_1769883096016.webp?w=480&auto=format%2Ccompress&fit=max)
_1769883096016.webp?w=480&auto=format%2Ccompress&fit=max)
ರಾಜ್ಯ, ಜಿಲ್ಲಾ, ತಾಲೂಕು ಮಟ್ಟದಲ್ಲಿ ಭಾನುವಾರ ಮಾಚಿದೇವರ ಜಯಂತಿ ಆಚರಣೆಯೇನೋ ನಡೆಯುತ್ತಿದೆ. ಆದರೆ ಜನಸಂಖ್ಯೆ ದೃಷ್ಟಿಯಿಂದ ಸಣ್ಣ ಸಮುದಾಯವಾಗಿರುವ ಮಡಿವಾಳರ ಬೇಡಿಕೆಗಳು ದಶಕಗಳಿಂದ ಈಡೇರದೆ ಉಳಿದಿವೆ. ಸರ್ಕಾರದ ಅಂಕಿಅಂಶದ ಪ್ರಕಾರ ರಾಜ್ಯದಲ್ಲಿ ಮಡಿವಾಳರ ಸಂಖ್ಯೆ 7 ಲಕ್ಷ. ಆದರೆ ತಮಗಿಂತ 10 ಪಟ್ಟು ಹೆಚ್ಚಿಗೆ ಜನಸಂಖ್ಯೆಯಿರುವ ಸಮುದಾಯಗಳ ಜತೆ ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಹೋರಾಡಬೇಕಾದ ಅನಿವಾರ್ಯತೆ ಅವರದು. ಮಡಿವಾಳ ಸಮುದಾಯ ಇಡೀ ರಾಜ್ಯದಲ್ಲಿ ಹಂಚಿಹೋಗಿದ್ದು, ಯಾವುದೇ ಎಂಎಲ್ಎ, ಎಂಪಿ ಕ್ಷೇತ್ರಗಳಲ್ಲೂ ನಿರ್ಣಾಯಕರಲ್ಲದೇ ಇರುವುದರಿಂದ ಇವರ ಬೇಡಿಕೆಗಳ ಕಡತ ದಶಕಗಳಿಂದ ಮುಂದೆ ಸಾಗುತ್ತಿಲ್ಲ.
ಪರಿಶಿಷ್ಟ ಜಾತಿಗೆ ಸೇರಿಸಿ: ಬಟ್ಟೆ ತೊಳೆಯುವ ಕಸುಬಿನ ಮಡಿವಾಳರು ಆರ್ಥಿಕವಾಗಿ, ಸಾಮಾಜಿಕ ವಾಗಿ ಬಹಳ ಹಿಂದುಳಿದಿದ್ದಾರೆ. ಹಿಂದಿನ ಕಾಲದಲ್ಲಿದ್ದಂತೆ ಇಡೀ ಊರಿನವರ ಬಟ್ಟೆಗಳನ್ನು ಒಗೆದು, ಇಸ್ತ್ರಿ ಮಾಡುವ ಸ್ಥಿತಿ ಈಗಿಲ್ಲ. ಹಾಗಂತ ಕುಲಕಸುಬು ಬಿಟ್ಟು ಉದ್ಯೋಗ ಮಾಡುವ ಆರ್ಥಿಕ ಸಾಮರ್ಥ್ಯ, ಶಿಕ್ಷಣ ಎಲ್ಲರಿಗೂ ಇಲ್ಲ. ಉದ್ಯೋಗದಲ್ಲಿ ಮೀಸಲಾತಿ ದೊರೆಯುತ್ತಿಲ್ಲ. ಈಗ ಸಮುದಾಯ 2ಎ ಪ್ರವರ್ಗದಲ್ಲಿದೆ. ಈ ಪ್ರವರ್ಗದಲ್ಲಿ 116 ಜಾತಿಗಳಿದ್ದು, 50-60 ಲಕ್ಷ ಜನಸಂಖ್ಯೆ ಇರುವ ಸಮುದಾಯಗಳೊಂದಿಗೆ ಹೋರಾಡುವುದು ಅಷ್ಟು ಸುಲಭವಲ್ಲ. ಹಾಗಾಗಿ ತಮ್ಮನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂಬ ಬೇಡಿಕೆಯನ್ನು ರಾಜ್ಯ ಮಡಿವಾಳರ ಸಂಘ ದಶಕಗಳಿಂದ ಮುಂದಿಡುತ್ತಲೇ ಬಂದಿದೆ. ಆದರೆ ಈವರೆಗೂ ಅಗಸರ ಬೇಡಿಕೆ ಆಳುವ ಅರಸರಿಗೆ ಅರ್ಥವಾಗಿಲ್ಲ. 2009ರಲ್ಲಿ ಅಂದಿನ ಸಿಎಂ ಯಡಿಯೂರಪ್ಪ ಅವರ ಸೂಚನೆಯಂತೆ ಮೈಸೂರು ವಿವಿ ಪ್ರೊಫೆಸರ್ ಅನ್ನಪೂರ್ಣಮ್ಮ ನೇತೃತ್ವದಲ್ಲಿ ಕುಲಶಾಸ್ತ್ರೀಯ ಅಧ್ಯಯನ ನಡೆಸಿ ಸಿದ್ಧಪಡಿಸಿದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ನಂತರ ಸಚಿವ ಸಂಪುಟದ ಮುಂದೆ ವರದಿ ಚರ್ಚೆಗೆ ಬಂದಿತ್ತು. ಆದರೆ ಕೆಲ ಪ್ರಭಾವಿ ಸಚಿವರ ವಿರೋಧದಿಂದಾಗಿ ವರದಿ ಅಂಗೀಕಾರವಾಗಿಲ್ಲ. ಕೇಂದ್ರಕ್ಕೆ ಶಿಫಾರಸೂ ಮಾಡಿಲ್ಲ. ದೇಶದ 17 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಡಿವಾಳ ಸಮುದಾಯಕ್ಕೆ ಪರಿಶಿಷ್ಟ ಜಾತಿ ಮಾನ್ಯತೆ ಇದೆ.
