

ನಂದಗುಡಿ :
ಮನುಷ್ಯನಾಗಿ ಜನಿಸುವುದೇ ಪುಣ್ಯ. ಈ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳುವುದೇ ನಮ್ಮ ಜೀವನದ ಧ್ಯೇಯವಾಗಬೇಕು ಎಂದು ನಾಟಿ ವೈದ್ಯ ಹಳೇಊರು ಚಿಕ್ಕನಾಗಪ್ಪ ತಿಳಿಸಿದರು.
ಅರಿಶಿಣ ಗುಟ್ಟದ ಶ್ರೀ ಚೌಡೇಶ್ವರಮ್ಮ ದೇವಾಲಯದ 18ನೇ ವಾರ್ಷಿಕೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧಾರ್ಮಿಕ ಸಂಸ್ಕಾರದಿಂದ ಮಾತ್ರ ಶಾಂತಿ ಸಿಗಲು ಸಾಧ್ಯ. ನಿತ್ಯ ಕಾಯಕದಲ್ಲಿ ಸೇವಾ ಮನೋಭಾವ, ದೇವರ ಧ್ಯಾನ, ಪಾರಾಯಣ, ಶ್ರವಣದಂತಹ ಕೈಂಕರ್ಯಗಳನ್ನು ರೂಢಿಸಿಕೊಂಡರೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಪ್ರತಿಯೊಬ್ಬರೂ ಮಾನವೀಯ ಮೌಲ್ಯ, ಧರ್ಮ ಪ್ರಜ್ಞೆ ಬೆಳೆಸಿಕೊಂಡಾಗ ಉತ್ತಮ ಜೀವನ ಸಾಗಿಸಬಹುದು. ಪಾಲಕರು, ಗುರು, ಹಿರಿಯರಲ್ಲಿ ಶ್ರದ್ಧಾ-ಭಕ್ತಿ ಇರಬೇಕು ಎಂದರು.
ದೇವಾಲಯದಲ್ಲಿ ಪ್ರತಿ ಹುಣ್ಣಿಮೆ, ಅಮಾವಾಸ್ಯೆಯಂದು ಹೋಮ, ಹವನ, ಸತ್ಸಂಗ, ಸಂಕಲ್ಪ ಸಿದ್ಧಿ ಸೇರಿದಂತೆ ಪೂಜಾ ಕೈಂಕರ್ಯಗಳು ನಡೆಯುತ್ತಿದ್ದು, ಭಕ್ತರು ಆತ್ಮಶುದ್ಧಿಯೊಂದಿಗೆ ಭಕ್ತಿಯಿಂದ ತಾಯಿಯಲ್ಲಿ ನಿವೇದಿಸಿಕೊಂಡಲ್ಲಿ ಇಷ್ಟಾರ್ಥಗಳು ಸಿದ್ಧಿಸುತ್ತವೆ ಎಂಬ ನಂಬಿಕೆಯಿಂದ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ ಎಂದರು.
ದೇವಿಗೆ ಹೋಮ, ಹವನ, ಪಂಚಾಮೃತ ಅಭಿಷೇಕ, ಮಹಾ ಮಂಗಳಾರತಿ, ತೀರ್ಥ&ಪ್ರಸಾದ ವಿನಿಯೋಗ ಸೇವೆ ನಡೆಯಿತು. ವಿವಿಧ ಬಗೆಯ ಹೂವಿನ ಅಲಂಕಾರ ಮಾಡಲಾಗಿತ್ತು. ಸಂಜೆ ಸುಮಂಗಲಿಯರು ಪೂರ್ಣ ಕುಂಭ ಕಳಸದೊಂದಿಗೆ ಶ್ರೀಚೌಡೇಶ್ವರಮ್ಮನ ಉತ್ಸವ ಮೂರ್ತಿಯನ್ನು ಮೆರವಣಿಗೆ ಮಾಡಲಾಯಿತು. ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿತ್ತು.