ಅಬಕಾರಿ ಇಲಾಖೆ ವರ್ಗಾವಣೆ ದಂಧೆಗೆ ಕೌನ್ಸೆಲಿಂಗ್ ಕಡಿವಾಣ-Counseling

ಅಬಕಾರಿ ಇಲಾಖೆ
ಅಬಕಾರಿ ಇಲಾಖೆ
Published on
ಹರೀಶ್​ ಬೇಲೂರು ಬೆಂಗಳೂರು
ಹೊಸ ಮದ್ಯದಂಗಡಿ ಮಂಜೂರಾತಿಗೆ ಲಂಚದ ಬೇಡಿಕೆ ಸೇರಿ ಇತರ ವಿಚಾರಗಳ ಕುರಿತು ಸದಾ ಸುದ್ದಿಯಾಗುವ ಅಬಕಾರಿ ಇಲಾಖೆಯಲ್ಲಿ ವರ್ಗಾವಣೆ ದಂಧೆಗೆ ಕಡಿವಾಣ ಹಾಕಲು ಸರ್ಕಾರ ಮುಂದಾಗಿದೆ. 
ಮೊದಲ ಬಾರಿ ಸರ್ಕಾರ, ‘ಗ್ರೂಪ್ ಬಿ’ ವೃಂದದ ಅಬಕಾರಿ ಉಪ ಅಧೀಕ್ಷಕರು, ಅಧೀಕ್ಷಕರನ್ನು ಕೌನ್ಸೆಲಿಂಗ್ ಮೂಲಕ ವರ್ಗಾವಣೆಗೆ ಕ್ರಮವಹಿಸಿದೆ. ಕಳೆದ ವರ್ಷ ‘ಗ್ರೂಪ್ ಸಿ’ ವೃಂದದ ಅಬಕಾರಿ ನಿರೀಕ್ಷರು, ಉಪ ನಿರೀಕ್ಷಕರು,  ಮುಖ್ಯಪೇದೆ ಮತ್ತು ಪೇದೆಗಳ ಸೇರಿ ಒಟ್ಟು 687 ನೌಕರರನ್ನು ಸೇವಾ ಹಿರಿತನ ಆದಾರದಲ್ಲಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ಮಾಡಲಾಯಿತು. ಆದ್ದರಿಂದ, ಸಾವಿರಾರು ಅಧಿಕಾರಿಗಳಿಗೆ ಅನುಕೂಲವಾಗುವ ಜತೆಗೆ ವರ್ಗಾವಣೆಗೆ ಕೋಟ್ಯಂತರ ರೂ. ಹಣ ನೀಡುವುದು ತಪ್ಪಿತ್ತು. 
ಇದೀಗ , ಉಪ ಅಧೀಕ್ಷಕರು, ಅಧೀಕ್ಷಕರನ್ನು  ಕೌನ್ಸೆಲಿಂಗ್‌ನಲ್ಲಿ ವರ್ಗಾಯಿಸಲು ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದೆ. ಈ ಮೂಲಕ ಇಲಾಖೆಯ ಒಟ್ಟು ಶೇ.85 ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು, ಹಿರಿತನ ಆಧಾರದಲ್ಲಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆಗೊಳ್ಳಲಿದ್ದಾರೆ. 
