SIR ಪ್ರಕ್ರಿಯೆಗಾಗಿ ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ: ಡಿಸಿಎಂ ಪರಮೇಶ್ವರ್ ಹೇಳಿಕೆ! G Parameshwara

SIR ಪ್ರಕ್ರಿಯೆಗಾಗಿ ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ: ಡಿಸಿಎಂ ಪರಮೇಶ್ವರ್ ಹೇಳಿಕೆ! G Parameshwara
SIR ಪ್ರಕ್ರಿಯೆಗಾಗಿ ಶಾಶ್ವತ ನಿವಾಸ ಪ್ರಮಾಣಪತ್ರ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ: ಡಿಸಿಎಂ ಪರಮೇಶ್ವರ್ ಹೇಳಿಕೆ! G Parameshwara
Published on

ಪ್ರಮುಖ ಮುಖ್ಯಾಂಶಗಳು

  • ಹೊರರಾಜ್ಯದವರಿಗಲ್ಲ ಹತ್ತು ವರ್ಷ ಬೆಂಗಳೂರಿನಲ್ಲಿ ಇದ್ದವರಿಗಷ್ಟೇ ಪಿಆರ್‌ಸಿ ನೀಡಿಕೆ
  • ಕೇಂದ್ರ ಸರ್ಕಾರದ ಮಾನದಂಡಕ್ಕೆ ವಿರುದ್ಧವಾಗಿ ನಾವು ನಿರ್ಧಾರ ತಳೆದಿಲ್ಲ ಎಂದ ಪರಮೇಶ್ವರ್
  • ಹೈಕಮಾಂಡ್ ಒಪ್ಪಿಗೆ ಸಿಕ್ಕ ತಕ್ಷಣವೇ ರಾಜ್ಯ ಸಚಿವ ಸಂಪುಟ ವಿಸ್ತರಣೆ
  • ಬರ ನಿರ್ವಹಣೆಗೆ ಹಣವಿಲ್ಲ ಎಂಬ ಬಿಜೆಪಿಯ ಆರೋಪ ಸುಳ್ಳು ಎಂದ ಪರಮೇಶ್ವರ್
ಬೆಂಗಳೂರು: ಕೇಂದ್ರ ಸರ್ಕಾರದ ಮಾನದಂಡಗಳಿಗೆ ವಿರುದ್ಧವಾಗಿ ನಾವು ಯಾವುದೇ ನಿರ್ಧಾರ ತಳೆದಿಲ್ಲ. ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯ ವೇಳೆ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದಷ್ಟೇ ಸರ್ಕಾರದಿಂದ ಅಧಿಕೃತವಾಗಿ ಶಾಶ್ವತ ನಿವಾಸ ಪ್ರಮಾಣಪತ್ರ ನೀಡಲಾಗುತ್ತಿದೆಯೇ ಹೊರತು, ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್( G Parameshwara ) ಅವರು ಬಿಜೆಪಿ ಆಕ್ಷೇಪಣೆಗೆ ತಿರುಗೇಟು ನೀಡಿದ್ದಾರೆ.
ಇಂದು ತಮ್ಮ ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಂಚಿನಿಂದಲೂ ತಹಸಿಲ್ದಾರ್ ಮಟ್ಟದಲ್ಲಿ ಜಾತಿ ಹಾಗೂ ವಾಸಸ್ಥಳ ಪ್ರಮಾಣಪತ್ರಗಳನ್ನು ನೀಡುವ ವ್ಯವಸ್ಥೆ ಜಾರಿಯಲ್ಲಿದ್ದು, ಈಗ ಸರ್ಕಾರವೇನೂ ಹೊಸ ನಿಯಮ ರೂಪಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಒಟ್ಟು 13 ಪ್ರಕಾರದ ದಾಖಲೆಗಳನ್ನು ಕೇಳಲಾಗಿದ್ದು, ಎಲ್ಲ ನಾಗರಿಕರ ಬಳಿಯೂ ಈ ಎಲ್ಲಾ ದಾಖಲೆಗಳು ಲಭ್ಯವಿರುವುದಿಲ್ಲ. ಅಂತಹ ಜನರಿಗೆ ತೊಂದರೆಯಾಗಬಾರದು ಎಂಬ ಉಲ್ಲೇಖದಿಂದ ಶಾಶ್ವತ ನಿವಾಸ ಪ್ರಮಾಣಪತ್ರ ವಿತರಿಸಲಾಗುತ್ತಿದೆ ಎಂದು ವಿವರಿಸಿದರು. ಇದೇ ವೇಳೆ 'ಅನ್ಯ ರಾಜ್ಯದವರಿಗೆ ಸರ್ಕಾರ ಹೆಚ್ಚಿನ ಅನುಕೂಲ ಮಾಡಿಕೊಡುತ್ತಿದೆ' ಎಂಬ ವಿಪಕ್ಷಗಳ ಆರೋಪವನ್ನು ತಳ್ಳಿಹಾಕಿದ ಅವರು, ಕನಿಷ್ಠ 10 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿರುವವರಿಗೆ ಮಾತ್ರ ಈ ದಾಖಲೆಗಳನ್ನು ನೀಡಲಾಗುತ್ತಿದೆಯೇ ಹೊರತು, ಹೊರರಾಜ್ಯದವರಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.

