ಹಿಂದೂ ಸುರಕ್ಷಾ ಸಮಿತಿ ವತಿಯಿಂದ ಕುಶಾಲನಗರದಲ್ಲಿ ನಡೆದ ಲವ್ ಜಿಹಾದ್ ಮತ್ತು ಬಲತ್ಕಾರದ ಮತಾಂತರದ ವಿರುದ್ಧ ಜನಜಾಗೃತಿ ಕಾರ್ಯಕ್ರಮದಲ್ಲಿ ಗಣ್ಯರು ಪಾಲ್ಗೊಂಡಿದ್ದರು. ಸತೀಶ್ ದಾವಣಗೆರೆ, ಅಜಿತ್ ಕುಕ್ಕೇರ, ಅಮೃತ್ ರಾಜ್, ಚಿಲ್ಲನ ಗಣಿಪ್ರಸಾದ್, ವಸಂತ ರೈ, ಚಂದ್ರಶೇಖರ ಹೇರೂರು, ಜ್ಯೋತಿ ಕುದುಪಜೆ, ಪ್ರಶಾಂತ್ ಇದ್ದರು.
ಕುಶಾಲನಗರ: ಜಾತಿ, ಮತ, ಪಕ್ಷ, ಭೇದ ಮರೆತು ಹಿಂದೂಗಳು ಒಂದಾದರೆ ಮಾತ್ರ ಬಲವಂತದ ಮತಾಂತರಕ್ಕೆ ಕಡಿವಾಣ ಹಾಕಬಹುದು ಎಂದು ಹಿಂದೂ ಜಾಗರಣ ವೇದಿಕೆ ದಕ್ಷಿಣ ಕರ್ನಾಟಕ ಪ್ರಾಂತ ಸಹ ಸಂಚಾಲಕ ಸತೀಶ್ ದಾವಣಗೆರೆ ಹೇಳಿದರು.
ಇಲ್ಲಿನ ಹಿಂದೂ ಸುರಕ್ಷಾ ಸಮಿತಿಯಿಂದ ಸ್ಥಳೀಯ ಕಾರು ನಿಲ್ದಾಣ ವೇದಿಕೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಲವ್ ಜಿಹಾದ್ ಮತ್ತು ಬಲತ್ಕಾರದ ಮತಾಂತರದ ವಿರುದ್ಧ ಜನಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
1995ರಲ್ಲೇ ಕೊಡಗಿನಲ್ಲಿ ಲವ್ ಜಿಹಾದ್ ಶುರುವಾಗಿದೆ. ವೀರ ಸೇನಾನಿಗಳ ನಾಡಿನಲ್ಲಿ ಇಂಥ ಹುನ್ನಾರ ಹೇಗೆ ಆರಂಭವಾಯಿತು ಎನ್ನುವುದು ಚಿಂತಿಸಬೇಕು. ನಮ್ಮ ವೀರ ಪರಂಪರೆಯ ರಕ್ತದ ಪರಿಚಯ ಇರುವವರು ಯಾರು ಕೂಡ ಮತಾಂತರ ಆಗುವುದಿಲ್ಲ. ಲವ್ ಜಿಹಾದ್ ಎಲ್ಲರೂ ಅಂದುಕೊಂಡಷ್ಟು ಸರಳವಾಗಿಲ್ಲ. ಇದರ ಹಿಂದೆ ಸಾಕಷ್ಟು ಷಡ್ಯಂತರ ಅಡಗಿದೆ ಜತೆಗೆ ರಾಜಕಾರಣಿಗಳ ತುಷ್ಟೀಕರಣ ನಡೆಯೂ ಇದಕ್ಕೆ ಕಾರಣವಾಗಿದೆ. ಹಿಂದೂ ಸಮಾಜ ಬಲಿಷ್ಠವಾಗಿವುದೇ ಮಾತೆಯರಿಂದ. ಹಾಗಾಗಿ ಕುಟುಂಬದ ಹೆಣ್ಣು ಮಕ್ಕಳ ಬಗ್ಗೆ ಮಹಿಳೆಯರು ಜಾಗ್ರತೆ ವಹಿಸಬೇಕು. ಮಕ್ಕಳನ್ನು ಸುಸಂಸ್ಕೃತರಾಗಿ ಬೆಳೆಸಬೇಕು. ಈ ನಿಟ್ಟಿನಲ್ಲಿ ಭಗವದ್ಗೀತೆ, ರಾಮಾಯಣ ಸೇರಿದಂತೆ ದೇಶದ ಹಿರಿಮೆ ಸಾರುವ ಕತೆ ಹೇಳಬೇಕು ಎಂದರು.
