ಜೂನ್‌ 21ಕ್ಕೆ‌ ನೀಟ್ ಪರೀಕ್ಷೆ: ಸೂಸೂತ್ರವಾಗಿ ನಡೆಸುವಂತೆ ಅಧಿಕಾರಿಗಳಿಗೆ ಡಿ.ಸಿ ಇಕ್ರಮ್ ಶರೀಫ್ ಸೂಚನೆ

,
,
Published on
ಕಲಬುರಗಿ: ಇದೇ ಜೂನ್ 21ಕ್ಕೆ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ನೀಟ್ ಮರು ಪರೀಕ್ಷೆ ನಡೆಯಲಿದ್ದು, ಎಲ್ಲಿಯೂ ಲೋಪವಾಗದಂತೆ ಪರೀಕ್ಷೆ ಸುಸೂತ್ರವಾಗಿ ಹಾಗೂ ಕಟ್ಟುನಿಟ್ಟಾಗಿ ನಡೆಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಇಕ್ರಮ್ ಶರೀಫ್ ಸೂಚನೆ ನೀಡಿದರು.
ಬುಧವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪರೀಕ್ಷೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಮತ್ತು ಪರೀಕ್ಷಾ ಕೇಂದ್ರದ ಮುಖ್ಯಸ್ಥರೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಅವರು ನಗರದಾದ್ಯಂತ ಸುಮಾರು 20 ಕೇಂದ್ರದಲ್ಲಿ ಅಂದು ಪರೀಕ್ಷೆ ನಡೆಯಲಿದ್ದು, ಸುಮಾರು 9 ಸಾವಿರಕ್ಕೂ ಹೆಚ್ಚಿನ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಹೆಸರು ನೊಂದಾಯಿಸಿಕೊಂಡಿದ್ದಾರೆ ಎಂದರು.
ಪರೀಕ್ಷೆಗೆ ಮುನ್ನವೆ ನಿಗದಿತ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ, ಅಭ್ಯರ್ಥಿ ಬರೆಯಲು ಅನುಕೂಲವಾಗುವಂತೆ ಆಸನ ವ್ಯವಸ್ಥೆ, ವಿದ್ಯುತ್, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಸೌಲಭ್ಯ ಇರುವಂತೆ ನೋಡಿಕೊಳ್ಳಬೇಕು ಎಂದರು.
ಪರೀಕ್ಷೆ ಹಿನ್ನೆಲೆಯಲ್ಲಿ ಕೇಂದ್ರದ ಸುತ್ತ 200 ಮೀಟರ್ ಪ್ರದೇಶ‌ ನಿಷೇಧಾಜ್ಞೆ ಇರಲಿದ್ದು, ಎಲ್ಲಿಯೂ ಅಕ್ರಮಕ್ಕೆ ಅವಕಾಶವಿಲ್ಲ. ಪೊಲೀಸ್ ಇಲಾಖೆ ಕೇಂದ್ರಗಳ ಸುತ್ತ ಹೆಚ್ಚಿನ‌ ಭದ್ರತೆ ಒದಗಿಸಬೇಕು. ವಿದ್ಯಾರ್ಥಿಗಳು ಮೋಬೈಲ್ ಸೇರಿದಂತೆ ಯಾವುದೇ‌ ಎಲೆಕ್ಟ್ರಾನಿಕ್ ಉಪಕರಣ ಪರೀಕ್ಷಾ ಕೇಂದ್ರಕ್ಕೆ ತರುವಂತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಎಸ್.ಪಿ ಅಡ್ಡೂರು ಶ್ರೀನಿವಾಸುಲು, ಡಿ.ಸಿ.ಪಿ. ಶಾಲೂ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ,
ಪ್ರೊಬೇಷನರ್ ಐ.ಎ.ಎಸ್. ಅಧಿಕಾರಿ ಶಿಖರ್ ಮೋಘಾ, ಪರೀಕ್ಷೆಯ ನಗರ ಸಂಯೋಜಕರಾದ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲ ಭೂಪೇಂದ್ರ, ವಿ.ಟಿ‌.ಯು ಪ್ರಾಧ್ಯಾಪಕ ಶಂಭುಲಿಂಗ ಸೇರಿದಂತೆ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net