ಬ್ಲೂ ಫಿಲ್ಮ್ ಮಾಡಿಸೋ, ಪೋಸ್ಟರ್ ಅಂಟಿಸೋ ವಿಕೃತ ಖಯಾಲಿ ಇನ್ನೂ ಹೋಗಿಲ್ಲ: ಸಿಎಂ ಡಿಕೆಶಿ ವಿರುದ್ಧ ಎಚ್‌ಡಿಕೆ ವಾಗ್ದಾಳಿ! | HD Kumaraswamy

HD Kumaraswamy | ಕೇಂದ್ರ ಸಚಿವ ಎಚ್​​.ಡಿ. ಕುಮಾರಸ್ವಾಮಿ
HD Kumaraswamy | ಕೇಂದ್ರ ಸಚಿವ ಎಚ್​​.ಡಿ. ಕುಮಾರಸ್ವಾಮಿ
Published on
ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾದ ಮೇಲಾದರೂ ಇಂತಹ ಪೋಸ್ಟರ್ ಅಂಟಿಸೋದು, ಬ್ಲೂ ಫಿಲ್ಮ್ ಮಾಡಿಸೋದು ಬಿಡ್ತಾರೆ ಅಂದುಕೊಂಡಿದ್ದೆ. ಆದರೆ ಆ ವಿಕೃತ ಖಯಾಲಿ ಇನ್ನು ಹೋಗಿಲ್ಲ ಎಂದು ಕೇಂದ್ರ ಸಚಿವ ಎಚ್​​​ ಡಿ ಕುಮಾರಸ್ವಾಮಿ (HD Kumaraswamy) ಅವರು ಸಿಎಂ ಡಿ ಕೆ ಶಿವಕುಮಾರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಬಿಡದಿಯಲ್ಲಿ ತಮ್ಮ ಕುಟುಂಬ ಸದಸ್ಯರು ಹಾಗೂ ಬಿಜೆಪಿ ನಾಯಕರ ವಿರುದ್ಧ ಅಂಟಿಸಲಾಗಿರುವ ಪೋಸ್ಟರ್‌ಗಳ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಎಚ್​​​​ಡಿಕೆ, ಕಾಂಗ್ರೆಸ್ ಸರ್ಕಾರದ ವಿರುದ್ಧ ಸಾಲು ಸಾಲು ಗಂಭೀರ ಆರೋಪಗಳನ್ನು ಮಾಡಿದರು.

ಆಸ್ತಿ ವಿಚಾರವಾಗಿ ಸ್ಪಷ್ಟನೆ

ಪೋಸ್ಟರ್‌ನಲ್ಲಿ ಉಲ್ಲೇಖಿಸಲಾಗಿರುವ ಆಸ್ತಿ ವಿವಾದದ ಆರೋಪಗಳನ್ನು ತಳ್ಳಿಹಾಕಿದ ಕುಮಾರಸ್ವಾಮಿ, ನನ್ನ ಹೆಸರಿನಲ್ಲಿರುವ 46 ಎಕರೆ ಜಮೀನು ನಾನು 40 ವರ್ಷಗಳ ಹಿಂದೆ ಕಷ್ಟಪಟ್ಟು ಸಂಪಾದಿಸಿರುವುದು. ಅದನ್ನು ಬಿಟ್ಟರೆ ನನಗೆ ಬೇರೆ ಯಾವುದೇ ಜಮೀನಿಲ್ಲ. ಆದರೆ ಪೋಸ್ಟರ್‌ನಲ್ಲಿ ನೂರು ಎಕರೆ ಎಂದು ಅಪಪ್ರಚಾರ ಮಾಡಲಾಗಿದೆ. ಅದೇ ರೀತಿ ಅನಿತಾ ಕುಮಾರಸ್ವಾಮಿ ಅವರು 36-37 ಎಕರೆ ಜಮೀನನ್ನು ಕಾನೂನುಬದ್ಧವಾಗಿ ಖರೀದಿ ಮಾಡಿದ್ದಾರೆ. ಕಷ್ಟಪಟ್ಟು ಕೊಂಡುಕೊಂಡ ಜಮೀನನ್ನು ಪೋಸ್ಟರ್‌ನಲ್ಲಿ ಹಾಕಿ ರಾಜಕೀಯ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು. ಬೆನಗಾನಹಳ್ಳಿಯಲ್ಲಿ ಸತ್ತವರ ಹೆಬ್ಬೆಟ್ಟು ಒತ್ತುಸಿ ಜಮೀನು ಲಪಟಾಯಿಸಿರುವ ವ್ಯಕ್ತಿಗಳು ಇವತ್ತು ನಮ್ಮ ವಿರುದ್ಧ ಪೋಸ್ಟರ್ ಹಾಕ್ತಿದ್ದಾರೆ. ಇಂತಹವರನ್ನು ಜನರು ನಂಬುತ್ತಾರಾ..? ಸಿಎಂ ಸ್ಥಾನದಲ್ಲಿರುವವರಿಗೆ ಕನಿಷ್ಠ ಸ್ಟಾಂಡರ್ಡ್ ಬೇಡವೇ..? ಎಂದು ಪ್ರಶ್ನಿಸಿದರು.