ಧೋಬಿಘಾಟ್, ಶಿಕ್ಷಣ ಸಂಸ್ಥೆಗೆ ಜಾಗವಿಲ್ಲ: ಬೆಂಗಳೂರಿನಲ್ಲಿ ಸದ್ಯ 32 ಧೋಬಿಘಾಟ್ಗಳಿವೆ. ಆದರೆ ಅವುಗಳ ಹಕ್ಕುಪತ್ರವನ್ನು ಇಂದಿಗೂ ಕೊಟ್ಟಿಲ್ಲ. ಬಟ್ಟೆ ತೊಳೆಯಲು ಬಳಸುವ ಯಂತ್ರಗಳ ವಿದ್ಯುತ್ ಸಂಪರ್ಕಕ್ಕೆ ವಾಣಿಜ್ಯ ದರ ಇರುವುದರಿಂದ ಲಕ್ಷಾಂತರ ರೂ. ಬಿಲ್ ಕಟ್ಟಬೇಕಿದೆ. ರಿಯಾಯಿತಿ ದರದಲ್ಲಿ ವಿದ್ಯುತ್ ನೀಡುವಂತೆ ಸಂಘ ಹಲವು ವರ್ಷಗಳಿಂದ ವಿನಂತಿ ಮಾಡಿದರೂ ಪ್ರಯೋಜನವಾಗಿಲ್ಲ. ಆಸ್ಪತ್ರೆಗಳ ಬಟ್ಟೆಗಳನ್ನು ಒಗೆಯುವುದರಿಂದ ಮಡಿವಾಳ ಸಮುದಾಯದವರಿಗೆ ರೋಗ ಭೀತಿಯೂ ಇದೆ. ಕಾರ್ವಿುಕ ಇಲಾಖೆಯಿಂದಲೂ ಯಾವುದೇ ಸೌಲಭ್ಯ ದೊರೆಯುತ್ತಿಲ್ಲ. ಹಲವು ಜಿಲ್ಲೆ, ತಾಲೂಕುಗಳಲ್ಲಿ ಧೋಬಿಘಾಟ್ಗೆ
ಜಾಗವಿಲ್ಲ. ಸಮುದಾಯದ ಮಕ್ಕಳ ವಿದ್ಯಾಭ್ಯಾಸಕ್ಕೆ ಶಿಕ್ಷಣ ಸಂಸ್ಥೆ ಸ್ಥಾಪಿಸಲು ಜಾಗ ನೀಡುವಂತೆ ವಿನಂತಿ ಮಾಡಿದರೂ ಪ್ರಯೋಜನವಾಗಿಲ್ಲ. ರಾಜಧಾನಿಯಲ್ಲಿ ಸಂಘದ ಸದಸ್ಯರು ಹಣ ಖರ್ಚು ಮಾಡಿ ಕೇವಲ 30 ವಿದ್ಯಾರ್ಥಿಗಳಿಗೆ ಅವಕಾಶ ನೀಡಲು ಸಾಧ್ಯವಾಗಿದೆ. ಅದರ ಕಟ್ಟಡ ಶಿಥಿಲಗೊಂಡಿದೆ. ನೂತನ ಕಟ್ಟಡಕ್ಕೆ ಅನುದಾನ, ಶಿಕ್ಷಣ ಸಂಸ್ಥೆಗೆ ಜಾಗ, ರಾಜ್ಯದ ಬೇರೆಡೆ ದೋಬಿಘಾಟ್ಗಳಿಗೆ ಜಾಗ ನೀಡಬೇಕೆಂಬುದು ಸಮುದಾಯದ ಒತ್ತಾಯ.
ಮಡಿವಾಳ ಸಮುದಾಯದ ಹೋರಾಟಕ್ಕೆ ಸ್ಪಂದಿಸಿದವರು ಮಾಜಿ ಸಿಎಂ ಯಡಿಯೂರಪ್ಪ ಮತ್ತು ಹಾಲಿ ಸಿಎಂ ಸಿದ್ದರಾಮಯ್ಯ ಮಾತ್ರ. ಸಮುದಾಯದ ಗುರುಪೀಠಕ್ಕೆ 3 ಕೋಟಿ ರೂ. ಅನುದಾನ ನೀಡಿ, ಮಾಚಿದೇವರ ಜಯಂತಿಗೆ ಆದೇಶ ಮಾಡಿದ ಸಿದ್ದರಾಮಯ್ಯ, ಪರಿಶಿಷ್ಟ ಜಾತಿ ಪಟ್ಟಿಗೂ ಸೇರಿಸಿದರೆ ಸಮುದಾಯದ ಅಭಿವೃದ್ಧಿಗೆ ಅವಕಾಶವಾಗುತ್ತದೆ.- ಬಿ.ಆರ್. ಪ್ರಕಾಶ್ ಮಡಿವಾಳರ ಸಂಘದ ಪ್ರಧಾನ ಕಾರ್ಯದರ್ಶಿ
-ಪ್ರಶಾಂತ್ ರಿಪ್ಪನ್ಪೇಟೆ