ಹಿಂದೂ ಜಾಗರಣ ವೇದಿಕೆಯ ಕಾರ್ಯಕಾರಿ ಸಮಿತಿ ಸದಸ್ಯ ಅಜಿತ್ ಕುಕ್ಕೇರ ಮಾತನಾಡಿ, ಕೊಡಗಿನಲ್ಲಿ ಹಿಂದೂ ಸಮಾಜದ ದಿಕ್ಕು ತಪ್ಪಿಸುವ ಪ್ರಯತ್ನ ನಡೆದಿದೆ. ಲವ್ ಜಿಹಾದ್ ಪ್ರಕರಣ ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನಡೆಯುತ್ತಿದೆ. ಕಾಲೇಜು ಹಂತದಲ್ಲೇ ಇಂಥ ಪ್ರಯತ್ನಗಳು ಆರಂಭವಾಗುತ್ತದೆ. ಉದ್ಯೋಗದ ಸ್ಥಳದಲ್ಲಿ ಇದು ಮುಂದುವರಿಯುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಮತಾಂತರ ಪ್ರಕರಣಗಳನ್ನು ದಿಕ್ಕು ತಪ್ಪಿಸುವ ಕೆಲಸ ಪೊಲೀಸರು ಮಾಡುತ್ತಿದ್ದಾರೆ. ಕೆಲವು ಪ್ರಕರಣಗಳಲ್ಲಿ ದೂರುಕೊಟ್ಟವರ ಮೇಲೆಯೇ ಪ್ರಕರಣ ದಾಖಲು ಮಾಡಲಾಗುತ್ತಿದೆ. ಪೊಲೀಸ್ ಇಲಾಖೆ ಜವಾಬ್ದಾರಿ ಮರೆತಿದೆ. ಕಾಂಗ್ರೆಸ್ ಸರ್ಕಾರ ಇದಕ್ಕೆ ಪ್ರೇರೇಪಣೆ ಮಾಡುತ್ತಿದೆ. ಪೊಲೀಸರು ಕಾನೂನು ಪ್ರಕಾರ ನಡೆದುಕೊಂಡಿದ್ದರೆ ಕುಶಾಲನಗರದಲ್ಲಿ ಇಂಥ ಪ್ರಕರಣ ನಡೆಯುತ್ತಿರಲಿಲ್ಲ. ಲವ್ ಜಿಹಾದ್, ಗೋಹತ್ಯೆ, ಬಲವಂತದ ಮತಾಂತರ ಪ್ರಕರಣ ಮಾಡಿರುವುದು ಮತ್ತು ಮಾಡುತ್ತಿರುವುದು ಯಾರು ಎನ್ನುವುದು ಪೊಲೀಸರಿಗೆ ಗೊತ್ತಿದೆ. ಆದರೆ, ಕ್ರಮ ತೆಗೆದುಕೊಳ್ಳದಂತೆ ಕೈ ಕಟ್ಟಿಹಾಕಲಾಗಿದೆ ಎಂದು ಹೇಳಿದರು.
ಕುಶಾಲನಗರ ಹಿಂದೂ ಸುರಕ್ಷ ಸಮಿತಿ ಸಂಚಾಲಕ ಅಮೃತರಾಜ್ ಮಾತನಾಡಿ, ಬಲವಂತದ ಮತಾಂತರ ಮತ್ತು ಲವ್ ಜಿಹಾದ್ ಪಿಡುಗು ಯಾವುದೇ ವರ್ಗಕ್ಕೆ ಸೀಮಿತ ಅಗಿಲ್ಲ. ಬಡವರು ಮತ್ತು ಶ್ರೀಮಂತರು ಇದಕ್ಕೆ ಬಲಿಯಾಗುತ್ತಿದ್ದಾರೆ. ದೇಶದ ವಿವಿಧೆಡೆ ನಡೆಯುತ್ತಿದ್ದ ಪ್ರಕರಣ ಈಗ ಕೊಡಗಿಗೂ ಕಾಲಿಟ್ಟಿದೆ. ಭಾರತೀಯರು ಸಂವೇದನಶೀಲರು. ಹಾಗಾಗಿ ಕುಟುಂಬ ಗೌರವದ ಕಾರಣಕ್ಕೆ ಮತಾಂತರ ಪ್ರಕರಣಗಳು ಹೆಚ್ಚು ಹೊರಗೆ ಬರುತ್ತಿಲ್ಲ. ಕುಶಾಲನಗರದ ಕಾಲೇಜುಗಳು, ವಾಣಿಜ್ಯ ಕೇಂದ್ರಗಳಲ್ಲಿ ಲವ್ ಜಿಹಾದ್ ಕ್ರಿಯಾಶೀಲವಾಗಿದೆ. ಈ ಸಂಬಂಧ ಹೋರಾಟ ಮುಂದುವರಿಸಲಾಗುತ್ತದೆ. ಸಮಾಜದಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಇಂಥ ಪ್ರಕರಣ ತಡೆಯಲು ಧಾರ್ಮಿಕ ಶಿಕ್ಷಣದ ಅಗತ್ಯ ಇದೆ. ಭಗವದ್ಗೀತೆ ಸೇರಿದಂತೆ ಧಾರ್ಮಿಕ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಲಾಗುವುದು ಎಂದರು.
