ಒಂದು ಇನ್‌ಸ್ಟಾಗ್ರಾಂ ರೀಲ್ ​​ಸಾಕು, ಗಿಫ್ಟ್ ಫೈನಲ್; ರಾಖಿ ಜ್ಯುವೆಲ್ಲರಿ ಶಾಪಿಂಗ್‌ನಲ್ಲಿ ಹೊಸ ಟ್ರೆಂಡ್! | Rakhi shopping Instagram trend

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ಆಭರಣ ಖರೀದಿಗೂ ಇನ್‌ಸ್ಟಾಗ್ರಾಂ ಪ್ರಮುಖ ವೇದಿಕೆ
  • ರಾಖಿ ಉಡುಗೊರೆಯಾಗಿ ದಿನಬಳಕೆಯ ಜ್ಯುವೆಲ್ಲರಿಗೆ ಆದ್ಯತೆ
  • ಗಿಫ್ಟ್‌ನಷ್ಟೇ ಆಕರ್ಷಕವಾಗುತ್ತಿದೆ ಜ್ಯುವೆಲ್ಲರಿ ಪ್ಯಾಕೇಜಿಂಗ್
Instagram to Showroom: ರಕ್ಷಾ ಬಂಧನ ಅಂದರೆ ಅಣ್ಣ-ತಂಗಿ, ಅಕ್ಕ-ತಮ್ಮನ ನಡುವಿನ ಪ್ರೀತಿಯ ಹಬ್ಬ. ಈ ದಿನ ಸಹೋದರ-ಸಹೋದರಿಯರು ಪರಸ್ಪರ ಉಡುಗೊರೆ ನೀಡೋದು ಸಾಮಾನ್ಯ. ಆದರೆ ಗಿಫ್ಟ್ ಆಯ್ಕೆ ಮಾಡುವ ವಿಧಾನ ಮಾತ್ರ ಈಗ ಬದಲಾಗ್ತಿದೆ. ವಿಶೇಷವಾಗಿ ಜ್ಯುವೆಲ್ಲರಿ ಶಾಪಿಂಗ್‌ನಲ್ಲಿ ಇನ್‌ಸ್ಟಾಗ್ರಾಂ ರೀಲ್ಸ್​ ಹೊಸ ಕ್ಯಾಟಲಾಗ್‌ ಆಗಿ ಬದಲಾಗುತ್ತಿದೆ.
ಈ ಹಿಂದೆ, ಹಿಂದೆ ಜ್ಯುವೆಲ್ಲರಿ ಅಂಗಡಿಗೆ ಹೋಗಿ ಶೋಕೇಸ್‌ನಲ್ಲಿದ್ದ ಡಿಸೈನ್‌ಗಳನ್ನು ನೋಡಿ ಆಯ್ಕೆ ಮಾಡುತ್ತಿದ್ದರು. ಈಗ ಮೊಬೈಲ್ ಸ್ಕ್ರೀನ್‌ನಲ್ಲೇ ಹುಡುಕಾಟ ಶುರುವಾಗಿದೆ. ಇನ್‌ಸ್ಟಾಗ್ರಾಂನಲ್ಲಿ ಇಷ್ಟವಾದ ಬ್ರೇಸ್‌ಲೆಟ್, ರಿಂಗ್, ನೆಕ್ಲೆಸ್ ಅಥವಾ ಕಿವಿಯೋಲೆಗಳ ಫೋಟೋ-ವಿಡಿಯೋಗಳನ್ನು ಸೇವ್ ಮಾಡಿಕೊಂಡು, ಅದನ್ನೇ ಶೋರೂಮ್‌ನಲ್ಲಿ ತೋರಿಸಿ ಖರೀದಿಸುವ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ.

ಮೊಬೈಲ್ ಸ್ಕ್ರೀನ್‌ ಈಗ ಜ್ಯುವೆಲ್ಲರಿ ಕ್ಯಾಟಲಾಗ್

ಇನ್‌ಸ್ಟಾಗ್ರಾಂ ರೀಲ್ಸ್​ಮೂಲಕ ಆಭರಣ ಧರಿಸಿದಾಗ ಹೇಗೆ ಕಾಣುತ್ತದೆ ಎಂಬುದನ್ನು ಗ್ರಾಹಕರು ಮೊದಲೇ ನೋಡಬಹುದು. ನೆಕ್ಲೆಸ್, ಬ್ರೇಸ್‌ಲೆಟ್, ಕಿವಿಯೋಲೆ ಅಥವಾ ರಿಂಗ್‌ಗಳನ್ನು ಬೇರೆ ಬೇರೆ ಡ್ರೆಸ್‌ಗಳ ಜೊತೆ ಹೇಗೆ ಸ್ಟೈಲ್ ಮಾಡಬಹುದು ಅನ್ನೋದನ್ನೂ ರೀಲ್ಸ್ ಮೂಲಕ ಅರ್ಥಮಾಡಿಕೊಳ್ಳಬಹುದು. ಹೀಗಾಗಿ ಜ್ಯುವೆಲ್ಲರಿ ಖರೀದಿ ಈಗ ಕೇವಲ ಡಿಸೈನ್ ಚೆನ್ನಾಗಿದೆ’ಅನ್ನೋದಕ್ಕೆ ಸೀಮಿತವಾಗಿಲ್ಲ. ಇದು ಯಾರಿಗೆ ಸೂಟ್ ಆಗುತ್ತೆ? ಯಾವ ಡ್ರೆಸ್‌ಗೆ ಹೊಂದಿಕೊಳ್ಳುತ್ತೆ? ಅನ್ನೋ ಪ್ರಶ್ನೆಗಳಿಗೂ ಗ್ರಾಹಕರು ಗಮನ ಕೊಡ್ತಿದ್ದಾರೆ.

