6ನೇ ಕ್ಲಾಸಿನ ಕನ್ನಡ ಪುಸ್ತಕಕ್ಕೆ 'ಕೃಷ್ಣ' ಹೆಸರು, ಮಾಂಸಾಹಾರದ ಉಲ್ಲೇಖವೇ ಇಲ್ಲ: NCERT ವಿರುದ್ಧ ಶಿಕ್ಷಣ ತಜ್ಞರು ಕಿಡಿ!

NCERT Kannada textbook row
NCERT Kannada textbook row
Published on

ಪ್ರಮುಖ ಮುಖ್ಯಾಂಶಗಳು

  • 6ನೇ ತರಗತಿಯ ಕನ್ನಡ ಮೂರನೇ ಭಾಷೆಯ ಪಠ್ಯಪುಸ್ತಕ 'ಕೃಷ್ಣ' ಎಂದು ಹೆಸರು
  • 'ಆರೋಗ್ಯವೇ ಭಾಗ್ಯ' ಪಾಠದಲ್ಲಿ ಮೊಟ್ಟೆ, ಮಾಂಸದ ಉಲ್ಲೇಖವಿಲ್ಲ ಎಂದು ಕಿಡಿ
  • ಪಠ್ಯಪುಸ್ತಕವು ಕರ್ನಾಟಕದ ಪ್ರಾದೇಶಿಕ ವೈವಿಧ್ಯತೆ ಮತ್ತು ಜಾನಪದ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಿಲ್ಲ ಎಂದ ತಜ್ಞರು
ಬೆಂಗಳೂರು: ಕರ್ನಾಟಕದಲ್ಲಿ ಶಿಕ್ಷಣ ತಜ್ಞರಿಂದ, NCERTಯ 6ನೇ ಕ್ಲಾಸಿನ ಕನ್ನಡ ಪುಸ್ತಕದ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಪಠ್ಯಪುಸ್ತಕಕ್ಕೆ 'ಕೃಷ್ಣ' ಎಂದು ಹೆಸರಿಸಿರುವುದು ಮತ್ತು ಸಸ್ಯಾಹಾರಿ ಆಹಾರ ಪದ್ಧತಿಯನ್ನು ಮಾತ್ರ ಪ್ರಚಾರ ಮಾಡಿ, ಮಾಂಸಹಾರದ ಬಗ್ಗೆ ಉಲ್ಲೇಖಿಸಿಯೇ ಇಲ್ಲ ಎಂದು ಸಾಹಿತಿಗಳು ಹಾಗೂ ಶಿಕ್ಷಣ ತಜ್ಞರು ಸೇರಿದಂತೆ, ಹೋರಾಟಗಾರರು ಕಿಡಿಕಾರಿದ್ದಾರೆ.
ಸಿಬಿಎಸ್‌ಇ ಶಾಲೆಗಳ 6ನೇ ತರಗತಿಯ ಕನ್ನಡ ಮೂರನೇ ಭಾಷೆಯ ಪಠ್ಯಪುಸ್ತಕಕ್ಕೆ ಕೃಷ್ಣ ಎಂದು ಹೆಸರನ್ನು ಇಡಲಾಗಿದೆ. ಆರೋಗ್ಯವೇ ಭಾಗ್ಯ ಎನ್ನುವ ಪಾಠದಲ್ಲಿ ಮಾಂಸಹಾರದ ಬಗ್ಗೆ ಮಾಹಿತಿಯೇ ಇಲ್ಲ ಪುಸ್ತಕವನ್ನು ಕೇಸರಿಕರಣಗೊಳಿಸುತ್ತಿರುವ ಭಾಗವಾಗಿದೆ. ಹೀಗಾಗಿ NCERT ಸಿದ್ಧಪಡಿಸಿದ ಪಠ್ಯವನ್ನು ಕೈಬಿಟ್ಟು, ಕರ್ನಾಟಕದ ಸಾಂಸ್ಕೃತಿಕ ಗುರುತನ್ನು ಬಿಂಬಿಸುವ 'ಸವಿ ಕನ್ನಡ', 'ಸಿರಿ ಕನ್ನಡ' ಅಥವಾ 'ತಿಳಿ ಕನ್ನಡ' ಪಠ್ಯಗಳನ್ನು ಬಳಸಲು ಒತ್ತಾಯಿಸಲಾಗಿದೆ. ಹಿರಿಯ ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಸೇರಿ ಹಲವರಿಂದ ಪಠ್ಯ ವಾಪಸ್ ಪಡೆಯಲು ಆಗ್ರಹಿಸಿದ್ದಾರೆ.

