ಕೆಪಿಎಸ್‌ಸಿ ಹಗರಣ ಸಾಹುಕಾರ್ ಸುಳಿವಿಲ್ಲ!

kpsc-scam
kpsc-scam
Published on

ಪ್ರಮುಖ ಮುಖ್ಯಾಂಶಗಳು

  • ಜಾಮೀನು ಅರ್ಜಿ ವಜಾಗೊಂಡ ಬೆನ್ನಲ್ಲೇ ಸಿಐಡಿ ಹುಡುಕಾಟ
  • ಮೇಲ್ಮನವಿಗೆ ಶಿವಶಂಕರಪ್ಪ ಸಿದ್ಧತೆ
  • ಐಎಎಸ್ ಅಧಿಕಾರಿ ಕಸ್ಟಡಿ ಅವಧಿ ಇಂದು ಅಂತ್ಯ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)ದಲ್ಲಿ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ವಿಚಾರಣೆಗೆ ಹಾಜರಾಗಬೇಕಿದ್ದ ಪ್ರಮುಖ ಆರೋಪಿ, ಆಯೋಗದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಸುಳಿವಿಲ್ಲದಂತಾಗಿದ್ದು, ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ ಎನ್ನಲಾಗಿದೆ.
ವಿಚಾರಣೆಗೆ ಹಾಜರಾಗದೆ ಬಂಧನ ಭೀತಿಯಿಂದ ಹೈಕೋರ್ಟ್‌ಗೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿತ್ತು. ನಗರದ ಡಾಲರರ್ಸ್ ಕಾಲನಿಯಲ್ಲಿರುವ ಅವರ ನಿವಾಸದ ಮೇಲೆ ಸೋಮವಾರ ತಡರಾತ್ರಿ ಸಿಐಡಿ ಅಧಿಕಾರಿಗಳು ದಾಳಿ ನಡೆಸಿ ಮತ್ತೆ ತಪಾಸಣೆ ನಡೆಸಿದರು. ಈ ವೇಳೆ ಸಾಹುಕಾರ್ ಮನೆಯಲ್ಲಿ ಇರಲಿಲ್ಲ ಎಂದು ತನಿಖಾ ಮೂಲಗಳು ತಿಳಿಸಿವೆ. ಮಂಗಳವಾರ ಸಿಐಡಿ ವಿಚಾರಣೆಗೆ ಹಾಜರಾಗಬೇಕಿದ್ದ ಸಾಹುಕಾರ್ ನಾಪತ್ತೆಯಾಗಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ಮೇಲ್ಮನವಿಗೆ ಸಿದ್ಧತೆ:
ಸಾಹುಕಾರ್ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿರುವುದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಅವರ ಪರ ವಕೀಲರು ಸಿದ್ಧತೆ ನಡೆಸಿದ್ದಾರೆ. ಮೇಲ್ಮನವಿ, ಕಾನೂನು ಪ್ರಕ್ರಿಯೆವರೆಗೆ ಸಿಐಡಿಯಿಂದ ತಪ್ಪಿಸಿಕೊಳ್ಳಲು ಸಾಹುಕಾರ್ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಈಗಾಗಲೇ ಆರೋಪಿಗೆ ತನಿಖಾಧಿಕಾರಿಗಳು ಎರಡು ನೋಟಿಸ್ ನೀಡಿದ್ದಾರೆ. ಕೆಪಿಎಸ್‌ಸಿ ಹಗರಣದಲ್ಲಿ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್, ಕಿಂಗ್ ಪಿನ್ ಬಸವರಾಜ್ ಕನ್ನಾಳೆ ಅವರನ್ನು ವಿಚಾರಣೆಗೆ ಒಳಪಡಿಸಿರುವ ಅಧಿಕಾರಿಗಳು ಸಾಹುಕಾರ್ ಅಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ ಹಲವು ಮಾಹಿತಿ ಸಂಗ್ರಹಿಸಿದ್ದಾರೆ. ವಿಚಾರಣೆಗೆ ಹಾಜರಾದರೆ ಸಾಹುಕಾರ್‌ಗೆ ಏನೆಲ್ಲ ಪ್ರಶ್ನೆಗಳನ್ನು ಕೇಳಬೇಕು ಎಂಬ ಕುರಿತು ಪಟ್ಟಿ ಸಿದ್ಧಪಡಿಸಿಕೊಂಡಿದ್ದಾರೆ.
ಕಸ್ಟಡಿ ಅವಧಿ ಇಂದು ಅಂತ್ಯ
ಪಶುವೈದ್ಯ ಅಧಿಕಾರಿಗಳ ನೇಮಕಾತಿ ಹಗರಣದ ತನಿಖೆಗೆ ಐಎಎಸ್ ಅಧಿಕಾರಿ ಹಾಗೂ ಆರೋಪಿ ಬಸವರಾಜ್ ಕನ್ನಾಳೆಗೆ ಸಿಐಡಿ 10ದಿನಗಳ ಕಾಲ ಕಸ್ಟಡಿಗೆ ಪಡೆದಿತ್ತು. ಇಂದು (ಸೆ.9)ರಂದು ಕಸ್ಟಡಿ ಅವಧಿ ಮುಕ್ತಾಯಗೊಂಡಿದೆ. ಇಬ್ಬರ ವಿಚಾರಣೆ ವೇಳೆ ಅಧಿಕಾರ ದುರುಪಯೋಗ, ಭ್ರಷ್ಟಾಚಾರ, ಕರ್ತವ್ಯಲೋಪ ಸೇರಿ ಆಯೋಗ ನಡೆಸಿರುವ ಹಲವು ನೇಮಕಾತಿಗಳಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಆದ್ದರಿಂದ ಇನ್ನಷ್ಟು ದಿನಗಳ ಕಾಲ ಹೆಚ್ಚುವರಿ ವಿಚಾರಣೆ ನಡೆಸಲು ಸಿಐಡಿ ಅಧಿಕಾರಿಗಳು ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ.
ಶಾಂತಾ ಹೊಸಮನಿ ನಾಪತ್ತೆಯಾಗಿ 3 ವಾರ !
ಕೆಪಿಎಸ್‌ಸಿ ಪರೀಕ್ಷಾ ನೇಮಕಾತಿ ಹಗರಣದಲ್ಲಿ ಭಾಗಿಯಾಗಿರುವ ಕಲಬುರಗಿ ಮೂಲದ ಆರೋಪಿ ಶಾಂತಾ ಹೊಸಮನಿ ನಾಪತ್ತೆಯಾಗಿ ಮೂರುವಾರ ಕಳೆದರೂ ಇದುವರೆಗೆ ಪತ್ತೆಯಾಗಿಲ್ಲ. ಸಿಐಡಿ ಅಧಿಕಾರಿಗಳ ತಂಡ ಶಾಂತಾ ಹೊಸಮನಿ ಬೆನ್ನು ಬಿದ್ದಿದ್ದು ಹುಡುಕಾಟ ಮುಂದುವರೆಸಿದ್ದಾರೆ. ಆರೋಪಿ ವಿದೇಶಕ್ಕೆ ಪರಾರಿಯಾಗುವ ಸಾಧ್ಯತೆ ಇರುವುದರಿಂದ ಹೊಸಮನಿ ವಿರುದ್ಧ ಲುಕ್ ಔಟ್ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು. ವಿಚಾರಣೆಗೆ ಹಾಜರಾಗುಂತೆ ಸಿಐಡಿ ನೋಟಿಸ್ ನೀಡಿದ ಬೆನ್ನಲ್ಲೇ ಶಾಂತ ಹೊಸಮನಿ ಮೊಬೈಲ್ ಸ್ವಿಚ್‌ಆ್ ಮಾಡಿಕೊಂಡಿದ್ದರು. ಈ ಬಗ್ಗೆ ಸಿಐಡಿ ತಂಡ ಆರೋಪಿ ವಿರುದ್ಧ ತಾಂತ್ರಿಕ ಮಾಹಿತಿ, ಮೊಬೈಲ್ ಲೋಕೆಷನ್ ಪತ್ತೆಗೆ ಮುಂದಾಗಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿ ಪತ್ತೆ ಹಚ್ಚುವುದು ಅಧಿಕಾರಿಗಳಿಗೆ ಕಷ್ಟಸಾಧ್ಯ ಎಂಬಂತಾಗಿದೆ.

