ಮಾಜಿ ಸಿಎಂ ಧರಂಸಿಂಗ್​ ಸಂಬಂಧಿ ಹಂತಕನಿಗಿಲ್ಲ ಜಾಮೀನು

ಹೈಕೋರ್ಟ್​
ಹೈಕೋರ್ಟ್​
Published on

ಪ್ರಮುಖ ಮುಖ್ಯಾಂಶಗಳು

  • ಗಂಭೀರ ಪ್ರಕರಣಗಳಲ್ಲಿ ತಾಂತ್ರಿಕ ಕಾರಣಕ್ಕೆ ಬೇಲ್​ ಕೊಡಬಾರದು
  • ಅರ್ಜಿ ವಜಾಗೊಳಿಸಿ ಹೈಕೋರ್ಟ್​ ತೀರ್ಪು
ಶ್ರವಣ್​ ನೀರಬಿದಿರೆ ಬೆಂಗಳೂರು
ಅತ್ಯಾಚಾರ, ಕೊಲೆ, ದರೋಡೆ ಮುಂತಾದ ಗಂಭೀರ ಪ್ರಕರಣಗಳಲ್ಲಿ ಪ್ರಾಥಮಿಕ ವಿಚಾರಣೆ ಆರಂಭವಾದ ನಂತರ ಜಾಮೀನು ಅರ್ಜಿಗಳನ್ನು ಪರಿಗಣಿಸುವ ವಿಚಾರದಲ್ಲಿ ಹಿಂಜರಿಯಬೇಕು ಎಂಬ ಸುಪ್ರೀಂಕೋರ್ಟ್​ನ ನಿರ್ದೇಶನ ಉಲ್ಲೇಖಿಸಿರುವ ಹೈಕೋರ್ಟ್​, ಮಾಜಿ ಸಿಎಂ ಧರಂಸಿಂಗ್​ ಅವರ ಸಂಬಂಧಿ ಕೊಲೆ ಪ್ರಕರಣದ ಆರೋಪಿಗೆ ಜಾಮೀನು ನೀಡಲು ನಿರಾಕರಿಸಿದೆ. ಪ್ರಬಲ ಸಾಕ್ಷ್ಯ ಲಭ್ಯವಿರುವಾಗ ಜಾಮೀನು ಮಂಜೂರು ಮಾಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. 
ಕಳೆದ 4 ವರ್ಷಗಳಿಂದ ನ್ಯಾಯಾಂಗ ಬಂಧನದಲ್ಲಿದ್ದೇನೆ. ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ವಿಳಂಬವಾಗುತ್ತಿದ್ದು, ನೈಸರ್ಗಿಕ ನ್ಯಾಯದ ಉಲ್ಲಂನೆಯಾಗುತ್ತಿದೆ. ಪ್ರಧಾನ ಆರೋಪಿ ಸೇರಿ ಎಲ್ಲರಿಗೂ ಜಾಮೀನು ಮಂಜೂರಾಗಿದೆ. ಆದ್ದರಿಂದ ತನಗೂ ಜಾಮೀನು ಮಂಜೂರು ಮಾಡಬೇಕು ಎಂದು ಕೂಡ್ಲಿಗಿಯ ಕಾರ್ತಿಕ್​ ಅಲಿಯಾಸ್​ ಪುರುಷೋತ್ತಮ್​ ಎಂಬಾತ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಮೂರ್ತಿ ಎಚ್​.ಪಿ. ಸಂದೇಶ್​ ಅವರಿದ್ದ ಏಕಸದಸ್ಯ ಪೀಠ ತಿರಸ್ಕರಿಸಿದೆ.
ವಿಚಾರಣಾಧೀನ ಕೈದಿಗೆ ಶಿಕ್ಷೆಯ ರೀತಿ ಜಾಮೀನು ತಡೆಹಿಡಿಯುವುದು ಸರಿಯಲ್ಲ ಎಂಬ ಆರೋಪಿ ಪರವಾದ ವಕೀಲರ ವಾದವನ್ನು ತಳ್ಳಿಹಾಕಿದ ನ್ಯಾಯಾಲಯ, ಗಂಭೀರ ಅಪರಾಧ ಪ್ರಕರಣಗಳಲ್ಲಿ ಪ್ರಬಲ ಸಾಕ್ಷ್ಯಗಳು ಲಭ್ಯವಿರುವಾಗ ತಾಂತ್ರಿಕ ಕಾರಣಗಳಿಂದ ಜಾಮೀನು ಮಂಜೂರು ಮಾಡುವ ಅಗತ್ಯ ಇಲ್ಲ ಎಂದಿದೆ. 
ಅಪರಾಧ ಎಷ್ಟೇ ಗಂಭೀರವಾಗಿದ್ದರೂ ಸಂವಿಧಾನವು ಆರೋಪಿಗೆ ವೇಗದ ವಿಚಾರಣೆಯ ಹಕ್ಕನ್ನು ಕಲ್ಪಿಸಿದೆ ಎಂಬ ಆರೋಪಿ ಪರವಾದ ವಾದವನ್ನು ಮಾತ್ರ ಪರಿಗಣಿಸಿರುವ ನ್ಯಾಯಾಲಯ, ಪ್ರಕರಣದ ವಿಚಾರಣೆಯನ್ನು 6 ತಿಂಗಳೊಳಗೆ ಪೂರ್ಣಗೊಳಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ. 

