ಕಲಬುರಗಿ: ಹೆಚ್ಚಿನ ದರದಲ್ಲಿ ಕೃಷಿ ಪರಿಕರ ಮಾರಾಟ ಮಾಡುತ್ತಿರುವ ದೂರು ಆಧರಿಸಿ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಮತ್ತು ಇಲಾಖೆ ಅಧಿಕಾರಿಗಳ ತಂಡ ಜಿಲ್ಲೆಯ ವಿವಿಧ ಮಳಿಗೆಗಳಿಗೆ ಅನಿರೀಕ್ಷಿತ ದಾಳಿ ನಡೆಸಿದ್ದು, ಈವೇಳೆ 26 ಮಳಿಗೆಗಳಿಗೆ ಶೋಕಾಸ್ ನೋಟಿಸ್ ಹಾಗೂ 10 ಮಳಿಗೆಗಳಿಗೆ ಮಾರಾಟ ತಡೆ ನೀಡಿ ಆದೇಶಿಸಿದ್ದಾರೆ. ಜೇವರ್ಗಿಯಲ್ಲಿ 12 ಮಳಿಗೆ ಪರಿಶೀಲಿಸಿದ್ದು, 10ಕ್ಕೆ ಶೋಕಾಸ್ ನೋಟಿಸ್ ನೀಡಲಾಗಿದೆ. ಅಲ್ಲದೆ 10 ಮಳಿಗೆಗಳಿಗೆ ಮಾರಾಟಕ್ಕೆ ತಡೆ ನೀಡಲಾಗಿದೆ. ಯಡ್ರಾಮಿಯ 5, ಸೇಡಂ 5 ಹಾಗೂ ಚಿತ್ತಾಪುರದ 6 ಮಳಿಗೆಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಒಟ್ಟು 45.75 ಲಕ್ಷ ರೂ. ಮೌಲ್ಯದ ಕೃಷಿ ಪರಿಕರ/ರಸಗೊಬ್ಬರ ಮಾರಾಟ ಮಾಡಲಾಗಿತ್ತು. ಕೆ-ಕಿಸಾನ್ ತಂತ್ರಾಂಶದಲ್ಲಿ ರಸಗೊಬ್ಬರ ವಿತರಿಸುತ್ತಿರುವ ಕುರಿತು ಪರಿಶೀಲಿಸಲಾಯಿತು. ರಸಗೊಬ್ಬರದ ದಾಸ್ತಾನಿನ ವಿವರ, ಪಿಒಎಸ್ ದಾಸ್ತಾನು ಪರಿಶೀಲನೆ ನಡೆಸಿದರು. ಮಾರುಕಟ್ಟೆಯಲ್ಲಿನ ಗೋದಾಮುಗಳಿಗೆ ಭೇಟಿ ನಿಡಿ ಎಫ್ಸಿಒ ಉಲ್ಲಂಸಿದ ಮಾರಾಟಗಾರರಿಗೆ ನೋಟಿಸ್ ನೀಡಲಾಗಿದ್ದು, ಮಾರಾಟ ಪರವಾನಗಿ ಮೇಲೆ ಮುಂದಿನ ದಿನಗಳಲ್ಲಿ ಕಾನೂನು ಕ್ರಮ ಕೈಗೊಳ್ಳಲು ತಂಡ ನಿರ್ಧರಿಸಿದೆ. ಉಪ ಕೃಷಿ ನಿರ್ದೇಶಕ ಡಾ.ಬಾಲರಾಜ್ ಗಂಗರಾವ್, ಸೇಡಂ ಕೃಷಿ ಉಪ ನಿರ್ದೇಶಕಿ ಅನಸೂಯ ಹೂಗಾರ್ ಮತ್ತು ಸಂಬಂಧಿಸಿದ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು ತಂಡದಲ್ಲಿದ್ದರು.