ಇಲಾಖೆಯಲ್ಲಿ ಅಬಕಾರಿ ಹೆಚ್ಚುವರಿ ಆಯುಕ್ತ, ಜಂಟಿ ಆಯುಕ್ತ, ಉಪ ಆಯುಕ್ತ, ಅಧೀಕ್ಷಕ, ಉಪ ಆಧೀಕ್ಷಕ,  ಅಬಕಾರಿ ನಿರೀಕ್ಷಕ, ಉಪ ನಿರೀಕ್ಷಕ, ಮುಖ್ಯ ಪೇದೆ ಸೇರಿ ಒಟ್ಟು 5,825 ಹುದ್ದೆಗಳ ಪೈಕಿ 3,456 ಹುದ್ದೆಗಳು ಭರ್ತಿಯಾದರೆ, ಉಳಿದ ಹುದ್ದೆಗಳು ಖಾಲಿ ಇವೆ. ಗ್ರೂಪ್ ‘ಎ’ ಹುದ್ದೆಗಳು 150 ಇದ್ದರೆ, ‘ಗ್ರೂಪ್ ‘ಬಿ’ ಹುದ್ದೆಗಳು 130 ಹುದ್ದೆಗಳಿವೆ. ಗ್ರೂಪ್ ‘ಸಿ’ ಮತ್ತು ‘ಡಿ’ ಹುದ್ದೆ ಸೇರಿ ಒಟ್ಟು 5,548 ಹುದ್ದೆಗಳ ಪೈಕಿ 3,229 ಹುದ್ದೆಗಳು ಭರ್ತಿಯಾಗಿವೆ. ಈ ಹಿಂದೆ ಉಪ ಅಧೀಕ್ಷಕರು, ಅಧೀಕ್ಷಕರು, ನಿರೀಕ್ಷಕ, ಉಪ ನಿರೀಕ್ಷಕ ಹುದ್ದೆಗಳಿಗೆ ಹೆಚ್ಚಿನ ಬೇಡಿಕೆ ಇರುತ್ತಿತ್ತು. 
 ಅಬಕಾರಿ ಉಪ ಅಧೀಕ್ಷಕರು, ಅಧೀಕ್ಷಕರು, ನಿರೀಕ್ಷರು ಬೇರೆ ಕಡೆಗೆ ವರ್ಗಾವಣೆಯಾದರೆ ಸರ್ಕಾರದ ನಿಯಮದಂತೆ ಆ ಹುದ್ದೆಯಲ್ಲಿ ಇಂತಿಷ್ಟು ವರ್ಷ ಕಾರ್ಯನಿರ್ವಹಿಸಬಹುದಿತ್ತು. ಆದರೆ, ಅವಧಿ ಪೂರ್ವ ಮುನ್ನವೇ  ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿತ್ತು. ಉಳಿದ ವೃಂದದ ಹುದ್ದೆಗಳಲ್ಲೂ ಮೆಗಾ ಹರಾಜಿನಂತೆ ಅತಿ ಹೆಚ್ಚು ಹಣ ಕೊಡುವ ಅಧಿಕಾರಿಗೆ ಹಂಚಿಕೆ ಮಾಡಲಾಗುತ್ತಿತ್ತು. ಇದೀಗ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ವ್ಯವಸ್ಥೆ ತರುವುದರಿಂದ ವರ್ಗಾವಣೆ ದಂಧೆಗೆ ಬ್ರೇಕ್ ಬಿದ್ದಿದೆ.
ಎಷ್ಟು ಲಂಚ ನೀಡಬೇಕಿತ್ತು:
ಅಧೀಕ್ಷಕ ಹುದ್ದೆಗೆ 40 ಲಕ್ಷ ರೂ., ಉಪಅಧೀಕ್ಷಕ ಹುದ್ದೆಗೆ 30ರಿಂದ 40 ಲಕ್ಷ ರೂ, ನಿರೀಕ್ಷಕ ಹುದ್ದೆಗೆ 40ರಿಂದ 50 ಲಕ್ಷ ರೂ.ಇದ್ದರೆ, ಉಪನಿರೀಕ್ಷಕ ಹುದ್ದೆಗೆ 15ರಿಂದ 20 ಲಕ್ಷ ರೂ. ಲಂಚ ಇರುತ್ತಿತ್ತು. ಅಬಕಾರಿ ಮುಖ್ಯ ಪೇದೆ,ಅಬಕಾರಿಗೆ ಪೇದೆ ವರ್ಗಾವಣೆಗೆ ಲಕ್ಷಾಂತರ ರೂ.ಲಂಚ ನೀಡಬೇಕಿತ್ತು.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net