ಖತರ್ನಾಕ್​ ಕಳ್ಳ ಖಾಕಿ ಬಲೆಗೆ

ಕಲಬುರಗಿಯಲ್ಲಿ ಪೊಲೀಸರು ವಶಪಡಿಸಿಕೊಂಡಿರುವ ಚಿನ್ನ ಹಾಗೂ ಬೆಳ್ಳಿಯ ಸಾಮಗ್ರಿಗಳನ್ನು ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಡಿ. ವೀಕ್ಷಿಸಿದರು. ಡಿಸಿಪಿ ಪ್ರವಿಣ ನಾಯ್ಕ್​, ಎಸಿಪಿ ಶರಣಬಸಪ್ಪ ಸುಬೇದಾರ ಇದ್ದರು.
ಕಲಬುರಗಿಯಲ್ಲಿ ಪೊಲೀಸರು ವಶಪಡಿಸಿಕೊಂಡಿರುವ ಚಿನ್ನ ಹಾಗೂ ಬೆಳ್ಳಿಯ ಸಾಮಗ್ರಿಗಳನ್ನು ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಡಿ. ವೀಕ್ಷಿಸಿದರು. ಡಿಸಿಪಿ ಪ್ರವಿಣ ನಾಯ್ಕ್​, ಎಸಿಪಿ ಶರಣಬಸಪ್ಪ ಸುಬೇದಾರ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • 22 ಲಕ್ಷ ಮೌಲ್ಯದ ನಗ-ನಾಣ್ಯ ವಶ
  • ಉಗ್ರ ಹನುಮಾನ ದೇಗುಲ ಸೇರಿ 4 ಕಳ್ಳತನ ಪ್ರಕರಣ ಪತ್ತೆ
 ಕಲಬುರಗಿ: ದೇವಾಲಯ ಸೇರಿ ಹಲವು ಮನೆಗಳಲ್ಲಿ ಕಳ್ಳತನ ಮಾಡಿ ತಲೆ ಮರೆಸಿಕೊಂಡಿದ್ದ ಕುಖ್ಯಾತ ಕಳ್ಳನನ್ನು ನಗರ ಪೊಲೀಸರು ಬಂಧಿಸಿದ್ದು, 22.65 ಲಕ್ಷ ಮೌಲ್ಯದ ನಗ-ನಾಣ್ಯ ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಡಿ. ಹೇಳಿದರು.
ಆಳಂದ ತಾಲೂಕಿನ ಧಂಗಾಪುರ ಗ್ರಾಮದ ಈಶ್ವರ ಜಾಧವ್​ (21) ಬಂಧಿತ. 213 ಗ್ರಾಂ ಚಿನ್ನಾಭರಣ ಹಾಗೂ ದೇವರ ಕೀರಿಟ ಸೇರಿ 3 ಕೆಜಿ ಬೆಳ್ಳಿಯ ಸಾಮಾಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ನಾಲ್ಕು ಕಳ್ಳತನ ಕೇಸ್​ ಪತ್ತೆಯಾಗಿವೆ. ಈತ ಹಿಂದೆ ಬಾಲಪರಾಧಿಯಾಗಿದ್ದ. ಚೌಕ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. 
ಜೇವರ್ಗಿ ಕಾಲನಿಯ ಉಗ್ರ ಹನುಮಾನ ದೇವಾಲಯ ಗರ್ಭಗುಡಿಯ ಬೀಗ ಮುರಿದು ದೇವರ ಕಿರೀಟ, ಪಾದುಕೆ, ಚೈನ ಸೇರಿ ಸುಮಾರು 1100 ಗ್ರಾಂ ದೇವರ ಬೆಳ್ಳಿಯ ಸಾಮಾನು ಕಳ್ಳತನ ಕುರಿತು ಟ್ರಸ್ಟ್​ ಉಪಾಧ್ಯಕ್ಷ ಹಣಮಂತರಾಯ ಪಾಟೀಲ್​ ದೂರು ನೀಡಿದ್ದರು. ಡಿಸಿಪಿಗಳಾದ ಶಾಲೂ, ಪ್ರವಿಣ ನಾಯ್ಕ್​, ದಕ್ಷಿಣ ಉಪ ವಿಭಾಗದ ಎಸಿಪಿ ಶರಣಬಸಪ್ಪ ಸುಬೇದಾರ ಮಾರ್ಗದರ್ಶನದಲ್ಲಿ ರಾವೇಂದ್ರ ನಗರ ಠಾಣೆ ಇನ್​ಸ್ಪೆಕ್ಟರ್​ ವಾಜೀದ್​ ಪಟೇಲ್​ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಬಳಿಕ ವಿಚಾರಣೆ ವೇಳೆ ಗಿರೀಶ ಇಂಡಿ ಸೇರಿ ಮೂರು ಮನೆಗಳಲ್ಲಿ ಕಳವು ಮಾಡಿದ್ದಾಗಿ ಬಾಯಿ ಬಿಟ್ಟಿದ್ದಾನೆ. ರಾವೇಂದ್ರ ನಗರ ಠಾಣೆಯ 2, ಅಶೋಕ ನಗರ ಠಾಣೆಯಲ್ಲಿ ಒಂದು ಕೇಸ್​ ದಾಖಲಾಗಿದ್ದು, ಶೇ.90 ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಿಸಿದರು.
ಮಲ್ಲನಗೌಡ, ಆರೇಶ, ಶರಣಬಸವ, ಕರಣಕುಮಾರ, ಬಸವರಾಜ,ರಾಜಕುಮಾರ, ಉಮೇಶ ಮೊದಲಾದವರಿಗೆ ಪೊಲೀಸ್​ ಆಯುಕ್ತರು ಪ್ರಶಂಸನಾ ಪತ್ರ ವಿತರಿಸಿದರು. ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಸೇರಿ ಸಿಬ್ಬಂದಿ ಕಾರ್ಯವನ್ನು ಶ್ಲಾಘಸಿದರು.ಡಿಸಿಪಿ ಪ್ರವಿಣ ನಾಯ್ಕ್​ ಇದ್ದರು.
"

