83 ಯೋಜನೆ 30 ಸಾವಿರಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ಜತೆಗೆ 6,252 ಕೋಟಿ ರೂ. ಹೂಡಿಕೆ: ಎಂ ಬಿ ಪಾಟೀಲ್

  ಬುಧವಾರ ನಡೆದ ಏಕಗವಾಕ್ಷಿ ಸಮಿತಿಯ ಸಭೆಯಲ್ಲಿ  ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಮಾಹಿತಿ ನೀಡಿದರು.
ಬುಧವಾರ ನಡೆದ ಏಕಗವಾಕ್ಷಿ ಸಮಿತಿಯ ಸಭೆಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಮಾಹಿತಿ ನೀಡಿದರು.
Published on

ಬೆಂಗಳೂರು: ರಾಜ್ಯದ ಕೈಗಾರಿಕಾ ವಲಯಕ್ಕೆ ಹೆಚ್ಚು ಹೆಚ್ಚು ಬಂಡವಾಳ ಸೆಳೆಯುವ ಪ್ರಯತ್ನ ಮುಂದುವರಿಸಿದ್ದು, ಏಕಗವಾಕ್ಷಿ ಸಮಿತಿಯ ಸಭೆಯಲ್ಲಿ ಒಟ್ಟು 6,252 ಕೋಟಿ ರೂ.ಗಳಿಗೂ ಹೆಚ್ಚು ಹೂಡಿಕೆಯ 83 ಪ್ರಸ್ತಾವನೆಗಳಿಗೆ ಒಪ್ಪಿಗೆ ನೀಡಲಾಗಿದ್ದು, ಇದರಿಂದ 30 ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ.

