ಮುದ್ದೇಬಿಹಾಳ: ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಣೆ ಮಾಡುವುದಕ್ಕಾಗಿಯೇ ಬರ ಪರಿಸ್ಥಿತಿ ಅವಲೋಕನ ಮಾಡುತ್ತಿದ್ದೇವೆ. ತಾಲೂಕಿನಲ್ಲಿನ ಬರ ಪರಿಸ್ಥಿತಿ ಕುರಿತು ಆಗಸ್ಟ್ ಅಂತ್ಯದಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಶಾಸಕ ಸಿ.ಎಸ್. ನಾಡಗೌಡ ಹೇಳಿದರು.
ತಾಲೂಕಿನ ಹಡಲಗೇರಿ ಗ್ರಾಮದ ಸಣ್ಣಸಿದ್ದಪ್ಪ ಹರಿಂದ್ರಾಳ ಅವರ ಜಮೀನಿನಲ್ಲಿ ಬೆಳೆದಿದ್ದ ತೊಗರಿ, ಹತ್ತಿ ಬೆಳೆಯನ್ನು ವೀಕ್ಷಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ರೈತರು ಬಿತ್ತನೆ ಮಾಡಿದ ನಂತರ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗದೇ ಇರುವುದರಿಂದ ಬೆಳೆ ಕುಂಠಿತಗೊಂಡಿವೆ. ಈಗ ಮಳೆಯಾದರೂ ಪ್ರಯೋಜನವಾಗುವುದಿಲ್ಲ. ಎಕರೆಗೆ 50 ಸಾವಿರ ರೂ.ಪರಿಹಾರಕ್ಕೆ ರೈತರು ಒತ್ತಾಯಿಸುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ಎಕರೆಗೆ ಒಂದು ಲಕ್ಷ ರೂ.ಪರಿಹಾರ ನೀಡಬೇಕು ಎಂದು ಹೇಳಿದರು.
ರಾಜ್ಯ ಸರ್ಕಾರದ ಪಾಲನ್ನು ವಿಧಾನಸಭಾ ಅಧಿವೇಶನದಲ್ಲಿ ಚರ್ಚೆ ನಡೆಸಿ ಘೋಷಣೆ ಮಾಡಲಾಗುತ್ತದೆ. ಇಲ್ಲಿನ ಸ್ಥಿತಿಗತಿಯನ್ನು ಅಧಿವೇಶನದಲ್ಲೂ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ವಿಜಯಪುರದ ಉಪ ಕೃಷಿ ನಿರ್ದೇಶಕ ಶರಣಗೌಡ ಆರ್. ಮಾತನಾಡಿ, ತಾಲೂಕಿನಲ್ಲಿ ಶೇ.100ರಷ್ಟು ಬೆಳೆ ನಷ್ಟ ರೈತರಿಗೆ ಉಂಟಾಗಿರುವುದು ಕಂಡು ಬರುತ್ತಿದೆ ಬಿತ್ತಿದ ಬೆಳೆ ಸರಿಯಾಗಿ ಮಳೆ ಆಗದ ಕಾರಣಕ್ಕೆ ಬೆಳೆದಿಲ್ಲ ಒಬ್ಬ ರೈತ ಏನಿಲ್ಲವೆಂದರೂ ಎಕರೆಗೆ 25 ಸಾವಿರ ರೂ.ಗಳವರೆಗೆ ಖರ್ಚು ಮಾಡಿದ್ದಾನೆ ತಾಲೂಕಿನಲ್ಲಿನ ಬರ ಪರಿಸ್ಥಿತಿಯ ವರದಿಯನ್ನು ಸರ್ಕಾರಕ್ಕೆ ಆದಷ್ಟು ಬೇಗನೇ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು.
ರೈತರು ತಮ್ಮ ಬೆಳೆ ಹಾಳಾಗುತ್ತಿರುವುದನ್ನು ಶಾಸಕರು, ಅಧಿಕಾರಿಗಳ ಗಮನಕ್ಕೆ ತಂದರಲ್ಲದೇ ಬೆಳೆ ವಿಮೆ ಕಟ್ಟಿದರೂ ಸರಿಯಾಗಿ ವಿಮೆ ಬಂದಿಲ್ಲ ಎಂದು ಗೆದ್ದಲಮರಿಯ ರಮೇಶ ಬಿರಾದಾರ ದೂರಿದರು.
ತಹಸೀಲ್ದಾರ್ ಎಂ.ಎಸ್.ಅರಕೇರಿ, ತಾಪಂ ಇಒ ಸಂಗನಗೌಡ ಬಿರಾದಾರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಡಿ.ಭಾವಿಕಟ್ಟಿ, ರೈತ ಸಂಪರ್ಕ ಕೇಂದ್ರದ ಅಧಿಕಾರಿ ಸೋಮನಗೌಡ ಬಿರಾದಾರ, ತಾಂತ್ರಿಕ ಅಧಿಕಾರಿ ರಾಜೇಶ್ವರಿ ನಾಡಗೌಡ, ತೋಟಗಾರಿಕೆ ಇಲಾಖೆಯ ಅಧಿಕಾರಿ ಶಾಲಿನಿ, ಸಹಾಯಕ ಅಧಿಕಾರಿ ರಾಘವೇಂದ್ರ ದೇಶಪಾಂಡೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಎಸ್.ಸಿ. ಮೋರ್ಚಾ ಅಧ್ಯಕ್ಷ ಶ್ರೀಕಾಂತ ಚಲವಾದಿ, ತಾಪಂ ಸಹಾಯಕ ನಿರ್ದೇಶಕ ಎಸ್.ಎಸ್.ಗಣಾಚಾರಿ, ರೈತ ಹಿತರಕ್ಷಣಾ ವೇದಿಕೆ ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಸಿದರೆಡ್ಡಿ, ಯಲ್ಲಪ್ಪ ಚಲವಾದಿ, ಶ್ರೀಶೈಲ ಪೂಜಾರಿ ಮತ್ತಿತರರಿದ್ದರು.