ಕುಖ್ಯಾತ ಮನೆಗಳ್ಳನನ್ನು ಬಂಧಿಸಿ, 22.66 ಲಕ್ಷ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಗೌಂಡಿ, ಕಲ್ಲು ಕೆತ್ತುವುದು ಇನ್ನಿತರ ಕೆಲಸ ಮಾಡಿಕೊಂಡಿದ್ದ ಈತ ಹಣದ ಅವಶ್ಯಕತೆ ಬಿದ್ದಾಗ ತನ್ನ ಸಹಚರರ ಜತೆಗೂಡಿ ಕಳ್ಳತನ ಮಾಡುತ್ತಿದ್ದ. ಅವರ ಬಗ್ಗೆ ಮಾಹಿತಿ ಕಲೆ ಹಾಕಲಾಗಿದ್ದು, ಶೀಘ್ರ ಬಂಧಿಸಲಾಗುವುದು.

— > ಡಾ.ಶರಣಪ್ಪ ಎಸ್​.ಡಿ., ನಗರ ಪೊಲೀಸ್​ ಆಯುಕ್ತ

ಸಂಚಾರ ನಿಯಮ ಉಲ್ಲಂಘನೆ, ನಾಳೆಯಿಂದ ದಂಡ

ನಗರದಲ್ಲಿ ಹೆಲ್ಮೆಟ್​ ಧರಿಸದಿರುವುದು ಸೇರಿ ಸಂಚಾರ ನಿಯಮ ಪಾಲನೆ ಮಾಡದವರಿಗೆ ಶುಕ್ರವಾರದಿಂದ ಜಾರಿಗೆ ಬರುವಂತೆ ಮುಲಾಜಿಲ್ಲದೆ ದಂಡ ವಿಧಿಸಲಾಗುವುದು ಎಂದು ಪೊಲೀಸ್​ ಆಯುಕ್ತ ಡಾ.ಶರಣಪ್ಪ ತಿಳಿಸಿದರು. ಸಂಚಾರ ವ್ಯವಸ್ಥೆಯನ್ನು ಸುಧಾರಿಸಲು ಹಾಗೂ ನಿಯಮಗಳನ್ನು ಪಾಲನೆ ಮಾಡುವ ಕುರಿತು ಕಳೆದ ಮೂರು ತಿಂಗಳಿಂದ ನಿರಂತರ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ವಿವಿಧ ಕಾರ್ಯಕ್ರಮ ನಡೆಸಲಾಗಿದೆ. ಅಲ್ಲದೆ ಅನೇಕರಿಗೆ ಎಚ್ಚರಿಕೆ ಸಂದೇಶ ನೀಡಲಾಗಿದೆ. ಇನ್ಮುಂದೆ ಎಚ್ಚರಿಕೆ ಸಂದೇಶ ರವಾನೆ ಬಂದ್​ ಮಾಡಲಾಗುವುದು. ಹೀಗಾಗಿ ಸಾರ್ವಜನಿಕರು ಸಹಕರಿಸಬೇಕು. ಸಂಚಾರ ನಿಯಮಗಳನ್ನು ಪಾಲನೆ ಮಾಡಬೇಕು. ಹೆಚ್ಚಿನ ಸಲ ನಿಯಮ ಉಲ್ಲಂಘನೆ ಮಾಡಿದರೆ ಚಾಲನಾ ಪರವಾನಗಿ ರದ್ದುಗೊಳಿಸಲು ಸಹ ಶಿಫಾರಸು ಮಾಡಲಾಗುವುದು. ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಆರು ಜನರ ಲೈಸನ್ಸ್​ ರದ್ದುಪಡಿಸಲಾಗಿದೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net