_1786111996889.webp?w=480&auto=format%2Ccompress&fit=max)
_1786111996889.webp?w=480&auto=format%2Ccompress&fit=max)
ಪ್ರಮುಖ ಮುಖ್ಯಾಂಶಗಳು
ಶ್ರವಣಬೆಳಗೊಳ:
ವಿಶ್ವವಿಖ್ಯಾತ ಜೈನ ತೀರ್ಥಕ್ಷೇತ್ರವಾದ ಶ್ರವಣಬೆಳಗೊಳದಲ್ಲಿ ಸಮರ್ಪಕ ಹಾಗೂ ವ್ಯವಸ್ಥಿತ ವಾಹನ ನಿಲುಗಡೆ (ಪಾರ್ಕಿಂಗ್) ವ್ಯವಸ್ಥೆ ಇಲ್ಲದಿರುವುದರಿಂದ ಸ್ಥಳೀಯರು ಹಾಗೂ ಪ್ರವಾಸಿಗರು ನಿತ್ಯ ಪಡಿಪಾಟಲು ಪಡುವಂತಾಗಿದೆ.
ಶ್ರವಣಬೆಳಗೊಳ ರಾಜ್ಯದ ಪ್ರಮುಖ ಪ್ರವಾಸೋದ್ಯಮ ಹಾಗೂ ಧಾರ್ಮಿಕ ಕೇಂದ್ರವಾಗಿರುವುದರಿಂದ ಯಾತ್ರಿಕರಿಗೆ ಮೂಲಸೌಕರ್ಯ ಕಲ್ಪಿಸುವುದು ಅತ್ಯಗತ್ಯ. ಪ್ರವಾಸೋದ್ಯಮ ಇಲಾಖೆ, ಗ್ರಾಮ ಪಂಚಾಯಿತಿ ಹಾಗೂ ಜಿಲ್ಲಾಡಳಿತ ಸಮನ್ವಯದಿಂದ ಸೂಕ್ತ ಜಾಗವನ್ನು ಗುರುತಿಸಿ ಆಧುನಿಕ ಪಾಕಿರ್ಂಗ್ ವ್ಯವಸ್ಥೆ ಮಾಡಿದರೆ, ಸಂಚಾರ ದಟ್ಟಣೆ ಕಡಿಮೆಯಾಗುವುದರ ಜತೆಗೆ ಯಾತ್ರಿಕರಿಗೂ ಅನುಕೂಲವಾಗಲಿದೆ.
ವಿಂಧ್ಯಗಿರಿ ಹಾಗೂ ಚಂದ್ರಗಿರಿ ಬೆಟ್ಟಗಳ ಮಹಾದ್ವಾರ ಸಮೀಪ, ಮೈಸೂರು ರಸ್ತೆ ಹಾಗೂ ದೇವಸ್ಥಾನದ ಸುತ್ತಮುತ್ತ ವಾಹನಗಳು ಸಾಲುಗಟ್ಟಿ ನಿಲ್ಲುವುದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ತುರ್ತು ಸೇವೆಗಳ ವಾಹನಗಳಿಗೂ ಕೆಲವೊಮ್ಮೆ ಸಂಚಾರ ಕಷ್ಟವಾಗುತ್ತಿದೆ. ವಾರಾಂತ್ಯ, ರಜೆ ಹಾಗೂ ವಿಶೇಷ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಈ ಸಮಸ್ಯೆ ಮತ್ತಷ್ಟು ಗಂಭೀರ ಸ್ವರೂಪ ಪಡೆಯುತ್ತದೆ. 2018ರಲ್ಲಿ ನಡೆದ ಮಹಾಮಸ್ತಕಾಭಿಷೇಕ ಮಹೋತ್ಸವ ಸಂದರ್ಭದಲ್ಲಿ 9 ದಿನಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸಿದ ದಾಖಲೆ ಇದೆ. ಸಾಮಾನ್ಯ ದಿನಗಳಲ್ಲಿಯೂ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ.
