ಯುಗಾದಿಯ ಪೂಜಾವಿಧಿಯ ಒಂದು ಮುಖ್ಯ ಭಾಗವೆಂದರೆ ಪಂಚಾಂಗಶ್ರವಣ. ಏನು ಪಂಚಾಂಗವೆಂದರೆ? ತಿಥಿ, ವಾರ, ನಕ್ಷತ್ರ, ಯೋಗ ಹಾಗೂ ಕರಣಗಳು. ಈ ಐದನ್ನೂ ತಿಳಿಯದೇ ಯಾವುದೇ ಕರ್ಮಾಚರಣೆಯನ್ನು ವಿಧಿಪೂರ್ವಕವಾಗಿ ಮಾಡುವುದು ಸಾಧ್ಯವಿಲ್ಲ. ಹೀಗಿರುವುದರಿಂದ, ಸಂವತ್ಸರದ ಆದಿಯಲ್ಲಿ ಆದಿಮಂಗಲವಾಗಿ ಅದರ ಪಠನ-ಶ್ರವಣಗಳು ಉಚಿತವೇ. ವಾಸ್ತವವಾಗಿ ಪಂಚಾಂಗಶ್ರವಣವನ್ನು ನಿತ್ಯವೂ ಮಾಡಬೇಕು. ಯುಗಾದಿಯಂದಂತೂ ಮಾಡಲೇಬೇಕಾದದ್ದು. ಪಂಚಾಂಗಪಠನದಲ್ಲಿ ಸಂವತ್ಸರದ ಹೆಸರು, ಗ್ರಹಸ್ಥಿತಿಗಳು, ರಾಜಫಲ, ಪ್ರಜಾಫಲ, ಧಾನ್ಯಫಲ, ವೃಷ್ಟಿಫಲ, ಆರ್ಥಿಕ ಸ್ಥಿತಿ, ರೋಗಭೀತಿ ಇವೇ ಮುಂತಾದುವನ್ನು ತಿಳಿಸುವುದಾಗುತ್ತದೆ.