ಪ್ರಕರಣವೇನು?:

2021ರ ಜ.19ರಂದು ಮಾಜಿ ಮುಖ್ಯಮಂತ್ರಿ ಧರಂ ಸಿಂಗ್​ ಸಂಬಂಧಿ ಸಿದ್ಧಾರ್ಥ್​ ದೇವೇಂದರ್​ ಸಿಂಗ್​ ಬೆಂಗಳೂರಿನ ತಮ್ಮ ಅಪಾರ್ಟ್​ಮೆಂಟ್​ನಿಂದ ನಾಪತ್ತೆಯಾಗಿದ್ದರು. ಸ್ನೇಹಿತನನ್ನು ಭೇಟಿಯಾಗಲು ಅಮೆರಿಕಕ್ಕೆ ತೆರಳುವುದಾಗಿ ಅವರ ಮೊಬೈಲ್​ನಿಂದ ತಂದೆಗೆ ಸಂದೇಶ ಬಂದಿತ್ತು. ನಂತರ ಮೊಬೈಲ್​ ಸ್ವಿಚ್​ ಆ್​ ಆಗಿತ್ತು. ಇದರಿಂದ ಗಾಬರಿಯಾಗಿದ್ದ ತಂದೆ ದೇವೆಂದರ್​ ಸಿಂಗ್​ ಜ. 25ರಂದು ಅಮೃತಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಫೆ.2ರಂದು ಆಂಧ್ರಪ್ರದೇಶದ ನೆಲ್ಲೂರಿನ ಅರಣ್ಯ ಪ್ರದೇಶದಲ್ಲಿ ಸಿದ್ಧಾರ್ಥ್​ ಶವ ಪತ್ತೆಯಾಗಿತ್ತು.

ಆಸ್ತಿಗಾಗಿ ಮಲತಾಯಿಯಿಂದಲೇ ಕೊಲೆ

ತನಿಖೆ ನಡೆಸಿದ ಪೊಲೀಸರು ಮೃತನ ಮಲತಾಯಿ ಇಂದು ಚೌಹಾಣ್​ ಸೇರಿ ಇತರ ಆರೋಪಿಗಳನ್ನು ಬಂಧಿಸಿದ್ದರು. ಕೆಂಪೇಗೌಡ ವಿಮಾನ ನಿಲ್ದಾಣದ ಬಳಿ ಇರುವ ಸುಮಾರು 60 ಕೋಟಿ ರೂ. ಮೌಲ್ಯದ ಆಸ್ತಿಗಾಗಿ ಇಂದು ಚೌಹಾಣ್​ ಮತ್ತು ಸಿದ್ಧಾರ್ಥ್​ ನಡುವೆ ವ್ಯಾಜ್ಯ ಇತ್ತು. ಆದ್ದರಿಂದ ಸುಪಾರಿ ಹಂತಕರಿಗೆ 4 ಲಕ್ಷ ರೂ. ನೀಡುವ ಭರವಸೆ ನೀಡಿ ಸಿದ್ಧಾರ್ಥ್​ ಅವರನ್ನು ಕೊಲೆ ಮಾಡಿಸಿದ್ದಾರೆ ಪೊಲೀಸರು ಆರೋಪಿಸಿದ್ದರು. ಆರೋಪಿಗಳು ಸಿದ್ಧಾರ್ಥ್​ ಅವರನ್ನು ಅಪಹರಿಸಿ ಆಂಧ್ರಪ್ರದೇಶಕ್ಕೆ ಕರೆದುಕೊಂಡು ಹೋಗುವ ವೇಳೆ ಸೀಟ್​ಬೆಲ್ಟ್​ನಿಂದ ಕತ್ತು ಹಿಸುಕಿ ಕೊಲೆ ಮಾಡಿ, ಮೃತದೇಹವನ್ನು ನೆಲ್ಲೂರಿನ ಅರಣ್ಯ ಪ್ರದೇಶದಲ್ಲಿ ಹೂತು ಹಾಕಿದ್ದರು ಎಂದು ತನಿಖೆಯಲ್ಲಿ ಬಯಲಾಗಿತ್ತು. ಕಾರ್ತಿಕ್​ ಮೇಲೆ ಪ್ರಕರಣದ ಸಂಚು ಮತ್ತು ಸಾ ನಾಶದ ಆರೋಪವಿದೆ. 