ವಿಪಕ್ಷ ನಾಯಕರ ವಿರುದ್ಧವೂ ಪೋಸ್ಟರ್​ ಸಮರ

ಕೇವಲ ತಮ್ಮ ಮೇಲಷ್ಟೇ ಅಲ್ಲದೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ, ವಿಧಾನಸಭೆಯ ಪ್ರತಿಪಕ್ಷ ನಾಯಕರಾದ ಆರ್. ಅಶೋಕ್, ವಿಧಾನ ಪರಿಷತ್​ನ ವಿಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ ಅವರ ಮೇಲೂ ಪೋಸ್ಟರ್ ಹಾಕಿರುವ ಬಗ್ಗೆ ಮಾತನಾಡಿದ ಕುಮಾರಸ್ವಾಮಿ ಅವರು, ನಾವು ತಪ್ಪು ಮಾಡಿದ್ದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಿ. ಈ ರೀತಿಯ ಬೆದರಿಕೆಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ, ನನ್ನದು ತೆರೆದ ಪುಸ್ತಕ ಎಂದು ಸವಾಲು ಹಾಕಿದರು. ಇದೇ ವೇಳೆ ಬಿಡದಿ ಟೌನ್‌ಶಿಪ್ ಯೋಜನೆ ಕುರಿತು ಮಾತನಾಡಿ, ನನ್ನ ಅವಧಿಯಲ್ಲಿ ಈ ಯೋಜನೆ ಮಾಡಲು ಹೊರಟಿದ್ದು ನಿಜ. ಒಂದು ವೇಳೆ ನನ್ನ ಹೆಸರು ಹೇಳಿಕೊಂಡು ದುಡ್ಡು ಹೊಡೆಯುವ ಅಥವಾ ಭೂಮಿ ಲಪಟಾಯಿಸುವ ಉದ್ದೇಶ ನನಗಿದ್ದಿದ್ದರೆ, ನಾನು ಎರಡನೇ ಬಾರಿ ಸಿಎಂ ಆಗಿದ್ದಾಗಲೇ ಅದನ್ನು ಜಾರಿಗೆ ತರುತ್ತಿದ್ದೆ. ಆದರೆ ಇವರಿಗೆ ಒಳ್ಳೆಯ ಕೆಲಸ ಮಾಡುವ ಉದ್ದೇಶವಿಲ್ಲ, ಯಾವುದನ್ನು ಮಾಡಿದರೂ ಬರೀ ದುಡ್ಡನ್ನೇ ನೋಡುತ್ತಾರೆ ಎಂದು ಟೀಕಿಸಿದರು.

ಕಾಂಗ್ರೆಸ್ ಶಾಸಕರಿಗೆ ಜೆಡಿಎಸ್ ನಾಯಕರ ಗಾಳ!...