ಶಿಕ್ಷಣ ತಜ್ಞರು ಕಿಡಿ

'R3ಎನ್ನುವುದು 6ನೇತರಗತಿಯಿಂದ ಕಡ್ಡಾಯಗೊಳಿಸಿರುವ ಮೂರನೇ ಭಾಷಾ ವಿಷಯವಾಗಿದೆ. ಇದರಲ್ಲಿ ಸಾಂಸ್ಕೃತಿಕೆ ಹೇರಿಕೆಯನ್ನು ಅಸ್ತ್ರವನ್ನಾಗಿ ಬಳಕೆ ಮಾಡಿಕೊಳ್ಳಲಾಗಿದೆ. ಶಾಲಾ ಪಠ್ಯಗಳಿಗೆ ಹಿಂದೂ ದೇವರ ಹೆಸರನ್ನು ಇಟ್ಟಿರುವುದು ಶಿಕ್ಷಣದಲ್ಲಿ ಧಾರ್ಮಿಕ ಮತ್ತು ಪುರಾಣ ಆಧಾರಿತ ಚೌಕಟ್ಟನ್ನು ತರಲು ಮಾಡುತ್ತಿರುವ ವ್ಯವಸ್ಥಿತ ಪ್ರಯತ್ನ' ಎಂದು ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಸಾರ್ವಜನಿಕ ಒಕ್ಕೂಟ'ದ ಅಡಿಯಲ್ಲಿ ಒಂದಾಗಿರುವ ಶಿಕ್ಷಣ ತಜ್ಞರ ಸಮೂಹವು ಆರೋಪಿಸಿದೆ.

ವಿ.ಪಿ. ನಿರಂಜನಾರಾಧ್ಯ ಹೇಳಿದ್ದೇನು?

'ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ರಾಷ್ಟ್ರೀಯ ಪಠ್ಯಕ್ರಮದ ಚೌಕಟ್ಟು ಅಡಿಯಲ್ಲಿ ತರಲಾದ ಈ ಪಠ್ಯಪುಸ್ತಕಕ್ಕೆ 'ಕೃಷ್ಣ' ಎಂದು ಹೆಸರಿಸಿರುವುದು ಕೇಸರೀಕರಣದ ಭಾಗವಾಗಿದೆ. ಕರ್ನಾಟಕದ ಶೈಕ್ಷಣಿಕ ಗುರುತು ಪಂಪ, ಕುವೆಂಪು, ಶಿವರಾಮ ಕಾರಂತ ಮತ್ತು ಬಸವಣ್ಣನವರಂತಹ ದಾರ್ಶನಿಕರನ್ನು ಬಿಂಬಿಸಬೇಕೇ ಹೊರತು ಇಂತಹ ಧಾರ್ಮಿಕ ಚೌಕಟ್ಟನ್ನಲ್ಲ' ಎಂದು ಶಿಕ್ಷಣ ತಜ್ಞರು ಗುಡುಗಿದರು.