ಶ್ರವಣಬೆಳಗೊಳ ಗ್ರಾಮ ಪಂಚಾಯಿತಿಯು ಪ್ರತಿವರ್ಷ ಸುಮಾರು 10 ರಿಂದ 15 ಲಕ್ಷದವರೆಗೆ ಪಾಕಿರ್ಂಗ್ ಶುಲ್ಕದ ಹರಾಜು ನಡೆಸಿ ಆದಾಯ ಗಳಿಸುತ್ತಿದೆ. ಆದರೂ ಯಾತ್ರಿಕರಿಗೆ ಮತ್ತು ಪ್ರವಾಸಿಗರಿಗೆ ಅಗತ್ಯವಾದ ವ್ಯವಸ್ಥಿತ ಪಾಕಿರ್ಂಗ್ ಹಾಗೂ ಶೌಚಗೃಹಗಳ ವ್ಯವಸ್ಥೆ ಕಲ್ಪಿಸುವಲ್ಲಿ ವಿಫಲವಾಗಿದೆ. ಪಾಕಿರ್ಂಗ್ ಶುಲ್ಕದಿಂದ ಲಕ್ಷಾಂತರ ರೂ.ಆದಾಯ ಬರುತ್ತಿದ್ದರೂ, ಆ ಹಣಕ್ಕೆ ತಕ್ಕ ಮೂಲಸೌಕರ್ಯ ಏಕೆ ನಿರ್ಮಾಣವಾಗಿಲ್ಲ?. ವಾಹನ ನಿಲುಗಡೆಗೆ ಶಾಶ್ವತ ಸ್ಥಳವನ್ನು ಗುರುತಿಸಿ ಅಭಿವೃದ್ಧಿಪಡಿಸಲು ಆಡಳಿತ ಏಕೆ ಮುಂದಾಗಿಲ್ಲ? ಎಂಬುದು ಸಾರ್ವಜನಿಕರ ಪ್ರಶ್ನೆ.
ಶ್ರವಣಬೆಳ ಗ್ರಾಮ ಪಂಚಾಯಿತಿಯಿಂದ ಸುಸಜ್ಜಿತ ಪಾಕಿರ್ಂಗ್ ವ್ಯವಸ್ಥೆ ನಿರ್ಮಿಸುವ ಕುರಿತು ಪ್ರವಾಸೋದ್ಯಮ ಇಲಾಖೆಯೊಂದಿಗೆ ಪತ್ರ ವ್ಯವಹಾರದ ಮೂಲಕ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲಾಡಳಿತದಿಂದ ಅಗತ್ಯ ಅನುಮೋದನೆ ದೊರೆತ ತಕ್ಷಣ ಕ್ರಮ ಕೈಗೊಳ್ಳಲಾಗುವುದು.
ಕಾರ್ಯದರ್ಶಿ, ಶ್ರೀ ಜೈನ ಮಠದ ಆಡಳಿತ ಮಂಡಳಿ
ಶ್ರವಣಬೆಳಗೊಳ ಶ್ರೀ ಕ್ಷೇತ್ರದ ಸಮಗ್ರ ಪ್ರವಾಸೋದ್ಯಮ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಪ್ರಸಾದ್ ಯೋಜನೆಯಡಿ 180 ಕೋಟಿ ರೂ. ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಕುರಿತು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಈಗಾಗಲೇ ವರದಿ ಸಲ್ಲಿಸಲಾಗಿದ್ದು, ಕೇಂದ್ರ ಪ್ರವಾಸೋದ್ಯಮ ಇಲಾಖೆಗೂ ಸಮಗ್ರ ವರದಿಯನ್ನೂ ಕಳುಹಿಸಲಾಗಿದೆ. ಯೋಜನೆಗೆ ಅನುಮೋದನೆ ದೊರೆತ ಬಳಿಕ ಶ್ರೀ ಕ್ಷೇತ್ರದಲ್ಲಿ ಪಾರ್ಕಿಂಗ್ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸೇರಿದಂತೆ ವಿವಿಧ ಪ್ರವಾಸೋದ್ಯಮ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೊಳ್ಳಲಾಗುವುದು
ಉಪನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಹಾಸನ