ಸಿರಿಯಾದ ವೃದ್ಧೆಗೆ ಜಯದೇವದಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆ

ಜಯದೇವ ಹೃದ್ರೋಗ ಆಸ್ಪತ್ರೆ
ಜಯದೇವ ಹೃದ್ರೋಗ ಆಸ್ಪತ್ರೆ
Published on

ಪ್ರಮುಖ ಮುಖ್ಯಾಂಶಗಳು

  • * ಯಶಸ್ವಿಯಾಗಿ ಪೇಸ್ ಮೇಕರ್ ಅಳವಡಿಸಿದ ವೈದ್ಯರು
  • * ರೋಗಿಗೆ ದಾನಿಗಳ ನೆರವು ಹಾಗೂ ಸಂಸ್ಥೆಯ ನಿಧಿಯಿಂದ ಉಚಿತ ಚಿಕಿತ್ಸೆ
ಬೆಂಗಳೂರು
ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಸಿರಿಯಾ ಅರಬ್ ಗಣರಾಜ್ಯದ 65 ವರ್ಷದ ಮಹಿಳೆಗೆ ಪೇಸ್ ಮೇಕರ್ ಅಳವಡಿಕೆ ಮಾಡುವುದರ ಜತೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.
ತೀವ್ರ ಎದೆನೋವು ಹಾಗೂ ಉಸಿರಾಟದ ತೊಂದರೆಯಿಂದ ಮಹಿಳೆ ಆರಂಭದಲ್ಲಿ ಶಿವಾಜಿನಗರದ ಚರಕ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಟ್ಟಿದ್ದರು. ಆದರೆ ಅಲ್ಲಿ ಹೆಚ್ಚಿನ ಸೌಲಭ್ಯಗಳು ಇಲ್ಲದ ಕಾರಣ ಎನ್‌ಜಿಒ ಸಂಸ್ಥೆ ಆ್ಯಕ್ಟೀವ್ ಬೆಂಗಳೂರು ಫೌಂಡೇಶನ್ ನೆರವಿನೊಂದಿಗೆ ಜಯದೇವ ಆಸ್ಪತ್ರೆ ಸ್ಥಳಾಂತರಗೊಂಡಿದ್ದರು.
ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ವೈದ್ಯಕೀಯ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ತ್ರಿವಳಿ ರಕ್ತನಾಳಗಳು ಬ್ಲಾಕ್ ಆಗಿರುವುದರ ಜೊತೆಗೆ ಹೃದಯ ಬಡಿತದಲ್ಲಿ ತೀವ್ರ ವ್ಯತ್ಯಯ ಉಂಟಾಗಿರುವುದು ಪತ್ತೆಯಾಗಿತ್ತು. ಈ ವೇಳೆ ಪ್ರಯೋಗಾಲಯದ ವರದಿ ಪರಿಶೀಲಿಸಿದ ಸಂಸ್ಥೆಯ ತಜ್ಞರಾದ ಡಾ. ಎಲ್. ಶ್ರೀಧರ್ ಮತ್ತು ಡಾ. ನಟರಾಜ್ ಶೆಟ್ಟಿ ಅವರು ತೆರೆದ ಹೃದಯ ಶಸಚಿಕಿತ್ಸೆಗೆ ಸಲಹೆ ನೀಡಿದರು. ಬಳಿಕ ಸಂಸ್ಥೆಯ ನಿರ್ದೇಶಕ ಡಾ. ಬಿ. ದಿನೇಶ್ ಹಾಗೂ ವೈದ್ಯಕೀಯ ಅಧೀಕ್ಷಕ ಡಾ. ಪ್ರಭಾಕರ್ ಅವರ ಮಾರ್ಗದರ್ಶನದಲ್ಲಿ ಶಸ್ತ್ರಚಿಕಿತ್ಸಕರಾದ ಡಾ. ಶಿಲ್ಪಾ ಸುರೇಶ್, ಡಾ. ಸಾದಿಕ್ ಶೆರಿಫ್ ಹಾಗೂ ಕಾರ್ಡಿಯಾಕ್ ಅನಸ್ತೇಸಿಯಾಜಿಸ್ಟ್ ಡಾ. ಸತೀಶ್ ಅವರನ್ನು ಒಳಗೊಂಡ ವೈದ್ಯರ ತಂಡವು ಯಶಸ್ವಿಯಾಗಿ ಶಸಚಿಕಿತ್ಸೆ ನೆರವೇರಿಸಿತು. ಜತೆಗೆ ರೋಗಿಯ ಹೃದಯ ಬಡಿತದಲ್ಲಿ ತೀವ್ರ ವ್ಯತ್ಯಯ ಕಂಡುಬಂದಿದ್ದರಿಂದ ಎಲೆಕ್ಟ್ರೋಫಿಸಿಯಾಲಜಿ ವಿಭಾಗದ ಡಾ. ಸತೀಶ್ ಶಾಶ್ವತವಾದ ಪೇಸ್‌ಮೇಕರ್ ಅಳವಡಿಕೆ ಮಾಡಿದರು. ಚಿಕಿತ್ಸೆ ನಂತರ ರೋಗಿಯು ಚೇತರಿಸಿಕೊಂಡಿದ್ದು, ಬಿಡುಗಡೆ ಹೊಂದಿದ್ದಾಗಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
ರೋಗಿ ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ ಅವರಿಗೆ ಅರಬ್ ಭಾಷೆ ಹೊರತಾಗಿ ಬೇರೆ ಭಾಷೆ ಬಾರದ ಹಿನ್ನೆಲೆಯಲ್ಲಿ ವೈದ್ಯರು ಗೂಗಲ್ ಟ್ರಾನ್ಸ್‌ಲೇಟರ್ ಬಳಸಿ ರೋಗಿಯೊಂದಿಗೆ ಸಂವಹನ ನಡೆಸಿ ಸಮಸ್ಯೆ ಆಲಿಸಿ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದಾರೆ. ಇದಲ್ಲದೆ ರೋಗಿಯು ಆರ್ಥಿಕವಾಗಿ ಹಿಂದುಳಿದಿದ್ದ ಕಾರಣ ಶಸ್ತ್ರಚಿಕಿತ್ಸೆ ವೆಚ್ಚದಲ್ಲಿ ತಕ್ಕಷ್ಟು ಎನ್‌ಜಿಒ ಹಾಗೂ ದಾನಿಗಳ ನೀಡಿದ್ದರು. ಉಳಿದ ವೆಚ್ಚವನ್ನು ಆಸ್ಪತ್ರೆ ವತಿಯಿಂದ ಭರಿಸುವ ಮೂಲಕ ಮಾನವೀಯ ನೆಲೆಗಟ್ಟಿನಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ. ಬಿ. ದಿನೇಶ್ ತಿಳಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net