ಆರೋಗ್ಯಕರ ಜೀವನಕ್ಕೆ ಎದುರಾಗಿವೆ ಹೊಸ ಸವಾಲುಗಳು

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ನನ್ನ ಅಜ್ಜಿ ಕೂಡ ಶತಾಯುಷಿಯೇ. ಅವರು ತಮ್ಮ ಬದುಕಿನ ಪಯಣದ ಕೊನೆಯ ಒಂದು ವಾರ ಬಿಟ್ಟರೆ ಮತ್ಯಾವಾಗಲೂ ಹಾಸಿಗೆ ಹಿಡಿದಿದ್ದೇ ಇಲ್ಲ. ಒಮ್ಮೆ ದೃಷ್ಟಿ ಮಂದವಾದ ಕಾರಣ ಕ್ಯಾಟರಾಕ್ಟ್ ಆಪರೇಷನ್ ಆಗಿತ್ತು ಅಷ್ಟೇ. ಉಳಿದಂತೆ ವರ್ಷಕ್ಕೊಮ್ಮೆ ಬರುತ್ತಿದ್ದ ಥಂಡಿ, ಜ್ವರಕ್ಕೆ ಕಷಾಯ, ಲೇಹವೇ ಸಾಕಾಗುತ್ತಿತ್ತು. ಅವರ ಪ್ರಸ್ತಾಪ ಬಂದಾಗಲೆಲ್ಲ ಮನೆಯವರು ಹೇಳುವುದು ‘ಅವರದು ಸುಖಿ ಮರಣ’. ಆ ತಲೆಮಾರನ್ನು ಈಗಿನ ತಲೆಮಾರಿಗೊಮ್ಮೆ ಹೋಲಿಸಿ ನೋಡಿದಾಗ ‘ಸುಖಿ ಮರಣವೆಂಬುದು ಈಗಿನವರಲ್ಲಿ ಮರೀಚಿಕೆಯಾಗುತ್ತಿದೆಯೇ’ ಎಂಬ ಪ್ರಶ್ನೆ ಮೂಡುವುದು ಸಹಜ.

ಇಂಗ್ಲೆಂಡ್​ನ ಲ್ಯಾನ್ಸೆಟ್ ಜರ್ನಲ್ ಇತ್ತೀಚೆಗೆ ಪ್ರಕಟಿಸಿರುವ ವರದಿ ‘ಜಾಗತಿಕವಾಗಿ ಜೀವಿತಾವಧಿಯ ಆರೋಗ್ಯಕರ ವರುಷಗಳು ಕಡಿಮೆಯಾಗುತ್ತಿವೆ’ ಎಂಬುದನ್ನು ದೃಢಪಡಿಸಿದೆ. ವ್ಯಕ್ತಿಯೊಬ್ಬನ ಜೀವಿತಕಾಲದ ಅನಾರೋಗ್ಯಕರ ದಿನಗಳು 1990ರಲ್ಲಿ 8.4 ವರ್ಷವಿದ್ದದ್ದು 2023ರಲ್ಲಿ 10.6 ವರ್ಷಕ್ಕೇರಿದೆ. ಅಷ್ಟೇ ಅಲ್ಲ, ಸರಾಸರಿ ಜೀವಿತಾವಧಿಯೂ ಏರುತ್ತಿರುವುದು ಗಮನಾರ್ಹ. 1950ರಲ್ಲಿ 46 ವರ್ಷ ಇದ್ದದ್ದು ಈಗ 73 ವರ್ಷಕ್ಕೆ ತಲುಪಿದೆ. ಇದು 2020-21ರಲ್ಲಿ ಕೋವಿಡ್ ಕಾಲದಲ್ಲಿ ಬಿಟ್ಟರೆ ಮತ್ಯಾವಾಗಲೂ ಇಳಿದೇ ಇಲ್ಲ.

