ಸೊಲ್ಲಾಪುರ ಜಿಲ್ಲೆ ಮಾಳಶಿರಸ ತಾಲೂಕಿನ ವೇಳಾಪುರ ಶಹರದಲ್ಲಿ ಸೋಮವಾರ ಜರುಗಿದ ಶ್ರೀ ಜಗದ್ಗುರು ಪಂಚ ಪೀಠಾಧೀಶ್ವರರ ಧರ್ಮ ಸಮಾರಂಭದಲ್ಲಿ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು, ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು, ಶ್ರೀಶೈಲ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಜಗದ್ಗುರುಗಳು, ಶ್ರೀ ಕಾಶೀ ಡಾ.ಚಂದ್ರಶೇಖರ ಜಗದ್ಗುರುಗಳು, ಶ್ರೀ ಕಾಶೀ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಜಗದ್ಗುರುಗಳು ಇದ್ದರು.
ಕಲಬುರಗಿ: ಜಗದ್ಗುರು ಪಂಚ ಪೀಠಾಧೀಶ್ವರರು ವಿವಿಧ ಭಾಗಗಳಲ್ಲಿ ಆಚರಿಸಿಕೊಂಡು ಬರುತ್ತಿರುವ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ ಸಮಾರಂಭ ಮುಂದಿನ ವರುಷ (2027) ಎಪ್ರಿಲ್ 11, 12 ಮತ್ತು 13ರಂದು ಮಹಾರಾಷ್ಟ್ರದ ಪುಣೆ ನಗರದಲ್ಲಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಪಂಚಪೀಠ ಒಕ್ಕೂಟ ವ್ಯವಸ್ಥೆಯ ಸಂಚಾಲಕರಾದ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಪ್ರಕಟಿಸಿದರು.
ಸೊಲ್ಲಾಪುರ ಜಿಲ್ಲೆ ಮಾಳಶಿರಸ ತಾಲೂಕಿನ ವೇಳಾಪುರ ಶಹರದಲ್ಲಿ ಸೋಮವಾರ ಜರುಗಿದ ಶ್ರೀ ಜಗದ್ಗುರು ಪಂಚ ಪೀಠಾಧೀಶ್ವರರ ಧರ್ಮ ಸಮಾರಂಭದಲ್ಲಿ ಈ ನಿರ್ಧಾರ ಪ್ರಕಟಿಸಿ, ಮೂರು ದಿನಗಳ ಕಾಲ ನಡೆಯಲಿರುವ ಬೃಹತ್ ಸಮಾರಂಭದಲ್ಲಿ ಆದರ್ಶ ಮೌಲ್ಯಗಳ ಸಂರಕ್ಷಣೆ ಮತ್ತು ಆಚರಣೆ ಸಮಾಜದಲ್ಲಿ ಸಾಮರಸ್ಯ ಸೌಹಾರ್ದತೆ ಬೆಳೆಸುವ ನಿಟ್ಟಿನಲ್ಲಿ ಹಲವಾರು ವೈಶಿಷ್ಠಪೂರ್ಣ ಚಿಂತನೆಗಳ ಚಿಂತನ&ಮಂಥನ ಮಾಡಲಾಗುವುದು. ಸಕಲ ಜೀವಾತ್ಮರಿಗೆ ಸದಾ ಒಳಿತನ್ನೇ ಬಯಸಿದ ವೀರಶೈವ ಲಿಂಗಾಯತ ಧರ್ಮ ಸಂಸತಿಗಳ ಸಂವರ್ಧನೆ ಮತ್ತು ಸಂಸ್ಕಾರ ಬೆಳೆಸುವ ದಿಸೆಯಲ್ಲಿ ಚಿಂತನೆ ನಡೆಸಲಾಗುವುದು. ಪ್ರತಿಯೊಬ್ಬರಲ್ಲೂ ಸ್ವಾಭಿಮಾನ ಧರ್ಮನಿಷ್ಠೆ ಮತ್ತು ರಾಷ್ಟ್ರ ಭಕ್ತಿ ಬೆಳೆಸುವುದೇ ಈ ಸಮಾರಂಭದ ಉದ್ದೇಶ ಎಂದರು.
ಶ್ರೀ ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳು, ಶ್ರೀಶೈಲ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಜಗದ್ಗುರುಗಳು, ಶ್ರೀ ಕಾಶೀ ಡಾ.ಚಂದ್ರಶೇಖರ ಜಗದ್ಗುರುಗಳು, ಶ್ರೀ ಕಾಶೀ ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಜಗದ್ಗುರುಗಳು ಈ ನಿರ್ಧಾರ ಸ್ವಾಗತಿಸಿದರು. ಎಲ್ಲರೂ ಒಗ್ಗಟ್ಟಿನಿಂದ ಕಾರ್ಯಕ್ರಮ ಯಶಸ್ವಿಗೊಳಿಸಲು ಶ್ರಮಿಸಬೇಕೆಂದು ಭಕ್ತ ಸಮುದಾಯಕ್ಕೆ ಕರೆ ನೀಡಿದ್ದಾರೆ.