ಕಾಂಗ್ರೆಸ್ ಶಾಸಕರಿಗೆ ಜೆಡಿಎಸ್ ನಾಯಕರ ಗಾಳ ಹಾಕುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾವು ಯಾವ ಆಪರೇಷನ್ ಮಾಡಲು ಸಾಧ್ಯ..? ನಮ್ಮದು ಒಂದು ಸಣ್ಣ ಪಕ್ಷ. ಅವರ ಕೈಯಲ್ಲಿ ಸರ್ಕಾರವಿದೆ, ಮ್ಯಾನ್ ಪವರ್, ಮಜಲ್ ಪವರ್ ಮತ್ತು ಹಣದ ಪವರ್ ಎಲ್ಲವೂ ಇದೆ. ಅವರ ಮುಂದೆ ನಾವು ಫೈಟ್ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಚುನಾವಣೆಯಲ್ಲಿ ಸ್ಪರ್ಧಿಸಿರುವ ಕುರಿತು ಸ್ಪಷ್ಟನೆ ನೀಡಿದ ಎಚ್​​ಡಿಕೆ, ನಮ್ಮ ಮತಗಳು ಚೆಲ್ಲಾಪಿಲ್ಲಿಯಾಗಬಾರದು ಮತ್ತು ನಮ್ಮ ಶಾಸಕರು ಒಟ್ಟಾಗಿ ಇರಬೇಕೆಂದು ಅಭ್ಯರ್ಥಿಯನ್ನು ಹಾಕಿದ್ದೇವೆ. ನಾವೇನೋ ಕುತಂತ್ರ ಮಾಡಿ ಗೆಲ್ಲುತ್ತೇವೆ ಎಂದು ಹೇಳುತ್ತಿಲ್ಲ. ನಮ್ಮ ಅಭ್ಯರ್ಥಿ ಆತ್ಮಸಾಕ್ಷಿಯ ಮತ ಕೇಳಿದ್ದಾರೆ. ನಮ್ಮ ಜೊತೆ ಬಿಜೆಪಿಯ ಹೆಚ್ಚುವರಿ ಮತಗಳೂ ಇವೆ ಎಂದರು. ಅಲ್ಲದೆ, ಕಾಂಗ್ರೆಸ್‌ನ ಆಂತರಿಕ ಜಗಳ ನಮಗೆ ಲಾಭ ತರುತ್ತದೆಯೇ ಎಂಬ ಪ್ರಶ್ನೆಗೆ, ಅದು ಭಗವಂತನ ಇಚ್ಛೆ, ಆದರೆ ಆ ರೀತಿ ನಡೆದು ಸರ್ಕಾರಕ್ಕೆ ಬಿಗಿಬೀಳಬೇಕು ಎನ್ನುವುದು ನನ್ನ ಅಭಿಪ್ರಾಯ ಎಂದರು.

ಚಲುವರಾಯಸ್ವಾಮಿ ಟೀಕೆಗೆ ನಕಾರ

ಕುಮಾರಸ್ವಾಮಿ ಅವರ ವಿರುದ್ಧ ಸಿಎಂ ಬಳಿ ದಾಖಲೆಗಳಿವೆ ಎಂಬ ಚಲುವರಾಯಸ್ವಾಮಿ ಅವರ ಹೇಳಿಕೆಗೆ ಕೌಂಟರ್ ಕೊಟ್ಟ ಹೆಚ್‌ಡಿಕೆ, ಅವರಿಗೆಲ್ಲ ನನ್ನ ಕಾರ್ಯಕರ್ತರೇ ಉತ್ತರ ಕೊಡುತ್ತಾರೆ. ಮೊದಲು ಅವರು ಎಲ್ಲಿದ್ದರು ಎಂಬುದು ಗೊತ್ತಿದೆ. ಪಾಪ, ಅವರು ತಮ್ಮ ಕುರ್ಚಿ ಉಳಿಸಿಕೊಳ್ಳಲು ಒದ್ದಾಡುತ್ತಿದ್ದಾರೆ. ಅಂತವರ ಬಗ್ಗೆ ಚರ್ಚೆ ಮಾಡಿ ನಾನು ಸಣ್ಣವನಾಗಲು ಬಯಸುವುದಿಲ್ಲ ಎಂದು ಲೇವಡಿ ಮಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net