ಸಾವಯವ ಹೈನುಗಾರಿಕೆ ತರಬೇತಿ ಅವಶ್ಯ

ಅಕ್ಷಯ ಕಲ್ಪ ಫೌಂಡೇಷನ್‌ಗೆ ತರಬೇತಿಗೆ ತೆರಳುತ್ತಿರುವ ಬಬಲೇಶ್ವರ ಹಾಗೂ ತಿಕೋಟಾ ತಾಲೂಕಿನ ವಿವಿಧ ಗ್ರಾಮಗಳ ರೈತರಿಗೆ ವಿಜಯಪುರ ನಗರದಲ್ಲಿ ಗಣ್ಯರು ಹಸಿರು ನಿಶಾನೆ ತೋರಿಸಿ ಬೀಳ್ಕೊಟ್ಟರು. ವೈ.ಎಂ. ಜಯರಾಜ, ಆರ್.ವಿ. ಕುಲಕರ್ಣಿ ಸತೀಶ ಪಾಟೀಲ, ಸಂತೋಷ ಬಿರಾದಾರ ಮತ್ತಿತರರಿದ್ದರು.
ಅಕ್ಷಯ ಕಲ್ಪ ಫೌಂಡೇಷನ್‌ಗೆ ತರಬೇತಿಗೆ ತೆರಳುತ್ತಿರುವ ಬಬಲೇಶ್ವರ ಹಾಗೂ ತಿಕೋಟಾ ತಾಲೂಕಿನ ವಿವಿಧ ಗ್ರಾಮಗಳ ರೈತರಿಗೆ ವಿಜಯಪುರ ನಗರದಲ್ಲಿ ಗಣ್ಯರು ಹಸಿರು ನಿಶಾನೆ ತೋರಿಸಿ ಬೀಳ್ಕೊಟ್ಟರು. ವೈ.ಎಂ. ಜಯರಾಜ, ಆರ್.ವಿ. ಕುಲಕರ್ಣಿ ಸತೀಶ ಪಾಟೀಲ, ಸಂತೋಷ ಬಿರಾದಾರ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ. ವೈ.ಎಂ. ಜಯರಾಜ ಹೇಳಿಕೆ
  • ‘ಅಕ್ಷಯ ಕಲ್ಪ ಕ್ಯಾಂಪಸ್’ಗೆ ತೆರಳಿದ 20 ರೈತರ ತಂಡ
ವಿಜಯಪುರ : ಜಿಲ್ಲೆಯ ಬಬಲೇಶ್ವರ ಹಾಗೂ ತಿಕೋಟಾ ತಾಲೂಕಿನ ಆಯ್ದ 20 ಜನ ರೈತರ ತಂಡವು ತುಮಕೂರು ಜಿಲ್ಲೆಯ ತಿಪಟೂರಿನಲ್ಲಿರುವ ‘ಅಕ್ಷಯ ಕಲ್ಪ ಕ್ಯಾಂಪಸ್’ಗೆ ತರಬೇತಿಗೆ ತೆರಳಿದೆ.
ಬುಧವಾರ, ತಿಪಟೂರು ಅಕ್ಷಯ ಕಲ್ಪ ಕ್ಯಾಂಪಸ್‌ಗೆ ತೆರಳುತ್ತಿರುವ ರೈತರಿಗೆ ಶುಭ ಕೋರಿದ ಬಿಎಲ್ಡಿಇ ಡೀಮ್ಡ್ ವಿವಿ ಸಮ ಕುಲಾಧಿಪತಿ ಡಾ. ವೈ.ಎಂ. ಜಯರಾಜ ಮಾತನಾಡಿ, ವಿಜಯಪುರ ಜಿಲ್ಲೆಯಲ್ಲಿ ಸುಸ್ಥಿರ ಹೈನುಗಾರಿಕೆ ಮತ್ತು ತೋಟಗಾರಿಕೆ ಉತ್ತೇಜಿಸುವ ನಿಟ್ಟಿನಲ್ಲಿ ಬಿಎಲ್‌ಡಿಇ ಸಂಸ್ಥೆ, ಕೃಷಿ ಕಲ್ಪ ಫೌಂಡೇಷನ್ ಹಾಗೂ ಅಕ್ಷಯ ಕಲ್ಪ ಫೌಂಡೇಷನ್‌ಗಳ ಜಂಟಿ ಆಶ್ರಯದಲ್ಲಿ ಸಚಿವ ಎಂ.ಬಿ. ಪಾಟೀಲರ ಮಾರ್ಗದರ್ಶನದಲ್ಲಿ ಈ ’ಕ್ಷೀರ ಪೈಲಟ್’ ಯೋಜನೆಗೆ ಚಾಲನೆ ನೀಡಲಾಗಿತ್ತು. ಅದರನ್ವಯ ಬಬಲೇಶ್ವರ ತಾಲೂಕಿನ ನಿಡೋಣಿ, ಕುಮಠೆ ಹಾಗೂ ನಾಗರಾಳ ಮತ್ತು ತಿಕೋಟಾ ತಾಲೂಕಿನ ಜಾಲಗೇರಿ, ಡೋಕಳೆವಾಡಿ ಗ್ರಾಮಗಳ ಉತ್ಸಾಹಿ ರೈತರು ಈ ತರಬೇತಿಗಾಗಿ ತೆರಳಿದ್ದಾರೆ. ವೈಜ್ಞಾನಿಕ ಮತ್ತು ಸಾವಯವ ಹೈನುಗಾರಿಕೆಯಲ್ಲಿ ದೇಶದಲ್ಲೇ ಮಾದರಿ ಎನಿಸಿಕೊಂಡಿರುವ ಅಕ್ಷಯ ಕಲ್ಪ ಸಂಸ್ಥೆ ಆವರಣದಲ್ಲಿ ರೈತರು ಸುಧಾರಿತ ತಂತ್ರಜ್ಞಾನಗಳ ನೇರ ಪ್ರಾತ್ಯಕ್ಷಿಕೆ ಹಾಗೂ ತರಬೇತಿ ಪಡೆಯಲಿದ್ದಾರೆ ಎಂದು ತಿಳಿಸಿದರು.