ಕುಟುಂಬಸ್ಥರಿಗೂ ನೋಟಿಸ್ !
ಕೆಪಿಎಸ್‌ಸಿ ಹಗರಣದಲ್ಲಿ ಶಿವಶಂಕರಪ್ಪನ ಸಾಹುಕಾರ್ ಅಷ್ಟೇ ಅಲ್ಲದೇ ಅವರ ಕುಟುಂಬಸ್ಥರು ಪಾಲ್ಗೊಂಡಿರುವುದನ್ನು ಪತ್ತೆ ಮಾಡಿರುವ ಸಿಐಡಿ ಅವರಿಗೂ ನೋಟಿಸ್ ನೀಡಲು ಮುಂದಾಗಿದೆ. ಈಗಾಗಲೇ ಪುತ್ರಿ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ತನಿಖೆ ನಡೆಸಿರುವ ಅಧಿಕಾರಿಗಳು, ಪುತ್ರನ ಖಾತೆಗೆ ಲಕ್ಷಾಂತರ ರೂ. ವರ್ಗಾವಣೆಯಾಗಿರುವುದು ಬೆಳಕಿಗೆ ಬಂದಿದೆ. ಕುಟುಂಬದ ಸದಸ್ಯರು ಕೆಲವರೊಂದಿಗೆ ದೂರವಾಣಿ ಮೂಲಕ ಮಾತನಾಡಿರುವ ಮಾಹಿತಿ ತನಿಖೆಯಿಂದ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net