ನಾವು ನಮ್ಮ ಅಜ್ಜ ಅಜ್ಜಿಯರ ಬಗ್ಗೆ ಮಾತಾಡುವಾಗ ಅವರು ನೂರು ವರ್ಷ ಹೇಗೆ ಬದುಕಿದ್ದರು ಎಂಬುದನ್ನು ಬಣ್ಣಿಸುತ್ತಿರುತ್ತೇವೆ. ಅವರೆಲ್ಲ ಅಷ್ಟೊಂದು ದೊಡ್ಡ ಇನ್ನಿಂಗ್ಸ್ ಆಡಿದರೂ ಆಗ ಮೇಲಕ್ಕೇರದ ಜೀವಿತಾವಧಿಯ ಗ್ರಾಫು ಈಗ ಏರುತ್ತಿರುವುದೇಕೆ? ಉತ್ತರಕ್ಕೆ ಹಲವು ಆಯಾಮಗಳಿವೆ. ಮುಂಚೂಣಿ ರಾಷ್ಟ್ರಗಳ ಹಾಗೂ ಮುಂದುವರೆಯುತ್ತಿರುವ ದೇಶಗಳ ನಡುವಿನ ಅಂತರ ಕುಗ್ಗುತ್ತಿರುವುದರ ಜತೆಗೆ ಆರೋಗ್ಯಸೇವೆಯಲ್ಲಿ ಬಹಳಷ್ಟು ಅಭಿವೃದ್ಧಿ ಕಂಡುಬರುತ್ತಿರುವುದು ಮುಖ್ಯ ಕಾರಣ. ಪರಿಣಾಮವಾಗಿ ಶಿಶುಮರಣ ಪ್ರಮಾಣ ತಗ್ಗಿದೆ. ಔಷಧ ವಿಜ್ಞಾನ ಕ್ಷೇತ್ರವೂ ಬಹಳಷ್ಟು ಪ್ರಗತಿ ಸಾಧಿಸಿರುವುದರಿಂದ ಮಾರಕ ಕಾಯಿಲೆಗಳನ್ನು ಎದುರಿಸುವ ಕ್ಷಮತೆ ಹೆಚ್ಚಾಗಿ ಮರಣ ಪ್ರಮಾಣ ಇಳಿದಿದೆ. ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ (ಜಿಬಿಡಿ) ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ, ಸರಾಸರಿ ಜೀವಿತಾವಧಿ 2050ರಲ್ಲಿ 78 ವರ್ಷಕ್ಕೆ ತಲುಪಲಿದೆ. ಮರಣದ ಕಾರಣಗಳು ಸಾಂಕ್ರಾಮಿಕ, ಆನುವಂಶಿಕ, ಅಪೌಷ್ಟಿಕತೆಯಿಂದ ಹೊರಳಿ ಹೃದಯ, ಆಹಾರ, ಧೂಮಪಾನ, ಬೊಜ್ಜು, ಸಕ್ಕರೆ ಕಾಯಿಲೆಗಳತ್ತ ವಾಲಲಿದೆ. ಅದರರ್ಥ, ಮುಂಬರುವ ಪೀಳಿಗೆ ಸಾಂಕ್ರಾಮಿಕ ರೋಗಗಳಿಂದ ಮುಕ್ತಿ ಪಡೆದರೂ ತನ್ನದೇ ಜೀವನಶೈಲಿಗೆ ಬಲಿಯಾಗಲಿದೆ.