ರಾಖಿಗೆ ಮಾತ್ರವಲ್ಲ, ಪ್ರತಿದಿನ ಧರಿಸೋ ಜ್ಯುವೆಲ್ಲರಿ!

ಸಹೋದರಿ ತನ್ನ ಅಣ್ಣನಿಗೆ ಇಷ್ಟವಾದ ಮೂರು ಬ್ರೇಸ್‌ಲೆಟ್‌ಗಳ ಆಯ್ಕೆ ಕಳುಹಿಸಬಹುದು. ಕುಟುಂಬದ ವಾಟ್ಸ್ಆಪ್​ ಗ್ರೂಪ್‌ನಲ್ಲೇ ಯಾವ ಡಿಸೈನ್ ಚೆನ್ನಾಗಿದೆ ಅನ್ನೋದರ ಬಗ್ಗೆ ಚರ್ಚೆ ನಡೆದು, ಕೊನೆಗೆ ಶೋರೂಮ್‌ನಲ್ಲಿ ಖರೀದಿ ಮಾಡುವ ಟ್ರೆಂಡ್ ಕೂಡ ಹೆಚ್ಚಾಗಿದೆ. ಗಿಫ್ಟ್ ಆಯ್ಕೆ ಮಾಡುವಾಗ ಗ್ರಾಹಕರು ಮತ್ತೊಂದು ವಿಚಾರಕ್ಕೂ ಹೆಚ್ಚಿನ ಗಮನ ಕೊಡ್ತಿದ್ದಾರೆ. ಒಮ್ಮೆ ಧರಿಸಿ ನಂತರ ಬಾಕ್ಸ್‌ನಲ್ಲೇ ಇಡುವ ಆಭರಣಗಳಿಗಿಂತ ಪ್ರತಿದಿನ ಧರಿಸಬಹುದಾದ ಸರಳ ಹಾಗೂ ಆಕರ್ಷಕ ಡಿಸೈನ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ.

ಗಿಫ್ಟ್ ಬಾಕ್ಸ್‌ಗೂ ಈಗ ವಿಶೇಷ ಮಹತ್ವ

ಜ್ಯುವೆಲ್ಲರಿ ಖರೀದಿಯಲ್ಲಿ ಪ್ಯಾಕೇಜಿಂಗ್ ಕೂಡ ಗಿಫ್ಟ್ ಅನುಭವದ ಪ್ರಮುಖ ಭಾಗವಾಗುತ್ತಿದೆ. ಸುಂದರವಾದ ಬಾಕ್ಸ್, ರಾಖಿ ಥೀಮ್‌ನ ವಿಶೇಷ ಪ್ಯಾಕೇಜಿಂಗ್ ಹಾಗೂ ವೈಯಕ್ತಿಕ ಮೆಸೇಜ್‌ಗಳು ಉಡುಗೊರೆಯ ಖುಷಿಯನ್ನು ಮತ್ತಷ್ಟು ಹೆಚ್ಚಿಸುತ್ತಿವೆ. ಕೆಲವು ಜ್ಯುವೆಲ್ಲರಿ ಬ್ರ್ಯಾಂಡ್‌ಗಳು ರಾಖಿಗಾಗಿ ವಿಶೇಷ ಗಿಫ್ಟ್ ಬಾಕ್ಸ್‌ಗಳನ್ನು ಪರಿಚಯಿಸುತ್ತಿವೆ. ಅಂದರೆ ಬಾಕ್ಸ್ ತೆರೆಯುವ ಕ್ಷಣದಿಂದಲೇ ಗಿಫ್ಟ್‌ನ ಅನುಭವ ಶುರುವಾಗಬೇಕು ಅನ್ನೋದು ಹೊಸ ಟ್ರೆಂಡ್.

ಸ್ಕ್ರೋಲ್‌ನಿಂದ ಶುರು, ಶೋರೂಮ್‌ನಲ್ಲಿ ಫೈನಲ್

ಇನ್‌ಸ್ಟಾಗ್ರಾಂ ಬಂದ ಮೇಲೆ ಜ್ಯುವೆಲ್ಲರಿ ಶೋರೂಮ್‌ಗಳ ಮಹತ್ವ ಕಡಿಮೆಯಾಗಿಲ್ಲ. ಬದಲಿಗೆ ಗ್ರಾಹಕರು ಶೋರೂಮ್‌ಗೆ ಬರುವ ಮುನ್ನವೇ ತಮ್ಮ ಆಯ್ಕೆಯನ್ನು ಬಹುತೇಕ ಫೈನಲ್ ಮಾಡಿಕೊಂಡಿರುತ್ತಾರೆ. ಇನ್‌ಸ್ಟಾಗ್ರಾಂನಲ್ಲಿ ಡಿಸೈನ್ ನೋಡಿ, ಸೇವ್ ಮಾಡಿ, ಕುಟುಂಬದವರ ಜೊತೆ ಚರ್ಚಿಸಿ, ನಂತರ ಶೋರೂಮ್‌ಗೆ ಹೋಗಿ ಆಭರಣ ಧರಿಸಿ ನೋಡಿ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಹೊಸ ರೀತಿಯ ಶಾಪಿಂಗ್ ಟ್ರೆಂಡ್ ಈಗ ರೂಪುಗೊಂಡಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net