ಈ ಪೈಕಿ 24 ಯೋಜನೆಗಳು ತಲಾ 50 ಕೋಟಿ ರೂ.ಗಳಿಗೂ ಹೆಚ್ಚಿನ ಬಂಡವಾಳ ಹೂಡಲಿದ್ದು, ಇವುಗಳಿಂದ 4,703 ಕೋಟಿ ಹರಿದು ಬರಲಿದೆ. 15 ಕೋಟಿ ರೂ.ಗಳಿಂದ 50 ಕೋಟಿಯವರೆಗೆ ಬಂಡವಾಳ ಹಾಕುವಂಥ 57 ಯೋಜನೆಗಳಿದ್ದು,ಇವುಗಳಿಂದ 1291.87 ಕೋಟಿ ರೂ. ಬರಲಿದೆ. ಹೆಚ್ಚುವರಿ ಬಂಡವಾಳ ಹೂಡಿಕೆಯ 2 ಯೋಜನೆಗಳ ಮೂಲಕ 258 ಕೋಟಿ ರೂಪಾಯಿ ಬರಲಿದೆ . ಒಟ್ಟು 83 ಯೋಜನೆಗಳ ಪೈಕಿ 69 ಯೋಜನೆಗಳು ಬೆಂಗಳೂರು ನಗರ ಮತ್ತು ಗ್ರಾಮಾಂತರ ಬಿಟ್ಟು ಬೇರೆ ಜಿಲ್ಲೆಗಳಲ್ಲಿ ಇರಲಿವೆ ಎಂದು ತಿಳಿಸಿದ್ದಾರೆ.
ಪ್ರಸ್ತುತ ಹೆಚ್ಚಿನ ಕಂಪನಿಗಳು ಏರೋಸ್ಪೇಸ್, ಮಶೀನ್ ಟೂಲ್ಸ್, ಆಹಾರ ಸಂಸ್ಕರಣೆ, ಸಕ್ಕರೆ, ಜವಳಿ, ಇಂಟಿಗ್ರೇಟೆಡ್ ಕೈಗಾರಿಕಾ ಪಾರ್ಕ್, ಜನರಲ್ ಎಂಜಿನಿಯರಿಂಗ್, ಇ.ಎಸ್.ಡಿ.ಎಂ. ಮತ್ತು ಉತ್ಪಾದನೆ ವಲಯಗಳಲ್ಲಿ ಹೂಡಿಕೆ ಮಾಡಲು ತೀರ್ಮಾನಿಸಿವೆ. ಜಸ್ವಿನ್ ವೆಂಚರ್ಸ್ ಮತ್ತು ಜಂಪನಾ ಕನ್ಸ್ಟ್ರಕ್ಷನ್ಸ್ ಕಂಪನಿಗಳು ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಇಂಟಿಗ್ರೇಟೆಡ್ ಕೈಗಾರಿಕಾ ಪಾರ್ಕ್ ಅಭಿವೃದ್ಧಿಗೆ ಕ್ರಮವಾಗಿ 475 ಮತ್ತು 465 ಕೋಟಿ ರೂ.ಗಳನ್ನು ವಿನಿಯೋಗಿಸುತ್ತಿವೆ ಎಂದು ಹೇಳಿದ್ದಾರೆ ಎಂದರು.
ಶ್ರೀಶೈಲ ಮಲ್ಲಿಕಾರ್ಜುನ ಡಿಸ್ಟಿಲರೀಸ್ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲ್ಲೂಕಿನಲ್ಲಿ ಸಕ್ಕರೆ ಕಾರ್ಖಾನೆ ಮತ್ತು ವಿದ್ಯುತ್ ಉತ್ಪಾದನೆಗೆ 453.10 ಕೋಟಿ ರೂ, ಆಕ್ಸಿಸ್ಕೇಡ್ ಏರೋಸ್ಪೇಸ್ ಇನ್ಫ್ರಾಸ್ಟ್ರಕ್ಚರ್ ದೇವನಹಳ್ಳಿಯಲ್ಲಿ 426 ಕೋಟಿ ರೂ, ಪ್ಯಾರಿ ಇಂಡಿಯಾ ಲಿಮಿಟೆಡ್ ಬಾಗಲಕೋಟೆಯಲ್ಲಿ ಬೆಲ್ಲ ತಯಾರಿಕೆ ಘಟಕಕ್ಕೆ 397.43 ಕೋಟಿ ರೂ, ಲೀಫಿನಿಟಿ ಬಯೋಎನರ್ಜಿ ಕಂಪನಿಯು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮತ್ತು ನಿಪ್ಪಾಣಿ ಹಾಗೂ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕುಗಳಲ್ಲಿ ಒಟ್ಟು 4 ಕಂಪ್ರೆಸ್ಡ್ ಬಯೋ ಗ್ಯಾಸ್ ಘಟಕಗಳ ಸ್ಥಾಪನೆಗೆ 310 ಕೋಟಿ ರೂ. ಬಂಡವಾಳ ಹೂಡಲಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬಂಟ್ವಾಳ ತಾ.ನಲ್ಲಿ ಬ್ಲೂಲೈನ್ ಕಂಪನಿಯು ಎರಡು ಯೋಜನೆಗಳಿಗೆ ಕ್ರಮವಾಗಿ201.50 ಕೋಟಿ ರೂ ಮತ್ತು 177.50 ಕೋಟಿ ರೂ, ಮಾಲೂರು ತಾ.ನಲ್ಲಿ ಸಾಂಡರ್ ಪ್ರಾಜೆಕ್ಟ್ಟ್ ಮತ್ತು ಅರೆಟ್ 22 ಲಿಮಿಟೆಡ್ ಕಂಪನಿಗಳು ಕ್ರಮವಾಗಿ ತಲಾ 200 ಕೋಟಿಯಂತೆ ಒಟ್ಟು 400 ಕೋಟಿ ರೂ, ಸಾಂಡರ್ ಇನ್ಫ್ರಾ ಕಂಪನಿಯು 180 ಕೋಟಿ ರೂ, ಧಾರವಾಡದಲ್ಲಿ ಸನ್ ಸ್ಟಾರ್ ಪ್ರಿಸಿಷನ್ ಫೋರ್ಜ್ 193.96 ಕೋಟಿ ರೂ, ದೊಡ್ಡಬಳ್ಳಾಪುರದಲ್ಲಿ ಎಲ್ಮೆಷರ್ ಇಂಡಿಯಾ 150 ಕೋಟಿ ರೂ, ಆನ್ ಡಾಟ್ ಕಂಪನಿಯು ಬೆಂಗಳೂರು ಪೂರ್ವ ತಾ.ನಲ್ಲಿ 120 ಕೋಟಿ ರೂ, ಗೌರಿಬಿದನೂರಿನಲ್ಲಿ ಜಿ.ಆರ್.ಬಿ. ಡೇರಿ ಫುಡ್ಸ್ 110 ಕೋಟಿ ರೂ ಮತ್ತು ಕೊಪ್ಪಳದಲ್ಲಿ ಪಯತ್ರಿಕೊಂಡ ಬಾಲಸುಬ್ಬಶೆಟ್ಟಿ ಅಂಡ್ ಸನ್ಸ್ ಕಂಪನಿಯು ಮೆದುಕಬ್ಬಿಣ ಘಟಕದ ಸ್ಥಾಪನೆಗಾಗಿ 98 ಕೋಟಿ ರೂ. ಬಂಡವಾಳ ಹೂಡಲಿವೆ ಎಂದು ವಿವರಿಸಿದ್ದಾರೆ. ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಆಯುಕ್ತೆ ಖುಷ್ಬೂ ಗೋಯೆಲ್, ಕೆಐಎಡಿಬಿ ಸಿಇಒ ಗೋವಿಂದ ರೆಡ್ಡಿ, ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net