ಹೊಸ ಟರ್ಮಿನಲ್ ಶೀಘ್ರ ಉದ್ಘಾಟನೆ - ಸಂಸದ ಜಗದೀಶ ಶೆಟ್ಟರ

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸೋಮವಾರ ಸಂಸದ ಜಗದೀಶ ಶೆಟ್ಟರ ಸಸಿ ನೆಟ್ಟರು. ಎಸ್.ತ್ಯಾಗರಾಜನ್, ವಿಜಯ ಭದ್ರಾ, ಸುಭಾಸ ಪಾಟೀಲ ಇತರರಿದ್ದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸೋಮವಾರ ಸಂಸದ ಜಗದೀಶ ಶೆಟ್ಟರ ಸಸಿ ನೆಟ್ಟರು. ಎಸ್.ತ್ಯಾಗರಾಜನ್, ವಿಜಯ ಭದ್ರಾ, ಸುಭಾಸ ಪಾಟೀಲ ಇತರರಿದ್ದರು.
Published on
ಬೆಳಗಾವಿ: ಅಮೆರಿಕ-ಇರಾನ್ ಇನ್ನೆರಡು ದಿನದಲ್ಲಿ ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಬಹುದು. ಇದರಿಂದ ಕಡಿತಗೊಂಡಿದ್ದ ಎಲ್ಲ ವಿಮಾನಯಾನ ಸೇವೆಗಳಿಗೆ ಮರು ವೇಗ ಸಿಗಲಿದೆ ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.
ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸೋಮವಾರ ಆಯೋಜಿಸಿದ್ದ ಯಾತ್ರಿ ಸುವಿಧಾ ದಿನದಲ್ಲಿ ಮಾತನಾಡಿದ ಅವರು, ಇಲ್ಲಿಂದ ದೇಶದ ಪ್ರಮುಖ ನಗರಗಳಿಗೆ ವಿಮಾನ ಸೇವೆ ನೀಡಲು ಅನೇಕ ಕಂಪನಿಗಳನ್ನು ಕೇಳಿಕೊಂಡಿದ್ದೇವು. ಕೆಲವರು ಒಪ್ಪಿಗೆ ಸೂಚಿಸಿದ್ದರು. ಇದೇ ವೇಳೆಗೆ ಕೊಲ್ಲಿ ಯುದ್ಧ ಶುರುವಾಗಿ ಇಂಧನ ಬೆಲೆಗಳು ಏರಿಕೆಯಾದವು ಎಂದರು.
ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಹೊಸ ಟರ್ಮಿನಲ್ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಎರಡು ತಿಂಗಳಲ್ಲಿ ಉದ್ಘಾಟನೆಗೊಳ್ಳಲಿದೆ. ರಾಜ್ಯದ ಪ್ರಮುಖ ಕೇಂದ್ರಸ್ಥಾನವಾಗಿ ಗುರುತಿಸಿಕೊಂಡಿರುವ ಬೆಳಗಾವಿ ನಿಲ್ದಾಣ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದೇವೆ ಎಂದರು.
ನರೇಂದ್ರ ಮೋದಿ ನೇತೃತ್ವದ ಸರ್ಕಾರ 12 ವರ್ಷಗಳಲ್ಲಿ ದೇಶದ ವಿಮಾನ ಯಾನ ಕ್ಷೇತದಲ್ಲಿ ಹೊಸ ದಾಖಲೆ ಮಾಡಿದೆ. ಎಲ್ಲ ನಿಲ್ದಾಣಗಳಿಗೆ ಬಲ ತುಂಬಿದೆ. ಉಡಾನ್ ಯೋಜನೆಯಿಂದ ಕ್ರಾಂತಿಯಾಗಿದ್ದು, ಇದನ್ನು ಜನರಿಗೆ ತಿಳಿಸುವ ಅಗತ್ಯವಿದೆ. ವಿಮಾನ ನಿಲ್ದಾಣಗಳಲ್ಲಿನ ಯೋಜನೆ ಕುರಿತು ಪ್ರಯಾಣಿಕರಿಗೆ ಮಾಹಿತಿ ನೀಡುವ ದೃಷ್ಟಿಯಿಂದ ಯಾತ್ರಿ ಸುವಿಧಾ ದಿನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಯಾತ್ರಿ ಸುವಿಧಾ ದಿನದ ಪ್ರಯುಕ್ತ ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕರಿಗೆ ತಿಲಕವಿಟ್ಟು ಆರತಿ ಬೆಳಗಿ ಸ್ವಾಗತಿಸಿಕೊಳ್ಳಲಾಯಿತು. ಇದೇ ರೀತಿ ನಿರ್ಗಮಿಸುವವರನ್ನೂ ಬೀಳ್ಕೊಡಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸುಗಮ ಸಂಗೀತ, ವೀರಗಾಸೆ ನಡೆಯಿತು.
ಈ ಕಾರ್ಯಕ್ರಮದಲ್ಲಿ ಪ್ರಾದೇಶಿಕ ಆಯುಕ್ತ ಜಾನಕಿ.ಕೆ.ಎನ್, ವಿದ್ಯಾವಂತಿ ಭಜಂತ್ರಿ, ಇದ್ದರು. ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ ನಡೆದವು. ನಿಲ್ದಾಣದ ಆವರಣದಲ್ಲಿ ಸಸಿ ನೆಡಲಾಯಿತು. ಸುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ನಿಲ್ದಾಣಕ್ಕೆ ಆಗಮಿಸಿ, ವೀಕ್ಷಿಸಿದರು.
ವಿಮಾನ ನಿಲ್ದಾಣ ನಿರ್ದೇಶಕ ಎಸ್.ತ್ಯಾಗರಾಜನ್, ವಿಮಾನ ನಿಲ್ದಾಣ ಸಲಹಾ ಸಮಿತಿ ಸದಸ್ಯರಾದ ವಿಜಯ ಭದ್ರಾ, ರಾಹುಲ ಮುಚ್ಚಂಡಿ, ಜಯಸಿಂಗ ರಜಪುತ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸುಭಾಸ ಪಾಟೀಲ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net