​ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಯನ್ನು ಶ್ರೀಕ್ಷೇತ್ರದ ವತಿಯಿಂದ ನಿರ್ವಹಿಸಲಾಗುತ್ತಿದೆ.
ಈ ಶಾಲೆಯನ್ನು 1981ರಲ್ಲಿ ಮಂಗಳೂರಿನ ವಾಮಂಜೂರಿನಲ್ಲಿ ಮೋಹಿನಿ ಅಪ್ಪಾಜಿ ನಾಯ್ಕ್​​ ಅವರ ಮುಂದಾಳತ್ವದಲ್ಲಿ ಸ್ಥಾಪಿಸಲಾಯಿತು. 2000ವರೆಗೆ ಸಂಸ್ಥೆಯನ್ನು ಮುನ್ನಡೆಸಿ, ಬಳಿಕ ಅವರು ಎಸ್​ಡಿಎಂ ಸಂಸ್ಥೆ ಅಧೀನಕ್ಕೆ ಒಪ್ಪಿಸಿದರು. ಇದೀಗ ಈ ಸಂಸ್ಥೆ 25 ಸಂವತ್ಸರಗಳನ್ನು ಪೂರೈಸಿದ್ದು, ಇತ್ತೀಚೆಗಷ್ಟ್ಟೇ ರಜತಮಹೋತ್ಸವ ಆಚರಿಸಲಾಯಿತು.
ವಿಶೇಷ ಸಾಮರ್ಥ್ಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಮಹಾದಾಸೆಯಿಂದ, ಸಾಮಾನ್ಯ ಮಕ್ಕಳಂತೆ ಉತ್ತಮ ಜೀವನ ನಡೆಸಬೇಕೆಂಬ ಪರಿಕಲ್ಪನೆಯಿಂದ, ಪ್ರಾರಂಭವಾದ ಈ ಸಂಸ್ಥೆ ಪರಿಣಾಮಕಾರಿ ಸಾಧನೆ ಮಾಡುತ್ತ ಬಂದಿದೆ. ಸಮನ್ವಯ ಶಿಕ್ಷಣದ ಮೂಲಕಲ್ಪನೆಯೊಂದಿಗೆ ಕಾರ್ಯಾಚರಿಸುತ್ತಿರುವ ಈ ಶಾಲೆ ಏಷ್ಯಾ ಖಂಡದಲ್ಲೇ ಮೊದಲನೆಯದಾಗಿದೆ. ಪ್ರಸ್ತುತ ಶ್ರವಣದೋಷ, ದೈಹಿಕ ನ್ಯೂನತೆ, ಪಾರ್ಶ್ವ ದೃಷ್ಟಿ ದೋಷ, ಸಾಧಾರಣ ಬುದ್ಧಿಮಾಂದ್ಯತೆ, ಕಲಿಕಾ ನ್ಯೂನತೆ ಹಾಗೂ ಆಟಿಸಂನಿಂದ ಬಳಲುತ್ತಿರುವ ಭಿನ್ನ ಸಾಮರ್ಥ್ಯದ ಮಕ್ಕಳನ್ನು ಸಾಮಾನ್ಯ ವಿದ್ಯಾರ್ಥಿಗಳೊಂದಿಗೆ ಸಮನ್ವಯಗೊಳಿಸಿ, ರಾಜ್ಯ ಪಠ್ಯಕ್ರಮದೊಂದಿಗೆ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ನೀಡಲಾಗುತ್ತಿದೆ.
ಈ ಶಾಲಾ ವಿದ್ಯಾರ್ಥಿಗಳು ರಾಜ್ಯ, ರಾಷ್ಟಮಟ್ಟದ ಸಾಧನೆ ಮಾಡಿದ್ದು, ಶಿಕ್ಷಣ ಇಲಾಖೆ ಮತ್ತು ಸಂಸ್ಥೆ ವತಿಯಿಂದ ಜಿಲ್ಲಾ, ರಾಜ್ಯಮಟ್ಟದ ಕಾರ್ಯಾಗಾರ ಹಾಗೂ ವಿವಿಧ ಕಾರ್ಯಕ್ರಮಗಳನ್ನು ನಡೆಸುತ್ತ ಬರಲಾಗಿದೆ. ಪ್ರಸ್ತುತ 358 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಫಲಿತಾಂಶ ಬರುತ್ತಿದೆ. ವಿದ್ಯಾರ್ಥಿಗಳ ನ್ಯೂನತೆ ನಿವಾರಿಸುವ ದೃಷ್ಟಿಯಿಂದ ವಾಕ್ ಶ್ರವಣ, ಫಿಸಿಯೋಥೆರಪಿ, ಆಟಿಸಂ, ಚಿತ್ರಕಲೆ ಮತ್ತು ವೃತ್ತಿ ತರಬೇತಿ ತರಗತಿಗಳ ಮೂಲಕ ಆಧುನಿಕ ತಂತ್ರಜ್ಞಾನದೊಂದಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ.
ಹೀಗೆ ನಾವು ವಿಶೇಷಚೇತನರಿಗೆ ಬಾಲ್ಯದಿಂದಲೇ ಧೈರ್ಯ ತುಂಬಿ, ಅವಕಾಶಗಳನ್ನು ನೀಡಿದರೆ ಅವರು ಖಂಡಿತ ಒಂದಲ್ಲ ಒಂದು ಸಾಧನೆ ಮಾಡಲು ಶಕ್ತರಾಗುತ್ತಾರೆ. ಅವರ ವ್ಯಕ್ತಿತ್ವ ನಿರ್ವಣಕ್ಕಾಗಿ ಕುಟುಂಬ, ಶಾಲೆ ಮತ್ತು ಸಮಾಜ ಎಲ್ಲವೂ ಒಂದಾಗಿ ಕಾರ್ಯನಿರ್ವಹಿಸಬೇಕು. ಪೋಷಕರು ಮಕ್ಕಳಿಗೆ ಅವರ ದೇಹದ ಬಗ್ಗೆ ಹೆಮ್ಮೆ ಪಡಲು ಕಲಿಸಬೇಕು. ಶಿಕ್ಷಕರು ಮಕ್ಕಳಲ್ಲಿ ಸಮಾನತೆಯ ಭಾವನೆ ಬೆಳೆಸಬೇಕು.
ಮಾಧ್ಯಮಗಳೂ ಅತಿರೇಕದ ಸೌಂದರ್ಯ ಮಾನದಂಡಗಳನ್ನು ಪ್ರಚಾರ ಮಾಡದೆ, ನೈಜತೆ ತೋರಿಸಬೇಕು. ಪ್ರತಿಯೊಬ್ಬ ಮನುಷ್ಯನ ದೇಹಪ್ರಕೃತಿ ಒಂದು ಅನನ್ಯ ಸೃಷ್ಟಿ. ಅದನ್ನು ಹೋಲಿಕೆ ಮಾಡುವ ಅಗತ್ಯವಿಲ್ಲ, ಅವಮಾನಿಸುವ ಹಕ್ಕು ಯಾರಿಗೂ ಇಲ್ಲ. ಇತರರನ್ನು ಅವರಿದ್ದಂತೆಯೇ ಗೌರವಿಸುವುದು ನಿಜವಾದ ಸಂಸ್ಕಾರ. ಬಾಡಿ ಶೇಮಿಂಗ್ ಇಲ್ಲದ, ಮಾನವೀಯತೆಯುಳ್ಳ ಸಮಾಜ ನಿರ್ವಣದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net