ಹೊಸ ಪ್ರಭೇದದ ಆಕ್ರಮಣಕಾರಿ ಸೇನಾ ಇರುವೆಗಳು ಪತ್ತೆ! New species

 ಎರಡು ಸೇನಾ ಇರುವೆ
ಎರಡು ಸೇನಾ ಇರುವೆ
Published on
ಬೆಂಗಳೂರು: ಆಂಧ್ರಪ್ರದೇಶದ ಪೂರ್ವ ಘಟ್ಟಗಳಲ್ಲಿ ಹೊಸ ಪ್ರಭೇದದ ಎರಡು ಸೇನಾ ಇರುವೆಗಳನ್ನು ಪತ್ತೆ ಮಾಡಲಾಗಿದೆ.
ಒಡಿಶಾದ ರಾಷ್ಟ್ರೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ (ಎನ್‌ಐಎಸ್‌ಇಆರ್) ಸಂಶೋಧಕರಾದ ಬಿಕಾಶ ಸಾಹೂ, ನಿಕಿತಾ ಕುಮಾರನ, ಅನಿರುದ್ದ ದತ್ತರಾಯ್, ಬೆಂಗಳೂರಿನ ಸಂಶೋಧಕಿಯರಾದ ಸಹನಶ್ರೀ, ಪ್ರಿಯದರ್ಶನ್ ಎಂಬುವರು, ಅಂಧ್ರಪ್ರದೇಶದ ಶ್ರೀ ವೆಂಕಟೇಶ್ವರ ವನ್ಯಜೀವಿ ಅಭಯಾರಣ್ಯ ಮತ್ತು ಶ್ರೀಲಂಕಾ ಮಲ್ಲೇಶ್ವರ ವನ್ಯಜೀವಿ ಅಭಯಾರಣ್ಯದಲ್ಲಿ ಇವುಗಳನ್ನು ಪತ್ತೆ ಮಾಡಿದ್ದಾರೆ.
ಉಷ್ಣ ವಲಯ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುವ ಇವು, ಹೆಚ್ಚು ಆಕ್ರಮಣಕಾರಿಯಾಗಿರುವ ಅಲೆಮಾರಿ ಭಕ್ಷಕಗಳಾಗಿವೆ. ಒಂದೇ ಕಡೆ ಶಾಶ್ವತವಾಗಿ ಗೂಡು ಕಟ್ಟುವುದಿಲ್ಲ. ನಿರಂತರವಾಗಿ ಚಲಿಸುತ್ತಾ ಬೇಟೆಯಾಡಿ ತಾತ್ಕಾಲಿಕ ಗೂಡು ನಿರ್ಮಿಸಲಿವೆ.
ಇರುವೆಗಳು ಹೆಚ್ಚು ಪರಿಣಾಮಕಾರಿಯಾದ ನೈಸರ್ಗಿಕ ತೋಟಿ ಅಥವಾ ಜಾಡಮಾಲಿಗಳಾಗಿದ್ದು, ಅವಕಾಶವಾದಿ ಸರ್ವಭಕ್ಷಕಗಳಾಗಿವೆ. ಅವುಗಳು ಪರಿಸರ ವ್ಯವಸ್ಥೆಯ ಸಾವಯವ ಅವಶೇಷ, ಸತ್ತ ಕೀಟ ಮತ್ತು ಕೊಳೆತ ಜೀವಿಗಳನ್ನು ತಿನ್ನುತ್ತೇವೆ. ನಂತರ, ಪೋಷಕಾಂಶಗಳ ಚಕ್ರ ಮತ್ತು ವಿಭಜನೆಯಲ್ಲಿ ಮಹತ್ವದ ಪಾತ್ರವಹಿಸಲಿವೆ. ಸಾಮಾಜಿಕ ಕೀಟಗಳಾಗಿ ಇವುಗಳು ಬೃಹತ್ ವಸಾಹತು ರೂಪಿಸಲಿವೆ.
ಕಾಡಿನ ನೆಲದ ಮೇಲೆ ದಾಳಿ ಮಾಡಲಿವೆ. ಸಂವಹನ ಮತ್ತು ಮಾರ್ಗ ಗುರುತಿಸಲು ಫೆರೋಮೋನ್ ಎಂಬ ರಾಸಾಯನಿಕ ಸಹಕಾರಿಯಾಗಿದೆ. ಅಲ್ಲದೆ, ಪಕ್ಷಿಗಳು ಮತ್ತು ಹಲ್ಲಿಗಳಿಗೆ ಆಹಾರ ಒದಗಿಸಲಿವೆ. ಈ ಮೂಲಕ ಸೇನಾ ಇರುವೆ, ಮಾದರಿಯ ಸಹಜೀವನ ಬೆಂಬಲಿಸಲಿವೆ.
