ಜಮೀನು, ಸೈಟು, ಮನೆ, ವಾಣಿಜ್ಯ ಕಟ್ಟಡ ಇನ್ನಿತರ ಸ್ಥಿರಾಸ್ತಿಗಳ ಕ್ರಯ, ವಿಲ್, ದಾನಪತ್ರ, ಕರಾರು ಸೇರಿದಂತೆ ವಿವಿಧ ರೀತಿಯ ದಸ್ತಾವೇಜುಗಳ ನೋಂದಣಿಗೆ ಕಾಗದದ ಮೇಲೆ ಪಕ್ಷಕಾರರ ನಡುವಿನ ವ್ಯವಹಾರವನ್ನು ಮುದ್ರಿಸಲಾಗುತ್ತದೆ. ಆನಂತರ ಕಾವೇರಿ 2.0ನಲ್ಲಿ ಸಿಟಿಜನ್ ಲಾಗಿನ್‌ನಲ್ಲಿ ದಸ್ತಾವೇಜು ಮತ್ತು ಆಸ್ತಿಯ ವಿವರವನ್ನು ಸರ್ಕಾರದ ದತ್ತಾಂಶದಿಂದ ಸ್ವೀಕರಿಸಿ ಅಪ್‌ಲೋಡ್ ಮಾಡಲಾಗುತ್ತದೆ. ಸಬ್‌ರಿಜಿಸ್ಟ್ರಾರ್‌ಗಳು ಪರಿಶೀಲನೆ ನಡೆಸಿ ಸರಿ ಇದ್ದರೆ ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪಾವತಿಗೆ ವಾಪಸ್ ಸಿಟಿಜನ್ ಲಾಗಿನ್‌ಗೆ ಕಳುಹಿಸುತ್ತಾರೆ. ಒಂದು ವೇಳೆ ದೋಷ ಇದ್ದರೂ ಹಿಂತಿರುಗಿಸುತ್ತಾರೆ. ಇದಾದ ಮೇಲೆ ಪಕ್ಷಕಾರರು, ಆನ್‌ಲೈನ್ ಪೇಮೆಂಟ್ ಗೇಟ್‌ವೇನಲ್ಲಿ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಪಾವತಿ ಮಾಡಬೇಕಾಗಿದೆ. ಇದೇ ವೇಳೆ ಎರಡು ಕಡೆಯ ಪಕ್ಷಕಾರರು ಆಧಾರ್ ಆಧಾರಿತ ಇ-ಸೈನ್ ಅಥವಾ ಡಿಜಿಟಲ್ ಸಿಗ್ನೇಚರ್ ಪ್ರಮಾಣಪತ್ರ (ಡಿಎಸ್‌ಸಿ) ಮೂಲಕ ರುಜು ಮಾಡಬೇಕು. ಡಿಜಿಟಲ್ ಸಹಿ ಮಾಡಿ ನೋಂದಣಿಗಾಗಿ ಸಬ್ ರಿಜಿಸ್ಟ್ರಾರ್‌ಗಳ ಲಾಗಿನ್‌ಗೆ ಕಳುಹಿಸಬೇಕು.