ಪ್ರಮುಖ ಆರೋಪಿಗೆ ಜಾಮೀನು 

ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಪೊಲೀಸರಿಂದ ಪರಿಗಣಿಸಲ್ಪಟ್ಟಿರುವ ಮಲತಾಯಿ ಇಂದು ಚೌಹಾಣ್​ಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಇದೇ ಆಧಾರದಲ್ಲಿ ತನಗೂ ಜಾಮೀನು ನೀಡಬೇಕು ಎಂದು ಕಾರ್ತಿಕ್​ ವಾದಿಸಿದ್ದ. ಆದರೆ, ಈ ವಾದವನ್ನು ತಿರಸ್ಕರಿಸಿರುವ ಹೈಕೋರ್ಟ್​, ಇಂದು ಚೌಹಾಣ್​ಗೆ ಇಬ್ಬರು ಅಪ್ರಾಪ್ತ ಮಕ್ಕಳಿದ್ದಾರೆ ಎಂಬ ಕಾರಣಕ್ಕೆ ಜಾಮೀನು ನೀಡಲಾಗಿದೆ. ಆದ್ದರಿಂದ ಸಮಾನತೆಯ ಆಧಾರದಲ್ಲಿ ಜಾಮೀನು ನೀಡಬೇಕು ಎಂಬ ವಾದವನ್ನು ಒಪ್ಪಲು ಸಾಧ್ಯವಿಲ್ಲ ಎಂದಿದೆ.

ಸಾಕ್ಷಿಗಳು ಉಲ್ಟಾ ಹೊಡೆದರೆ ವಿಚಾರಣೆ

ಕಾರ್ತಿಕ್​ ಪರ ವಾದಿಸಿದ್ದ ವಕೀಲರು, ಪ್ರಕರಣದಲ್ಲಿ ಸಾಕ್ಷಿಗಳು ಹೇಳಿಕೆಗಳನ್ನು ಬದಲಾಯಿಸಿದ್ದಾರೆ. ಪೊಲೀಸರ ವಾದಕ್ಕೆ ಪ್ರತಿಕೂಲವಾಗಿ ಸಾಕ್ಷಿ ನುಡಿದಿದ್ದಾರೆ. ಆದ್ದರಿಂದ ಜಾಮೀನು ನೀಡಬೇಕು ಎಂದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸಾಕ್ಷಿಗಳು ಹೇಳಿಕೆ ಬದಲಾಯಿಸಿವೆ ಎಂಬ ಕಾರಣಕ್ಕೆ ಆರೋಪಿಗೆ ಜಾಮೀನು ನೀಡುವ ಅಗತ್ಯವಿಲ್ಲ. ಗಂಭೀರ ಅಪರಾಧ ಪ್ರಕರಣಗಳಲ್ಲಿ ಸಾಕ್ಷಿಗಳು ಹೇಳಿಕೆ ಬದಲಾಯಿಸಿದರೆ, ಆ ಬಗ್ಗೆಯೂ ನ್ಯಾಯಾಲಯಗಳು ವಿಚಾರಣೆ ನಡೆಸಬೇಕು ಎಂದು ಸ್ಪಷ್ಟಪಡಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net