ಪರಿಗಣಿಸುವ ಸಾಧ್ಯತೆಯಿದೆ

ಇದೇ ಸಂದರ್ಭದಲ್ಲಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಹಾಗೂ ರಾಜ್ಯದಲ್ಲಿ ಎದುರಾಗಿರುವ ಬರ ಪರಿಸ್ಥಿತಿಯ ನಿರ್ವಹಣೆ ಕುರಿತಂತೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಸ್ಪಷ್ಟನೆ ನೀಡಿದರು. ಸಚಿವ ಸಂಪುಟ ಪುನಾರಚನೆ ಅಥವಾ ವಿಸ್ತರಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಹೈಕಮಾಂಡ್ ಜತೆ ಚರ್ಚೆಗಳು ನಡೆಯುತ್ತಿದ್ದು, ಹೈಕಮಾಂಡ್‌ನಿಂದ ಅಧಿಕೃತ ಒಪ್ಪಿಗೆ ಸಿಕ್ಕ ತಕ್ಷಣವೇ ಮುಂದಿನ ಪ್ರಕ್ರಿಯೆಗಳು ವೇಗವಾಗಿ ನಡೆಯಲಿವೆ. ಹೆಸರುಗಳು ಅಂತಿಮಗೊಂಡ ಬಳಿಕ ರಾಜ್ಯಪಾಲರ ಸಮಯ ಪಡೆದು ಪ್ರಮಾಣ ವಚನ ಸ್ವೀಕಾರಕ್ಕೆ ದಿನಾಂಕ ನಿಗದಿಪಡಿಸಲಾಗುವುದು. ಸಂಪುಟದಲ್ಲಿ ಯುವಕರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡುವ ಕುರಿತು ಮಾನದಂಡಗಳನ್ನು ಚರ್ಚಿಸಲಾಗುತ್ತಿದ್ದು, ಇದನ್ನು ಪರಿಗಣಿಸುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದರು.

ಕಾದು ನೋಡಬೇಕಿದೆ

ಇನ್ನು 2028ರ ವಿಧಾನಸಭೆ ಚುನಾವಣೆಯ ಲೆಕ್ಕಾಚಾರಗಳನ್ನು ಇಟ್ಟುಕೊಂಡು ಸಂಪುಟ ವಿಸ್ತರಣೆ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನನಗ ಯಾವುದೇ ನಿಖರ ಮಾಹಿತಿಯಿಲ್ಲ. ಸಭೆಗೆ ನಮ್ಮನ್ನು ಕರೆದಿಲ್ಲವಾದರೂ ಚರ್ಚೆಯ ವೇಳೆಯಲ್ಲಿ ಈ ವಿಷಯವೂ ಸೇರಿಕೊಳ್ಳುವ ಸಾಧ್ಯತೆಯಿದೆ. ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದಾಗಲೂ ಸೂಕ್ತ ಮಾನದಂಡಗಳನ್ನು ಇಟ್ಟುಕೊಂಡೇ ನಿರ್ಧಾರ ತಳೆಯಲಾಗುತ್ತಿತ್ತು. ಈ ಬಾರಿಯೂ ಯಾವ ಸೂತ್ರದಡಿ ವಿಸ್ತರಣೆ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ ಎಂದರು.

ಹಣವಿಲ್ಲದೆ ಇದೆಲ್ಲವೂ ಸಾಧ್ಯವೇ?

ಇದೇ ವೇಳೆ ರಾಜ್ಯದಲ್ಲಿನ ಬರ ಪರಿಸ್ಥಿತಿ ಕುರಿತು ಮಾತನಾಡಿದ ಡಿಸಿಎಂ, ಬರ ನಿರ್ವಹಣೆಗೆ ಸಂಬಂಧಿಸಿದಂತೆ ಎಲ್ಲಾ ತಾಲೂಕುಗಳ ಜಿಲ್ಲಾಧಿಕಾರಿಗಳಿಂದ ಸಮಗ್ರ ವರದಿ ಕೇಳಲಾಗಿದ್ದು, ವರದಿ ಬಂದ ಬಳಿಕ ಸಂಪೂರ್ಣ ಚಿತ್ರಣ ಸಿಗಲಿದೆ ಎಂದರು. ಸರ್ಕಾರದ ಬಳಿ ಹಣವಿಲ್ಲ ಎಂಬ ಬಿಜೆಪಿಯ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ ಅವರು, ಈಗಾಗಲೇ ಕುಡಿಯುವ ನೀರಿಗಾಗಿ 5 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಅಲ್ಲದೆ, ಜಿಲ್ಲಾಧಿಕಾರಿಗಳ ಖಾತೆಯಲ್ಲಿ 329 ಕೋಟಿ ರೂ. ಲಭ್ಯವಿದ್ದು, ಬರ ಪರಿಹಾರ ಕಾಮಗಾರಿಗಳಿಗಾಗಿ ಪ್ರತೀ ತಾಲೂಕಿಗೆ 1 ಕೋಟಿ ರೂ. ನೀಡಲಾಗುವುದು ಎಂದು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಹಣವಿಲ್ಲದೆ ಇದೆಲ್ಲವೂ ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಬಿಜೆಪಿ ರಾಜಕೀಯ ಲಾಭಕ್ಕಾಗಿ ಸುಳ್ಳು ಆರೋಪ ಮಾಡುತ್ತಿದೆ ಎಂದು ಕಿಡಿಕಾರಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net