ಜಾಗತಿಕವಾಗಿ ನಮ್ಮ ಜೀವಿತಾವಧಿ ಹೆಚ್ಚುತ್ತಿದ್ದರೂ ಅನಾರೋಗ್ಯ ಏಕೆ ಹೆಚ್ಚು ಕಾಡುತ್ತಿದೆ? ಸದ್ಯದ ಮಟ್ಟಿಗೆ ಈ ಪ್ರಶ್ನೆಯನ್ನು ಭಾರತಕ್ಕಷ್ಟೆ ಸೀಮಿತಗೊಳಿಸೋಣ. ಲ್ಯಾನ್ಸೆಟ್ ವರದಿ ಹೇಳುವಂತೆ 1990ರಲ್ಲಿ ಭಾರತೀಯರ ಸರಾಸರಿ ಆಯಸ್ಸು 58.5 ವರ್ಷಗಳಾಗಿದ್ದು ಅದರಲ್ಲಿ 50.1 ವರುಷಗಳನ್ನವರು ಆರೋಗ್ಯಕರವಾಗಿ ಕಳೆದಿದ್ದರು. 2023ರಲ್ಲಿ ಸರಾಸರಿ ಆಯಸ್ಸು 71.6 ವರುಷಗಳಿಗೇರಿದ್ದು ಅದರಲ್ಲಿ ಆರೋಗ್ಯಕರ ವರುಷಗಳು 61. ಜಾಗತಿಕವಾಗಿಯೂ ಹೆಚ್ಚೂಕಮ್ಮಿ ಇದೇ ಟ್ರೆಂಡ್ ಇದೆ. ಸಾರಾಂಶವೇನೆಂದರೆ, ಜನರ ಜೀವಿತಾವಧಿ ಹೆಚ್ಚಿಸುವಲ್ಲಿ ಯಶಸ್ಸು ಕಂಡಿರುವ ವೈದ್ಯಕೀಯ ಕ್ಷೇತ್ರಕ್ಕೆ, ಈಗ ಆರೋಗ್ಯವಾಗಿ ಜೀವಿಸುವತ್ತ ಅವರನ್ನು ಸಜ್ಜುಗೊಳಿಸುವ ಹೊಸ ಸವಾಲು ಎದುರಾಗಿದೆ.

ಲ್ಯಾನ್ಸೆಟ್ ವರದಿಯ ಮತ್ತೊಂದು ಪ್ರಮುಖ ಅಂಶ- ಪುರುಷರು ಮತ್ತು ಮಹಿಳೆಯರ ಜೀವನದ ಆರೋಗ್ಯಕರ ದಿನಗಳ ನಡುವಿನ ಫರಕು. ಜಗತ್ತಿನೆಲ್ಲೆಡೆ ಸ್ತ್ರೀಯರು ಪುರುಷರಿಗಿಂತ ಹೆಚ್ಚು ಕಾಲ ಬದುಕುತ್ತಿರುವುದು ನಿಜವಾದರೂ ಆತನಿಗಿಂತ ಅವಳೇ ಹೆಚ್ಚು ಅನಾರೋಗ್ಯಕ್ಕೆ ತುತ್ತಾಗುತ್ತಿರುವುದೂ ಸತ್ಯ. ಸರಾಸರಿಯಂತೆ ಭಾರತದಲ್ಲಿ 1990ರಲ್ಲಿ ಪುರುಷ ತನ್ನ ಜೀವಿತಕಾಲದ 7.5 ವರ್ಷ ಅನಾರೋಗ್ಯಕರವಾಗಿ ಕಳೆದರೆ 2023ರಲ್ಲಿ ಇದು 9.1 ವರ್ಷಕ್ಕೇರಿತ್ತು. ಅದೇ ಮಹಿಳೆಯರ ವಿಷಯದಲ್ಲಿ 1990ರಲ್ಲಿ 9.4 ವರ್ಷ ಇದ್ದದ್ದು 2023ರಲ್ಲಿ 12 ವರ್ಷಕ್ಕೇರಿದೆ. ಮೂಳೆ ಮತ್ತು ಸ್ನಾಯುಸಂಬಂಧಿ ಅದರಲ್ಲೂ ವಿಶೇಷವಾಗಿ ಬೆನ್ನುನೋವಿನಿಂದ ಬಳಲುವುದು ಹೆಚ್ಚಾಗಿದೆ. ಮಾನಸಿಕ ಆರೋಗ್ಯದ ತೊಂದರೆಗಳು ನಂತರದ ಸ್ಥಾನದಲ್ಲಿವೆ. ಇವೆಲ್ಲ ಮುಂದಿನ ದಿನಗಳಲ್ಲಿ ಜನಾರೋಗ್ಯ ಸಂಬಂಧಿ ಕಾರ್ಯಕ್ರಮಗಳನ್ನು ರೂಪಿಸುವ ತಲೆಗಳಿಗೆ ಕಸರತ್ತು ನೀಡುವ ವಿಷಯವಾಗುವುದಂತೂ ಸತ್ಯ.

