ಶಿಸ್ತಿನ ಹೆಸರಿನಲ್ಲಿ ದೌರ್ಜನ್ಯಕ್ಕೆ ಅವಕಾಶವಿಲ್ಲ| high court

High court
High court
Published on

ಪ್ರಮುಖ ಮುಖ್ಯಾಂಶಗಳು

  • ಐಪಿಎಸ್​ ಅಧಿಕಾರಿ ವಿರುದ್ಧ ಪ್ರಕರಣ ರದ್ದಿಲ್ಲ
  • ಅರ್ಜಿ ವಜಾಗೊಳಿಸಿದ ಹೈಕೋರ್ಟ್​
ಬೆಂಗಳೂರು: ಶಿಸ್ತು ಪಾಲಿಸದ ಅಧಿಕಾರಿಗಳನ್ನು ಆ ಬಗ್ಗೆ ಮೇಲಾಧಿಕಾರಿಗಳು ವಿಚಾರಿಸುವುದು ಕರ್ತವ್ಯದ ಭಾಗವಾಗಿರಬಹುದು. ಆದರೆ, ಅಧಿಕಾರಿಯನ್ನು ಕಚೇರಿಗೆ ಕರೆಸಿ ಹಲ್ಲೆ ನಡೆಸುವುದು ಸರ್ಕಾರಿ ಕರ್ತವ್ಯದ ಭಾಗವಲ್ಲ ಎಂದಿರುವ ಹೈಕೋರ್ಟ್​, ಸಬ್​ ಇನ್​ಸ್ಪೆಕ್ಟರ್​ ಒಬ್ಬರಿಗೆ ಹಲ್ಲೆ ಮಾಡಿದ ಆರೋಪದಲ್ಲಿ ಐಪಿಎಸ್​ ಅಧಿಕಾರಿ ವಿಕಾಸ್​ ಕುಮಾರ್​ ವಿಕಾಸ್​ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಪಡಿಸಲು ನಿರಾಕರಿಸಿದೆ.
2012ರ ಜನವರಿಯಲ್ಲಿ ಚಿಕ್ಕಮಗಳೂರಿನಲ್ಲಿ ಆಯೋಜಿಸಿದ್ದ ಇಲಾಖೆಯ ಕ್ರೀಡಾಕೂಟಕ್ಕೆ ಮಲ್ಲಂದೂರು ಠಾಣೆಯಲ್ಲಿ ಪಿಎಸ್​ಐ ಆಗಿದ್ದ ಜಿ.ಎಸ್​. ಚಂದ್ರಶೇಖರ್​ ಅವರು ಗೈರಾಗಿದ್ದರು. ಈ ಬಗ್ಗೆ ವೃತ್ತ ನಿರೀಕ್ಷಕರಾಗಿದ್ದ ಪಂಚಾಕ್ಷರಯ್ಯ ಅವರು ಇಲಾಖಾ ವಿಚಾರಣೆಯ ಬೆದರಿಕೆ ಹಾಕಿ ಅಂದಿನ ಚಿಕ್ಕಮಗಳೂರು ಎಸ್​ಪಿಯಾಗಿದ್ದ ವಿಕಾಸ್​ ಕುಮಾರ್​ ವಿಕಾಸ್​ ಅವರಿಗೆ ತಿಳಿಸಿದ್ದರು. ಎಸ್​ಪಿ ತಮ್ಮ ಕಚೇರಿಗೆ ಕರೆಸಿಕೊಂಡು ನಿಂದಿಸಿ, ಪೇಪರ್​ ವೇಯ್ಟ್​ ಎಸೆದು ಹಲ್ಲೆ ನಡೆಸಿದ್ದರು. ಅದು ಹಣೆಗೆ ಬಡಿದು ಗಾಯವಾಗಿತ್ತು ಎಂದು ಆರೋಪಿಸಿ ಚಂದ್ರಶೇಖರ್​ ಅವರು ದೂರು ದಾಖಲಿಸಿದ್ದರು.
ತನಿಖೆ ನಡೆಸಿದ ಪೊಲೀಸರು ಬಿ-ರಿಪೋರ್ಟ್​ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಚಂದ್ರಶೇಖರ್​ ಅವರು ಅರ್ಜಿ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ನ್ಯಾಯಾಲಯವು ಆರೋಪಿಗಳಿಗೆ ಸಮನ್ಸ್​ ಜಾರಿ ಮಾಡಿದ್ದರು. ಆದ್ದರಿಂದ, ಪ್ರಕರಣ ರದ್ದುಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು. 

ಹೈಕೋರ್ಟ್​ ಅವಲೋಕನಗಳೇನು?:

ಶಿಸ್ತು ಕಾಪಾಡುವುದು ಪೊಲೀಸ್​ ಸೇವೆಯ ಪ್ರಮುಖ ಭಾಗ. ಹೀಗಾಗಿ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸದ ಅಧೀನ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಳ್ಳುವುದು, ಮೌಖಿಕ ಎಚ್ಚರಿಕೆ ನೀಡುವುದು ಮತ್ತು ಇಲಾಖಾ ಕ್ರಮಕ್ಕೆ ತಿಳಿಸುವುದು ಕರ್ತವ್ಯದ ಭಾಗ ಎಂದು ಅವಲೋಕನ ಮಾಡಿರುವ ನ್ಯಾಯಪೀಠ, ವೃತ್ತ ನಿರೀಕ್ಷಕರಾಗಿದ್ದ ಪಂಚಾಕ್ಷರಯ್ಯ ಅವರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಿದೆ. ಆದರೆ, ಕಚೇರಿಗೆ ಕರೆಸಿ ಹಲ್ಲೆ ನಡೆಸಿದ ಆರೋಪಗಳು ಅಧಿಕೃತ ಕರ್ತವ್ಯದೊಂದಿಗೆ ಸಂಬಂಧವಿಲ್ಲ ಎಂದು ವಿಕಾಸ್​ ಕುಮಾರ್​ ವಿಕಾಸ್​ ಅವರ ಮೇಲಿನ ಪ್ರಕರಣ ರದ್ದುಗೊಳಿಸಲು ನಿರಾಕರಿಸಿದೆ. ಶಿಸ್ತಿನ ಹೆಸರಿನಲ್ಲಿ ದೌರ್ಜನ್ಯಕ್ಕೆ ಅವಕಾಶವಿಲ್ಲ ಎಂದು ಅಭಿಪ್ರಾಯಪಟ್ಟಿದೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net