ಸಮುದಾಯ ಕಾಮಗಾರಿಗಳಾದ ಕಾಂಕ್ರೀಟ್ ರಸ್ತೆ, ಚರಂಡಿ, ಚೆಕ್ ಡ್ಯಾಂ, ಕಾಲುವೆ, ಅರಣ್ಯೀಕರಣ ಹಾಗೂ ವೈಯಕ್ತಿಕ ಕಾಮಗಾರಿಗಳಾದ ಕೃಷಿ ಹೊಂಡ, ಬದು ಸೇರಿದಂತೆ ಇನ್ನಿತರ ಬೇಡಿಕೆ ಬರುತ್ತವೆ. ಈ ಬೇಡಿಕೆ ಕಾಮಗಾರಿ ಅನುಷ್ಠಾನದ ಸ್ಥಳಕ್ಕೆ ನರೇಗಾ ಹಾಗೂ ಗ್ರಾಪಂ ಸಿಬ್ಬಂದಿ ಭೇಟಿ ನೀಡಿ, ಆ ಜಾಗದ ಅಕ್ಷಾಂಶ ಹಾಗೂ ರೇಖಾಂಶದ ಮಾಹಿತಿ ಸಂಗ್ರಹಿಸುವರು. ನಂತರ ಈ ಮಾಹಿತಿಯನ್ನು ಯುಕ್ತಧಾರ ತಂತ್ರಾಂಶದಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗುತ್ತಿದೆ. ಬೇಡಿಕೆ ಬಂದ ಕಾಮಗಾರಿ ಆ ಜಾಗಕ್ಕೆ ಸೂಕ್ತವೇ, ಇಲ್ಲವೇ ಎಂಬುದನ್ನು ದೂರಸಂವೇದಿ ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆ ಆಧಾರಿತ ದತ್ತಾಂಶ ಬಳಸಿಕೊಂಡು ಈ ತಂತ್ರಾಂಶವೇ ನಿರ್ಧರಿಸಲಿದೆ. ಕಾಮಗಾರಿ ಬೇಡಿಕೆಯು ಆ ಸ್ಥಳಕ್ಕೆ ಸೂಕ್ತವಾಗಿದ್ದರೆ, ಮಾತ್ರ ಕ್ರಿಯಾ ಯೋಜನೆಗೆ ಸೇರ್ಪಡೆಯಾಗುತ್ತದೆ. ಇಲ್ಲದಿದ್ದರೆ ಅವಕಾಶ ಸಿಗದು. ಒಂದು ವೇಳೆ ಬೇರೆ ಕಾಮಗಾರಿಗೆ ಜಾಗ ಸೂಕ್ತವಾಗಿದ್ದರೆ, ಅದನ್ನು ಜನರು, ರೈತರಿಗೆ ತಿಳಿಸಿ, ಅವರ ಬೇಡಿಕೆ ಮೇರೆಗೆ ಸೇರಿಸಲಾಗುತ್ತದೆ.