ನನ್ನ ಗೆಳೆಯನ ತಾತನಿಗೆ ನಾವೆಲ್ಲ ಹರ್ಕ್ಯುಲಿಸ್ ಎಂಬ ಹೆಸರಿಟ್ಟಿದ್ದ ಬಗ್ಗೆ ಹೇಳಿದ್ದೆ ಅಲ್ವೇ? ಅಂದ ಹಾಗೆ ಈ ಹರ್ಕ್ಯುಲಿಸ್ ಹೆಸರು ಇದೀಗ ಮತ್ತೆ ಚರ್ಚೆಯಲ್ಲಿದೆ. ಈ ಬಾರಿ ಜನಪ್ರಿಯ ಗ್ರೀಕ್ ಜನಪದ ಪಾತ್ರವಾಗಿ ಅಲ್ಲ. ವೈದ್ಯಕೀಯ ಗುಣಲಕ್ಷಣವಾಗಿ. ತನ್ನ ದೇಶಕ್ಕೆ ಅಂತಾರಾಷ್ಟ್ರೀಯ ಮಟ್ಟದ ಓಟದ ಸ್ಪರ್ಧೆಗಳಲ್ಲಿ ಹಲವು ಪದಕಗಳನ್ನು ತಂದು ಕೊಟ್ಟ ಹ್ಯಾರಿ ಐಕೈನ್ಸ್ ಎಂಬ ಬ್ರಿಟನ್ ಕ್ರೀಡಾಪಟು ಇತ್ತೀಚೆಗೆ ಸಂದರ್ಶನವೊಂದರಲ್ಲಿ ತನಗೆ ಹರ್ಕ್ಯುಲಿಸ್ ಗುಣಲಕ್ಷಣಗಳು ಇರುವುದಾಗಿ ಹೇಳಿಕೊಂಡಿದ್ದೇ ಇದಕ್ಕೆ ಕಾರಣ. ಅಸಲಿಗೆ ಹರ್ಕ್ಯಲಿಸ್ ಸಿಂಡ್ರೋಂ ಎನ್ನುವುದು ಮಾನವರಲ್ಲಿ ಅತ್ಯಂತ ವಿರಳಾತಿ ವಿರಳ ಗುಣಲಕ್ಷಣ. ಇದಕ್ಕೆ ಮೂಲಕಾರಣ ನಮ್ಮ ದೇಹದಲ್ಲಿರುವ ಮಯೋಸ್ಟಾಟೀನ್ ಎಂಬ ವಂಶವಾಹಿಯ ರೂಪಾಂತರ. ಈ ವಂಶವಾಹಿಯು ಮಾನವ ದೇಹದಲ್ಲಿ ಸ್ನಾಯುಗಳ ಬೆಳವಣಿಗೆಗೆ ಒಂದು ನೈಸರ್ಗಿಕ ಬ್ರೇಕ್ ಇದ್ದಂಗೆ. ಇವುಗಳ ಕಾರಣಕ್ಕೇನೆ ಎಳವೆಯಿಂದ ಕೊನೆಯವರೆಗೂ ನಮ್ಮ ಸ್ನಾಯುಗಳು ಒಂದು ನಿರ್ಧಾರಿತ ವೇಗದಲ್ಲಿ ಬೆಳೆಯುತ್ತವೆ. ಈ ವಂಶವಾಹಿ ರೂಪಾಂತರಗೊಂಡರೆ ಸ್ನಾಯುಗಳು ಬ್ರೇಕ್ ಇಲ್ಲದ ಗಾಡಿಯ ತರಹ ಯಾವುದೇ ಅಡೆತಡೆಯಿಲ್ಲದೇ ಬೆಳೆಯುತ್ತವೆ. ಜಿಮ್ ಗೆ ಹೋಗಿ ಬೆವರು ಸುರಿಸಿ ದೇಹ ದಂಡಿಸುವವರು ಇದನ್ನು ಓದಿ ‘ವಾವ್’ ಅನ್ನಬಹುದು. ಆದರೆ ಇದರ ಮತ್ತೊಂದು ಮಗ್ಗುಲೂ ಇದೆ. ಅಗತ್ಯಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಬೆಳೆಯುವ ಸ್ನಾಯುಗಳು ಮೂಳೆಗಳ ಮೇಲೆ ವಿಪರೀತ ಒತ್ತಡವನ್ನುಂಟು ಮಾಡುತ್ತವೆ. ಇದರಿಂದ ಬೆನ್ನು ನೋವು, ಸಂಧಿನೋವು ಶುರುವಾಗುತ್ತದೆ. ಹರ್ಕ್ಯುಲಿಸ್ ಗುಣಲಕ್ಷಣಗಳು ಮಾನವನಲ್ಲಿ ಪತ್ತೆಯಾದ ಉದಾಹರಣೆಗಳು ಬೆರಳೆಣಿಕೆಯಷ್ಟು.

1997ರಲ್ಲಿ ವಿಜ್ಞಾನಿಗಳ ತಂಡವೊಂದು ಜಿಡಿಎಫ್ 8 ಎಂಬ, ಅಲ್ಲಿಯವರೆಗೆ ಹೆಚ್ಚು ಗೊತ್ತಿಲ್ಲದ ಪೊ›ಟೀನ್ ಬಗ್ಗೆ ಸಂಶೋಧನೆ ನಡೆಸುತ್ತಿತ್ತು. ಮೂಳೆಗಳಲ್ಲಿ ಪತ್ತೆಯಾಗುವ ಈ ಪೊ›ಟೀನನ್ನು ಪ್ರಯೋಗಶಾಲೆಯಲ್ಲಿ ಇಲಿಯೊಂದರ ದೇಹದಿಂದ ನಾಪತ್ತೆಯಾಗುವಂತೆ ಮಾಡಿದಾಗ ಆ ಇಲಿ ತನ್ನ ಸಾಮಾನ್ಯ ದೇಹದ ಗಾತ್ರಕ್ಕಿಂತ ಹೆಚ್ಚಾಗಿ ಬೆಳೆದು ಹಲವು ಪಟ್ಟು ತೂಕ ಹೆಚ್ಚಿಸಿಕೊಂಡಿತ್ತು. ನಂತರ ಅದಕ್ಕೆ ಮಯೋಸ್ಟಾಟೀನ್ ಎಂದು ಮರುನಾಮಕರಣ ಮಾಡಿ, ಅದಿಲ್ಲದಿದ್ದರೆ ಸ್ನಾಯುಗಳ ಬೆಳವಣಿಗೆ ಎಗ್ಗಿಲ್ಲದೆ ಸಾಗುತ್ತದೆ ಎಂದು ಆ ತಂಡ ಷರಾ ಬರೆಯಿತು. ಆದರೆ ನೈಜ ಉದಾಹರಣೆ ಕಂಡುಬಂದಿದ್ದು 2004ರಲ್ಲಿ ಜರ್ಮನಿಯ ಆಸ್ಪತ್ರೆಯೊಂದರಲ್ಲಿ ಹುಟ್ಟಿದ ಮಗುವಿನಲ್ಲಿ. ಒಂದು ವರ್ಷ ತುಂಬುವಷ್ಟರಲ್ಲೇ ವಯಸ್ಸಿಗೆ ಮೀರಿದ ತೂಕವನ್ನೂ, ಅಂಗಸೌಷ್ಟವವನ್ನೂ ಹೊಂದಿದ ಆ ಮಗು 4 ವರ್ಷ ವಯಸ್ಸಿಗೆ ಒಂದೇ ಕೈಯಿಂದ 4 ಕೆಜಿ ತೂಕದ ಭಾರವನ್ನು ಎತ್ತುತ್ತಿತ್ತು. ಅಮೆರಿಕದ ಮಿಷಿಗನ್​ನಲ್ಲಿ 2025ರಲ್ಲಿ ಇಂತಹುದೇ ಮಗುವಿನ ಕುರಿತು ವರದಿಯಾಗಿ ಅಲ್ಲಿನ ಕೆಲ ಟಿವಿ ವಾಹಿನಿಗಳು ಆ ಮಗುವಿಗೆ ಭಾರಿ ಬಿಲ್ಡಪ್ ಕೊಟ್ಟಿದ್ದವು.

