ಮುಂಬರುವ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಜಂಟಿ ಹೋರಾಟ ರೂಪಿಸಲು ಬಿಜೆಪಿ-ಜೆಡಿಎಸ್​​ ಸಜ್ಜು: ಆರ್. ಅಶೋಕ್ ಹೇಳಿಕೆ! R Ashoka

ಮುಂಬರುವ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಜಂಟಿ ಹೋರಾಟ ರೂಪಿಸಲು ಬಿಜೆಪಿ-ಜೆಡಿಎಸ್​​ ಸಜ್ಜು: ಆರ್. ಅಶೋಕ್ ಹೇಳಿಕೆ! R Ashoka
ಮುಂಬರುವ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಜಂಟಿ ಹೋರಾಟ ರೂಪಿಸಲು ಬಿಜೆಪಿ-ಜೆಡಿಎಸ್​​ ಸಜ್ಜು: ಆರ್. ಅಶೋಕ್ ಹೇಳಿಕೆ! R Ashoka
Published on

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ-ಜೆಡಿಎಸ್ ಜಂಟಿ ಹೋರಾಟಕ್ಕೆ ಸಜ್ಜು ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಸಮರ
  • ಬೆದರಿಕೆ ಹಾಕಿದರೂ ಬಿಡದಿ ಟೌನ್ ಶಿಪ್ ಮಾಡಲು ಬಿಡುವುದಿಲ್ಲ ಎಂದು ಆರ್. ಅಶೋಕ್ ಎಚ್ಚರಿಕೆ
  • ದೆಹಲಿಗೆ ಹಣ ಕೊಟ್ಟರೆ ಮಾತ್ರ ಸಚಿವ ಸ್ಥಾನ ಎಂದು ಆಡಳಿತ ಪಕ್ಷದ ಶಾಸಕರಿಂದಲೇ ಬಹಿರಂಗ
  • ಸಚಿವ ಸ್ಥಾನಗಳಿಗೆ ರೇಟ್ ಫಿಕ್ಸ್, ಸಿದ್ದರಾಮಯ್ಯ ಬಣ ಸರ್ವನಾಶ ಎಂದು ಅಶೋಕ್​ ಆರೋಪ
ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಜಂಟಿ ಹೋರಾಟ ರೂಪಿಸಲು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸಜ್ಜಾಗಿದ್ದಾರೆ. ಬಿಡದಿ ಟೌನ್‌ಶಿಪ್ ವಿವಾದ ಹಾಗೂ ಆಡಳಿತ ಪಕ್ಷದ ವಿರುದ್ಧದ ಭ್ರಷ್ಟಾಚಾರದ ಆರೋಪಗಳನ್ನು ಮುಂದಿಟ್ಟುಕೊಂಡು ಮುಂಬರುವ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ತೀವ್ರ ಸಮರ ಸಾರಲು ವಿಪಕ್ಷಗಳು ನಿರ್ಧರಿಸಿವೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ( R Ashoka ) ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್. ಅಶೋಕ್, ತಾವೇ ಸ್ವತಃ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಂಸತ್ ಸದಸ್ಯ ಪಿ.ಸಿ. ಮೋಹನ್ ಜತೆಗೂಡಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಮಹತ್ವದ ಚರ್ಚೆ ನಡೆಸಿರುವುದಾಗಿ ತಿಳಿಸಿದರು. ಪ್ರತಿ ಅಧಿವೇಶನಕ್ಕೂ ಮುನ್ನ ವಿಪಕ್ಷಗಳ ನಡುವೆ ಹೋರಾಟದ ರೂಪುರೇಷೆಗಳ ಬಗ್ಗೆ ಸಮಾಲೋಚನೆ ನಡೆಸುವುದು ವಾಡಿಕೆಯಾಗಿದ್ದು, ಈ ಬಾರಿ ಸರ್ಕಾರದ ಭ್ರಷ್ಟಾಚಾರವನ್ನು ಸದನದ ಒಳಗೆ ಹಾಗೂ ಹೊರಗೆ ಬಲವಾಗಿ ಎದುರಿಸಲು ತೀರ್ಮಾನಿಸಲಾಗಿದೆ ಎಂದರು.