ಕರ್ನಾಟಕದ ವೈವಿಧ್ಯತೆ ಮಾಯ

ಕರಾವಳಿ, ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆ ಮೈಸೂರು ಭಾಗದ ಸಾಹಿತ್ಯ, ಜಾನಪದ ಹಾಗೂ ಸಾಂಸ್ಕೃತಿಕ ಹಿನ್ನೆಲೆಯನ್ನು ಈ ಪಠ್ಯಪುಸ್ತಕದಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಕರ್ನಾಟಕದ ಸಂಸ್ಕೃತಿ, ವೈಭವ ಪಠ್ಯದಲ್ಲಿ ಇಲ್ಲ. ಅಲ್ಲದೆ, ಇದು 6ನೇ ತರಗತಿಯ ಮಕ್ಕಳ ವಯಸ್ಸಿಗೆ ತಕ್ಕ ಕಥೆಗಳು ಅಥವಾ ಚಿತ್ರಗಳು ಇಲ್ಲ ಎಂದು ಕಿಡಿಕಾರಿದರು.
3ನೇ ತರಗತಿ ಪುಸ್ತಕಕ್ಕೆ ಮೃದುಲಾ ಎಂದು ಹೆಸರಿಡಲಾಗಿದೆ. ಇಂದು ಕೇಸರಿಕರಣಗೊಳಿಸುವ ಭಾಗ ಅಲ್ಲವೇ? ಎಂದು ಕಿಡಿಕಾರಿದ್ದಾರೆ.

ಸಸ್ಯಾಹಾರದ ಬಗ್ಗೆ ಪ್ರಚಾರ

ಪಠ್ಯಪುಸ್ತಕದಲ್ಲಿರುವ 'ಆರೋಗ್ಯವೇ ಭಾಗ್ಯ' ಎಂಬ ಪಾಠದಲ್ಲಿ ಸಮತೋಲಿತ ಆಹಾರದ ಪಟ್ಟಿಯಲ್ಲಿ ಕೇವಲ ಹಾಲು, ಹಸಿರು ತರಕಾರಿ, ಹಣ್ಣುಗಳು ಮತ್ತು ಒಣಹಣ್ಣುಗಳನ್ನು ಮಾತ್ರ ಉಲ್ಲೇಖಿಸಲಾಗಿದೆ. ಇದರಲ್ಲಿ ಮೊಟ್ಟೆ, ಮೀನು ಮತ್ತು ಮಾಂಸಾಹಾರ, ಶೇಂಗಾದೊಂದಿಗೆ ರೊಟ್ಟಿ ಊಟವನ್ನು ಕೈಬಿಡಲಾಗಿದೆ ಎನ್ನಲಾಗಿದೆ.
ಕರ್ನಾಟಕದ ಡಿಎಸ್‌ಇಆರ್‌ಟಿ ಸಂಸ್ಥೆಯನ್ನು ಬದಿಗೊತ್ತಿ ಈ ಪಠ್ಯವನ್ನು ಸಿದ್ಧಪಡಿಸಲಾಗಿದೆ. ಇದೇ ಪಠ್ಯವನ್ನು 6ನೇ ಮತ್ತು 9ನೇ ತರಗತಿ ಎರಡಕ್ಕೂ ಬಳಸಲು ಸಿಬಿಎಸ್‌ಇ ಮುಂದಾಗಿರುವುದನ್ನು ಹೋರಾಟಗಾರರು ಪ್ರಶ್ನಿಸಿದ್ದಾರೆ. ಎನ್​ಸಿಇಆರ್​ಟಿ ಧರ್ಮ ಹಾಗೂ ದೈವದ ರಾಜಕಾರಣದತ್ತ ಮುಖ ಮಾಡಿದೆ ಎಂದು ಕಿಡಿಕಾರಿದರು.

ಎನ್​​ಸಿಇಆರ್​ಟಿ ಕೊಟ್ಟ ಸ್ಪಷ್ಟನೆ ಏನು?