ಪಂದ್ಯಾವಳಿಗಳಲ್ಲಿ ಹ್ಯಾರಿ ಐಕೈನ್ಸ್ ಸ್ನಾಯುಸೆಳೆತಕ್ಕೆ ಒಳಗಾದಾಗ ಚೇತರಿಸಿಕೊಳ್ಳುತ್ತಿದ್ದ ವೇಗವನ್ನು ಗಮನಿಸಿದ ವೈದ್ಯರಿಗೆ ಅನುಮಾನ ಬಂದು ನಡೆಸಿದ ಕೆಲ ಪರೀಕ್ಷೆಗಳು ಈ ವಿಷಯವನ್ನು ಹೊರಗೆಡವಿದವು. 2016ರಲ್ಲಿ ಮೊದಲ ಬಾರಿ 500 ಕೆಜಿ ಭಾರವನ್ನೆತ್ತಿ, ಹಾಗೆ ಮಾಡಿದ ಜಗತ್ತಿನ ಮೊದಲಿಗನೆಂಬ ಖ್ಯಾತಿಗೊಳಗಾಗಿ, ‘ರಾಕ್ಷಸ’ನೆಂಬ ಬಿರುದನ್ನು ಪಡೆದ ಬ್ರಿಟಿಷ್ ಪ್ರಜೆ, ನಟ, ಬಾಕ್ಸರ್ ಎಡ್ಡಿ ಹಾಲ್ ಕೂಡ ಇತ್ತೀಚೆಗೆ ತಾನೂ ಹರ್ಕ್ಯುಲಿಸ್ ಸಿಂಡ್ರೋಂ ಗಿರಾಕಿ ಎಂಬ ಹೇಳಿಕೆ ಕೊಟ್ಟಿದ್ದ. ಆದರೆ ವಿಜ್ಞಾನಿಗಳ ಪ್ರಕಾರ, ಇವೆಲ್ಲ ಹರ್ಕ್ಯುಲಿಸ್ ಸಿಂಡ್ರೋಂನ ಕುರುಹುಗಳಷ್ಟೇ. ಪರಿಪೂರ್ಣ ಗುಣಲಕ್ಷಣವೆನ್ನಲು ವಂಶವಾಹಿಯ ರೂಪಾಂತರವು ತಂದೆ ಮತ್ತು ತಾಯಿ ಇಬ್ಬರಿಂದಲೂ ಮಗುವಿಗೆ ಬಂದಿರಬೇಕು. ಇದರ ಸಾಧ್ಯತೆ ಅತಿ ಕಡಿಮೆಯಾಗಿರುವ ಕಾರಣಕ್ಕೇನೆ ಇದು ವಿರಳಾತಿ ವಿರಳ. ಹ್ಯಾರಿ ಐಕೈನ್ಸ್ ಮತ್ತು ಎಡ್ಡಿ ಹಾಲ್ ಇಬ್ಬರ ಪ್ರಕರಣದಲ್ಲೂ ಇದು ಅವರ ಒಬ್ಬ ಪಾಲಕರಿಂದ ಬಂದಿರುವ ಸಾಧ್ಯತೆಯುಂಟು.

ಗೆಳೆಯನ ಅಜ್ಜ ಅದೆಷ್ಟು ವಿಷಯ ಹೇಳಿಸಿದರು!

-(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net