ಹಿಂದೂ ಸುರಕ್ಷ ಸಮಿತಿ ಸಹ ಸಂಚಾಲಕ ಭರತ್ ಮಾಚಯ್ಯ, ಚಿಲ್ಲನ ಗಣಿಪ್ರಸಾದ್, ಚಂದ್ರಶೇಖರ ಹೇರೂರು, ಜ್ಯೋತಿ ಕುದುಪಜೆ, ಪ್ರಶಾಂತ್, ಹಿಂದೂ ಜಾಗರಣ ವೇದಿಕೆಯ ಮಂಜುನಾಥ್ ಮತ್ತಿತರರು ಪಾಲ್ಗೊಂಡಿದ್ದರು.
ಬೃಹತ್ ನಡಿಗೆಯಿಂದ ಜನರಲ್ಲಿ ಅರಿವು:ಸಭಾ ಕಾರ್ಯಕ್ರಮಕ್ಕೂ ಮೊದಲು ಕುಶಾಲನಗರ ಕಾವೇರಿ ನಿಸರ್ಗಧಾಮ ಬಳಿಯಿಂದ ಕಾರು ನಿಲ್ದಾಣ ತನಕ ಬೃಹತ್ ಜನಜಾಗೃತಿ ನಡಿಗೆ ಏರ್ಪಡಿಸಲಾಗಿತ್ತು. ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಹಿಂದೂಗಳು, ವಿವಿಧ ಹಿಂದೂ ಸಂಘಟನೆಗಳ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು ಈ ನಡಿಗೆಯಲ್ಲಿ ಪಾಲ್ಗೊಂಡಿದ್ದರು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಹೆಜ್ಜೆ ಹಾಕಿದ್ದು ವಿಶೇಷವಾಗಿದ್ದು. ಸುಮಾರು 3 ಕಿ.ಮೀ. ಅಂತರದ ನಡಿಗೆಯುದ್ದಕ್ಕೂ ಹಿಂದೂ ಸಮಾಜ ಪರ ಘೋಷಣೆಗಳು ಮೊಳಗಿದವು. ಲವ್ ಜಿಹಾದ್ ಮತ್ತು ಬಲವಂತದ ಮತಾಂತರ ವಿರುದ್ಧದ ಘೋಷಣೆಗಳನ್ನು ಒಳಗೊಂಡಿದ್ದ ಫಲಕಗಳು ಗಮನ ಸೆಳೆದವು.
ಮೋಡ ಕವಿದ ವಾತಾವರಣ ಜನಜಾಗೃತಿ ನಡಿಗೆಗೆ ಪೂರಕ ವಾತಾವರಣ ಕಲ್ಪಿಸಿತ್ತು. ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ನಡಿಗೆ ಆರಂಭವಾದ ಕಾವೇರಿ ನಿಸರ್ಗಧಾಮದಿಂದ ಸಭಾ ಕಾರ್ಯಕ್ರಮ ನಡೆದ ಕಾರು ನಿಲ್ದಾಣದ ವೇದಿಕೆ ತನಕ ಎಲ್ಲ ಕಡೆಯೂ ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬಂದರು. ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ, ಮಾಜಿ ಸಚಿವ ಎಂ.ಪಿ. ಅಪ್ಪಚ್ಚು ರಂಜನ್, ಮಾಜಿ ಎಂಎಲ್‌ಸಿ ಎಸ್.ಜಿ. ಮೇದಪ್ಪ, ಮಡಿಕೇರಿ ನಗರಸಭೆ ಮಾಜಿ ಅಧ್ಯಕ್ಷೆ ಅನಿತಾ ಪೂವಯ್ಯ ಸೇರಿದಂತೆ ಪ್ರಮುಖರು ನಡಿಗೆಯಲ್ಲಿ ಹೆಜ್ಜೆ ಹಾಕಿದರು.