ಸಿಬಿಎಸ್​​ಸಿ ಆರನೇ ತರಗತಿಯ ಕನ್ನಡ ಪುಸ್ತಕಕ್ಕೆ ಕೃಷ್ಣ ಎಂದು ಹೆಸರಿಟ್ಟ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ಪಠ್ಯ ವಾಪಸ್ ಪಡೆಯುವಂತೆ ಕರ್ನಾಟಕದಲ್ಲಿ ಶಿಕ್ಷಣ ತಜ್ಞರು, ಸಾಹಿತಿಗಳು ಸೇರಿದಂತೆ ಹಲವರು ಒತ್ತಾಯಿಸಿದ್ದರು. ಆ ಬೆನ್ನಲ್ಲೇ NCERT ಅಧಿಕೃತ ಮಾಹಿತಿಯೊಂದನ್ನು ಪ್ರಕಟಿಸಿದೆ.

NCERT ಭಾಷಾ ಪಠ್ಯಪುಸ್ತಕಗಳಿಗೆ ಭಾರತದ ನದಿಗಳ ಹೆಸರನ್ನು ಇಟ್ಟಿದೆ, "ಕೃಷ್ಣ" ಎಂಬ ಹೆಸರನ್ನು ಕೃಷ್ಣಾ ನದಿಯ ಹೆಸರಿಡಲಾಗಿದೆ. ಹಿಂದಿ ಪಠ್ಯಪುಸ್ತಕಕ್ಕೆ ಗಂಗಾ, ಇಂಗ್ಲಿಷ್ ಪಠ್ಯಪುಸ್ತಕಕ್ಕೆ ಕಾವೇರಿ ಮತ್ತು ಉರ್ದು ಪಠ್ಯಪುಸ್ತಕಕ್ಕೆ ಯಮುನಾ ಎಂದು ಹೆಸರಿಸಲಾಗಿದೆ. ಅದರಂತೆ ಕರ್ನಾಟಕದಲ್ಲಿ ಹರಿಯುವ ಕೃಷ್ಣಾ ನದಿಯನ್ನು ಕನ್ನಡ ಪುಸ್ತಕಕ್ಕೆ ಇಡಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಯಾವುದನ್ನೂ ಸಮರ್ಥಿಸಿಕೊಂಡಿಲ್ಲ

ಇನ್ನೂ ಆಹಾರದ ಬಗ್ಗೆ ಸ್ಪಷ್ಟನೆ ಕೊಟ್ಟ ಎನ್​ಸಿಇಆರ್​ಟಿ, ಆರೋಗ್ಯವೇ ಭಾಗ್ಯದಲ್ಲಿ ಸಮತೋಲಿತ ಆಹಾರ ಎನ್ನುವ ಶೀರ್ಷಿಕೆಯಡಿ ಪ್ರಕಟಿತವಾದ ಪಠ್ಯದಲ್ಲಿ ನಮ್ಮ ದೇಹಕ್ಕೆ ಬೇಕಾದ ಹಾಲು, ತರಕಾರಿ, ಹಣ್ಣು ಸೇರಿದಂತೆ ಸಮತೋಲಿತ ಆಹಾರದ ಬಗ್ಗೆ ವಿವರಿಸಲಾಗಿದೆ. ಇನ್ನು ಪುಟ 63ರಲ್ಲಿ ಸಸ್ಯಹಾರಿ ಹಾಗೂ ಮಾಂಸಹಾರಿ ಎರಡರ ಬಗ್ಗೆ ವಿವರಣೆ ನೀಡಲಾಗಿದೆ.

ಎಲ್ಲಿಯೂ ಸಸ್ಯಹಾರದ ಬಗ್ಗೆ ಸಮರ್ಥಿಸಿಕೊಂಡಿಲ್ಲ. ವಿವರಿಸಿಲ್ಲ. ಮಾಂಸಾಹಾರಿ ಆಹಾರವನ್ನು ವಿರೋಧಿಸಲಾಗಿಲ್ಲ. ಆಹಾರದ ಬಗ್ಗೆ ಜಾಗೃತಿ ಮೂಡಿಸುವುದು ಎನ್​ಸಿಇಆರ್​ಟಿ ಉದ್ದೇಶವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net