ಯಾದಗಿರಿ: ಇದು ಮಳೆಗಾಲವೋ ಇಲ್ಲವೇ ಬೇಸಿಗೆಯೋ ಎಂಬ ಮಿಲಿಯನ್ ಡಾಲರ್ ಪ್ರಶ್ನೆ ಗಿರಿ ಜಿಲ್ಲೆ ಜನರನ್ನು ಕಾಡುತ್ತಿದೆ. ಕಾರಣ ಮಳೆಗಾಲ ಆರಂಭವಾಗಿ ಮೂರೂವರೆ ತಿಂಗಳಾದರೂ ವರಣದೇವ ಧರೆಗೆ ಇಳಿಯದ್ದರಿಂದ ಜನ-ಜಾನುವಾರುಗಳು ಸಂಕಟಕ್ಕೆ ಸಿಲುಕಿದರೆ, ರೈತರು ಬೆಳೆ ಒಣಗುತ್ತಿರುವುದನ್ನು ನೋಡಿ ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಜೂ.೭ಕ್ಕೆ ಪುನರ್ವಸು ಮಳೆಯಿಂದ (ಮಿರಗ್) ಆರಂಭವಾಗಿ ಈಗ ಉತ್ತರೆ ಮಳೆ ಸುರಿಯಬೇಕಿತ್ತು. ಆದರೆ ಮೃಗಶಿರ, ಆರಿದ್ರ, ಪುಷ್ಯ ನಕ್ಷತ್ರದ ಒಂದಿಷ್ಟು ಮಳೆಯಾಗಿದ್ದು ಬಿಟ್ಟರೆ ಆಶ್ಲೇಷಾ, ಮಾಘ, ಹುಬ್ಬೆ, ಹಸ್ತ ನಕ್ಷತ್ರಗಳ ಮಳೆ ಆಗಲೇ ಇಲ್ಲ. ಹೀಗಾಗಿ ಮೇ ಕೊನೆಗೆ ಮುಗಿಯಬೇಕಿದ್ದ ಬೇಸಿಗೆ ನಿರಂತರ ಮುಂದುವರಿದಿದ್ದಾ, ನಾಲ್ಕು ತಿಂಗಳ ಬದಲು ಭರ್ತಿ ಏಳು ತಿಂಗಳವರೆಗೆ ಭಯಂಕರ ಝಳ, ಧಗೆಮಿಶ್ರತ ಬಿಸಿಲ ಹೊಡೆತ ಮಿತಿಮೀರಿದೆ.