ನಂ.1 ಇಟಗಿ ಗ್ರಾಮದಲ್ಲಿ 9ನೇ ತರಗತಿ ಆರಂಭಕ್ಕೆ ಕ್ರಮವಹಿಸಲಿ

ನಂ.1 ಇಟಗಿಯ ಸಹಿಪ್ರಾ ಶಾಲೆ ಹೊರನೋಟ.
ನಂ.1 ಇಟಗಿಯ ಸಹಿಪ್ರಾ ಶಾಲೆ ಹೊರನೋಟ.
Published on

ಪ್ರಮುಖ ಮುಖ್ಯಾಂಶಗಳು

  • ಗ್ರಾಮೀಣ ಭಾಗದ ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದ ಆರಂಬಿಸಲು ಒತ್ತಾಯ
  • ಶಿಕ್ಷಣ ಇಲಾಖೆ ನಿರ್ಲಕ್ಷೃ
ಕಂಪ್ಲಿ: ತಾಲೂಕಿನ ನಂ.1 ಇಟಗಿ ಗ್ರಾಮದ ಸಹಿಪ್ರಾ ಶಾಲೆಯಲ್ಲಿ 9ನೇ ತರಗತಿ ಆರಂಭಿಸಬೇಕೆಂಬ ಗ್ರಾಮಸ್ಥರ ಬೇಡಿಕೆ ಇದುವರೆಗೆ ಈಡೇರಿಲ್ಲ. ಶಾಲೆ 8ನೇ ತರಗತಿಗೆ ಉನ್ನತೀಕರಣಗೊಂಡು 13 ವರ್ಷಗಳಾದರೂ 9ನೇ ತರಗತಿ ಆರಂಭವಾಗಿಲ್ಲ.
ನಂ.1 ಇಟಗಿಯ ಸಹಿಪ್ರಾ ಶಾಲೆಯಲ್ಲಿ ಎಲ್‌ಕೆಜಿಯಿಂದ 8ನೇ ತರಗತಿತನಕ 292ವಿದ್ಯಾರ್ಥಿಗಳಿದ್ದು, ಈ ಪೈಕಿ 170 ವಿದ್ಯಾರ್ಥಿನಿಯರಿದ್ದಾರೆ. ಕಳೆದ ಸಾಲಿನ 8ನೇ ತರಗತಿಯಲ್ಲಿ 19 ವಿದ್ಯಾರ್ಥಿಗಳಿದ್ದು, 16 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. ಪ್ರಸಕ್ತ ಸಾಲಿನಲ್ಲಿ 8ನೇ ತರಗತಿಗೆ 13ವಿದ್ಯಾರ್ಥಿನಿಯರಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿನಿಯರ ಹಿತದೃಷ್ಟಿಯಿಂದ 9ನೇ ತರಗತಿ ಆರಂಭಿಸುವಂತೆ ಎಸ್‌ಡಿಎಂಸಿ, ಗ್ರಾಮಸ್ಥರು ಒತ್ತಾಯಿಸುತ್ತಿದ್ದರೂ ಕಡೆಗಣಿಸಲಾಗಿದೆ.
ಎಂಟನೇ ತರಗತಿ ಉತ್ತೀರ್ಣಗೊಂಡ ವಿದ್ಯಾರ್ಥಿಗಳು 9ನೇ ತರಗತಿಗಾಗಿ 12 ಕಿ.ಮೀ.ದೂರದ ಕಂಪ್ಲಿ ಅಥವಾ 8 ಕಿ.ಮೀ ದೂರದ ಸಿರಗುಪ್ಪ ತಾಲೂಕಿನ ಮಣ್ಣೂರಿಗೆ ಹೋಗಬೇಕಿದೆ. ಬಸ್‌ಗಳ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಇದರಿಂದಾಗಿ 9ನೇ ತರಗತಿಗೆ ಹೆಣ್ಣುಮಕ್ಕಳನ್ನು ಕಳಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ಮುಖ್ಯಶಿಕ್ಷಕರು, ಎಸ್‌ಡಿಎಂಸಿ ಪದಾಧಿಕಾರಿಗಳು ಪಾಲಕರ ಮನವೊಲಿಸಿ ಒಂಬತ್ತನೇ ತರಗತಿಯನ್ನು ಬೇರೆ ಶಾಲೆಗಳಲ್ಲಿ ಓದಲು ಕಳಿಸುತ್ತಿದ್ದಾರೆ. ನಂ.1 ಇಟಗಿಯಲ್ಲಿ 9ನೇ ತರಗತಿ ಆರಂಭವಾದರೆ ನಂ.2 ಮುದ್ದಾಪುರ ಗ್ರಾಮದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.
"

ನಂ.1 ಇಟಗಿಯಲ್ಲಿ 9ನೇ ತರಗತಿ ಆರಂಭಗೊಂಡಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. 9ನೇತರಗತಿ ಆರಂಭಕ್ಕೆ ಕೊಠಡಿ ಸೌಲಭ್ಯವಿದೆ. ವಿಶಾಲ ಆಟದ ಮೈದಾನವಿದೆ. ಆದರೆ, ಇನ್ನೂ ಎರಡು ಶೌಚಗೃಹಗಳನ್ನು ನಿರ್ಮಿಸಬೇಕಿದೆ. ಆಡುಗೆ ಕೋಣೆ ಶಿಥಿಲಗೊಂಡಿದ್ದು ತೆರವುಗೊಳಿಸಿ ಹೊಸದಾಗಿ ನಿರ್ಮಿಸಬೇಕಿದೆ.

— ಕೆ.ವೀರೇಶ್, ಎಸ್‌ಡಿಎಂಸಿ ಅಧ್ಯಕ್ಷ, ಸಹಿಪ್ರಾ ಶಾಲೆ, ಇಟಗಿ
"

ಉನ್ನತೀಕರಿಸಿದ ಶಾಲೆಯಲ್ಲೇ 9ನೇ ತರಗತಿ ಆರಂಭಕ್ಕೆ ಶಿಕ್ಷಣ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. 9ನೇತರಗತಿ ಆರಂಭಕ್ಕೆ ನಿಗದಿತ ಸಂಖ್ಯೆಯ ವಿದ್ಯಾರ್ಥಿಗಳ ದಾಖಲಾತಿ ಅಗತ್ಯವಿದೆ.

— ಎನ್.ಬಿ.ರೇಣುಕಾರಾಧ್ಯ, ಸಿಆರ್‌ಪಿ, ಎಸ್.ಎನ್.ಪೇಟೆ ಕ್ಲಸ್ಟರ್, ಕಂಪ್ಲಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net