ಮುಖ್ಯಮಂತ್ರಿಗಳು ಬದಲಾದರೂ ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಸುಧಾರಿಸಿಲ್ಲ ಎಂದು ವಾಗ್ದಾಳಿ ನಡೆಸಿದ ಅಶೋಕ್, ಲಂಚಾವತಾರ ಮುಂದುವರಿದಿದ್ದು, ದೆಹಲಿಗೆ ಹಣ ಮುಟ್ಟಿಸದ ಹೊರತು ಯಾರೂ ಮಂತ್ರಿಯಾಗಲು ಸಾಧ್ಯವಿಲ್ಲ ಎಂದು ಸ್ವತಃ ಆಡಳಿತ ಪಕ್ಷದ ಶಾಸಕರೇ ಬಹಿರಂಗವಾಗಿ ಆರೋಪಿಸುತ್ತಿದ್ದಾರೆ ಎಂದು ಟೀಕಿಸಿದರು.
ಮಾಜಿ ಸಚಿವ ಎಂ.ಸಿ. ಸುಧಾಕರ್ ಸೇರಿದಂತೆ ಕೆಲವರು ಹಣಕೊಟ್ಟವರೇ ಸಚಿವರಾಗಿದ್ದಾರೆ ಎಂದು ಸತ್ಯ ಬಯಲುಗೊಳಿಸಿದ್ದಾರೆ. ಸಿದ್ದರಾಮಯ್ಯ ಅವರು ತಮ್ಮದೇ ಬಣವನ್ನು ಸರ್ವನಾಶ ಮಾಡಿಕೊಂಡಿದ್ದು, ಎಲ್ಲ ಸಚಿವ ಸ್ಥಾನಗಳಿಗೂ ರೇಟ್ ಫಿಕ್ಸ್ ಆಗಿರುವುದು ಈಗ ಜಗಜ್ಜಾಹೀರಾಗಿದೆ ಎಂದು ಆರೋಪಿಸಿದರು.
ಡಿ.ಕೆ. ಶಿವಕುಮಾರ್ ಅವರು ಬಿಡದಿ ಲ್ಯಾಂಡ್ ಸ್ಕ್ಯಾಮ್ ಮಾಡಲು ಹೊರಟಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಅಶೋಕ್​ ಅವರು, ಯಾವುದೇ ಕಾರಣಕ್ಕೂ ಬಿಡದಿಯನ್ನು ಟೌನ್‌ಶಿಪ್ ಮಾಡಲು ಬಿಡುವುದಿಲ್ಲ ಎಂದು ಎಚ್ಚರಿಸಿದರು. ಈ ಕುರಿತು ಜೆಡಿಎಸ್ ಕೂಡ ಈಗಾಗಲೇ ತೀವ್ರ ಹೋರಾಟ ನಡೆಸುತ್ತಿದ್ದು, ಬಿಡದಿ ಪಾದಯಾತ್ರೆ ಅಥವಾ ಇತರ ಹೋರಾಟಗಳ ಸ್ವರೂಪ ಹೇಗಿರಬೇಕು ಎಂಬುದರ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಶುಕ್ರವಾರದಂದು ಬಿಜೆಪಿ ಪಕ್ಷದ ಆಂತರಿಕ ಸಭೆ ನಡೆಸಲಾಗುವುದು. ನಂತರ ಶನಿವಾರ ಕುಮಾರಸ್ವಾಮಿ ಅವರು ಬೆಂಗಳೂರಿಗೆ ಆಗಮಿಸಲಿದ್ದು, ಅಂದು ಜೆಡಿಎಸ್ ಮತ್ತು ಬಿಜೆಪಿ ಜಂಟಿಯಾಗಿ ಸಮನ್ವಯ ಸಭೆ ನಡೆಸಿ ಹೋರಾಟದ ಘೋಷಣೆ ಮಾಡಲಿವೆ ಎಂದು ಅಶೋಕ್ ತಿಳಿಸಿದರು. ಜಂಟಿ ಹೋರಾಟವೇ ಅಥವಾ ಪ್ರತ್ಯೇಕ ಹೋರಾಟವೇ ಎಂಬುದು ಶನಿವಾರದ ಸಭೆಯಲ್ಲಿ ನಿರ್ಧಾರವಾಗಲಿದೆ. ಮುಂಬರುವ ಅಧಿವೇಶನದಲ್ಲಿ ಈ ಎಲ್ಲ ವಿಷಯಗಳನ್ನು ಪ್ರಸ್ತಾಪಿಸಿ ಸರ್ಕಾರದ ಕಿವಿ ಹಿಂಡಲಾಗುವುದು ಹಾಗೂ ನಮ್ಮ ಬೇಡಿಕೆಗಳಿಗೆ ಒಪ್ಪದಿದ್ದರೆ ಅಧಿವೇಶನ ನಡೆಯಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net