ಸಂಶೋಧನಾ ಅಧ್ಯಯನ ವರದಿ ಪ್ರಕಾರ ಭಾರತದಲ್ಲಿ ಈವರೆಗೆ 38 ಜಾತಿಯ ಸೇನಾ ಇರುವೆ ಕುರಿತು ವಿವರಿಸಲಾಗಿತ್ತು. ಇದೀಗ ಹೊಸ ಜಾತಿಯ 2 ಸೇನಾ ಇರುವೆ ಶೋಧಿಸಲಾಗಿದೆ. ಇದರಿಂದ ಸೇನಾ ಇರುವೆ ವೈವಿಧ್ಯತೆ ಒಟ್ಟು 40ಕ್ಕೇರಿದಂತಾಗಿದೆ.
ದೈಹಿಕ ರಚನೆ
0.5-14 ಮಿಲಿಮೀಟರ್ ಗಾತ್ರ ಇರುವ ಸೇನಾ ಇರುವೆಗಳು, ಬಲವಾದ ಕಾಲು, ಕೊಕ್ಕೆ, ದವಡೆ ಮತ್ತು ಕುಟುಕು ಶಕ್ತಿ ಹೊಂದಿರಲಿವೆ. ಹೆಚ್ಚಿನ ಆರ್ಮಿ ಇರುವೆಗಳು, ಸಂಪೂರ್ಣ ಅಥವಾ ಭಾಗಶಃ ಕುರುಡಾಗಿರುತ್ತವೆ. ಆದರೆ, ಫೆರೋಮೋನ್ ಎಂಬ ರಾಸಾಯನಿಕ ಸಂಕೇತ ಬಳಸಿ ಸಂವಹನ ನಡೆಸಲಿವೆ. ಮುಖ್ಯವಾಗಿ ಇವುಗಳು ಕೀಟಗಳು, ಕಪ್ಪೆ, ಸಣ್ಣ ಪಕ್ಷಿಗಳನ್ನು ಬೇಟೆಯಾಡಲಿವೆ. ಪರಿಸರ ವ್ಯವಸ್ಥೆಯ ಪ್ರಮುಖ ಪರಭಕ್ಷಕಗಳು ಎಂದು ಪರಿಗಣಿಸಲಾಗುತ್ತದೆ.
ಆರ್ಮಿ ಅಥವಾ ಸೇನಾ ಇರುವೆಗಳನ್ನು ಲೆಜಿಯನರಿ ಇರುವೆಗಳು ಎಂದೂ ಕರೆಯಲಾಗುತ್ತದೆ. ಇವುಗಳು ಹೆಚ್ಚಾಗಿ ಉಷ್ಣ ವಲಯದ ಕಾಡುಗಳಲ್ಲಿ ವಾಸಿಸಲಿವೆ. ಶಾಶ್ವತ ಗೂಡು ನಿರ್ಮಿಸದೆ ಸೈನ್ಯದಂತೆ ಗುಂಪುಗೂಡಿ ಬೇಟೆಯಾಡುವ ಉಗ್ರ ಇರುವೆಗಳಾಗಿವೆ. ಹಿಂಡುಗಳಲ್ಲಿ ಸಂಚರಿಸುವ ಇವುಗಳು, ದಾರಿಯಲ್ಲಿ ಸಿಗುವ ಕೀಟಗಳನ್ನು ಭಕ್ಷಿಸಲಿವೆ.
- ಸಹನಶ್ರೀ, ಕೀಟಶಾಸಜ್ಞೆ
ಜೀವವೈವಿಧ್ಯದ ಅಧ್ಯಯನಕ್ಕೆ ಇರುವೆಗಳು ಮಾದರಿಯಾಗಿವೆ. ಸಂಘಟಿತ ವಸಾಹತುಗಳ ಕಾರಣದಿಂದ ಸಾಮೂಹಿಕ ಬುದ್ಧಿವಂತಿಕೆ, ನಡವಳಿಕೆ ಮತ್ತು ವಿಕಸನೀಯ ಜೀವಶಾಸ್ತ್ರ ಅಧ್ಯಯನಕ್ಕೆ ಇರುವೆಗಳು ಅತ್ಯಗತ್ಯ.
- ಮಂಜುನಾಥ ಎಸ್.ನಾಯಕ, ಜೀವವೈಧ್ಯ ಸಂಶೋಧಕ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net