ವಿವಿ ರಿಜಿಸ್ಟ್ರಾರ್ ಆರ್.ವಿ. ಕುಲಕರ್ಣಿ ಮಾತನಾಡಿ, ರೈತರು ತರಬೇತಿಯಲ್ಲಿ ವೈಜ್ಞಾನಿಕ ಕೊಟ್ಟಿಗೆ ನಿರ್ವಹಣೆಯಲ್ಲಿ ಹಸುಗಳ ಆರೋಗ್ಯ, ಸ್ವಚ್ಛತೆ ಮತ್ತು ಆಧುನಿಕ ತಂತ್ರಜ್ಞಾನದ ಮೂಲಕ ಹೈನುಗಾರಿಕೆಯನ್ನು ಲಾಭದಾಯಕವಾಗಿಸುವುದು ಹೇಗೆ? ಎಂಬುದನ್ನು ಮತ್ತು ಸಾವಯವ ಹಾಲು ಉತ್ಪಾದನೆಯಲ್ಲಿ ರಾಸಾಯನಿಕ ಮುಕ್ತ ಹಾಗೂ ಗುಣಮಟ್ಟದ ಹಾಲಿನ ಉತ್ಪಾದನೆಗೆ ಪೂರಕವಾದ ತರಬೇತಿ ಪಡೆದು, ತಿಪಟೂರು ಭಾಗದ ರೈತರು ಅಕ್ಷಯ ಕಲ್ಪ ಮಾದರಿಯನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾಗುವುದು ಮತ್ತು ಜಿಲ್ಲೆಯಲ್ಲೂ ಶ್ವೇತ ಕ್ರಾಂತಿ ಸೃಷ್ಟಿಸುವುದು ಹೇಗೆ? ಎಂಬುದರ ಕುರಿತ ಮಾಹಿತಿ ಪಡೆಯಲಿದ್ದಾರೆ ಎಂದು ಮಾಹಿತಿ ನೀಡಿದರು.
ಪ್ರಸ್ತುತ ತರಬೇತಿಗೆ ತೆರಳಿರುವ 20 ರೈತರು ಅಲ್ಲಿನ ತಂತ್ರಜ್ಞಾನ, ಶೆಡ್ ನಿರ್ಮಾಣ, ಹಸುಗಳ ಆಹಾರ ಕ್ರಮ ಮೇವು ನಿರ್ವಹಣೆ, ಕರು, ಕೋಳಿ ಸಾಕಾಣಿಕೆ ಮತ್ತು ಸಾವಯುವ ಪದ್ಧತಿಯಲ್ಲಿ ವಿವಿಧ ತರಕಾರಿ ಬೆಳೆ ಬೆಳೆಯುವ ಕುರಿತು ಅಧ್ಯಯನ ಮಾಡಿ ಬರಲಿದ್ದಾರೆ. ಅಲ್ಲದೆ, ಈ ತರಬೇತಿಯು ಜಿಲ್ಲೆಯ ಹೈನುಗಾರಿಕಾ ಕ್ಷೇತ್ರಕ್ಕೆ ಹೊಸ ದಿಕ್ಸೂಚಿ ನೀಡುವ ಜತೆಗೆ ಮುಂಬರುವ ದಿನಗಳಲ್ಲಿ ಯುವಕರು ಸ್ವಾವಲಂಬಿ ಉದ್ಯೋಗ ಕೈಗೊಳ್ಳಲು ಪ್ರೇರಣೆಯಾಗಲಿದೆ ಎಂದು ಹೇಳಿದರು.
ಸಹಾಯಕ ರಿಜಿಸ್ಟ್ರಾರ್ ಸತೀಶ ಪಾಟೀಲ, ಕೃಷಿ ಕಲ್ಪ ಫೌಂಡೇಷನ್‌ನ ಸಂತೋಷ ಬಿರಾದಾರ ಮತ್ತಿತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net