‘ನವ ಸಂಕಲ್ಪ ಸೂತ್ರ’ಕ್ಕೆ ನಮೋ ಕರೆ

ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ‘ಶ್ರೀ ಗುರು ಭೈರವೈಕ್ಯ ಮುಂದಿರ’ ಲೋಕಾರ್ಪಣೆ
ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ‘ಶ್ರೀ ಗುರು ಭೈರವೈಕ್ಯ ಮುಂದಿರ’ ಲೋಕಾರ್ಪಣೆ
Published on

ಪ್ರಮುಖ ಮುಖ್ಯಾಂಶಗಳು

  • ಪರಿಸರ ಉಳಿವು, ಸ್ವಚ್ಛತೆ, ಸ್ವದೇಶಿ ಉತ್ಪನ್ನ ಬಳಕೆ, ಸ್ವದೇಶಿ ಪ್ರವಾಸ ಕೈಗೊಳ್ಳಿ ಎಂದ ಪ್ರಧಾನಿ
  • ಆದಿಚುಂಚನಗಿರಿಯಲ್ಲಿ ಶ್ರೀ ಗುರು ಭೈರವೈಕ್ಯ ಮಂದಿರ ಲೋಕಾರ್ಪಣೆ
ಆದಿಚುಂಚನಗಿರಿ: ವಿಕಸಿತನ ಭಾರತಕ್ಕಾಗಿ ‘9 ಸಂಕಲ್ಪ ಸೂತ್ರ’ ಪಾಲನೆಗೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ಕರೆಕೊಟ್ಟರು. 
ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ‘ಶ್ರೀ ಗುರು ಭೈರವೈಕ್ಯ ಮುಂದಿರ’ ಲೋಕಾರ್ಪಣೆಗೊಳಿಸಿ ಸಹಸ್ರಾರು ಜನರನ್ನುದ್ದೇಶಿಸಿ ಮಾತನಾಡಿದರು.
ಜಲ ಸಂಪನ್ಮೂಲವನ್ನು ಇತಿಮಿತಿಯಲ್ಲಿ ಬಳಕೆ ಮಾಡಿ ಸಂರಕ್ಷಿಸಬೇಕು. ಪರಿಸರ ಉಳಿವಿಗಾಗಿ ‘ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನದಡಿ ಗಿಡ ನೆಟ್ಟು ಬೆಳೆಸಬೇಕು. ಸ್ವಚ್ಛತೆಗೆ ಮೊದಲ ಆದ್ಯತೆ ಕೊಡಬೇಕು. ಧಾರ್ಮಿಕ, ಸಾರ್ವಜನಿಕ, ಹಳ್ಳಿ-ನಗರ ಪ್ರದೇಶಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಇದು ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿ ಎಂದು ತಿಳಿಹೇಳಿದರು. 
ದೇಶವು ಆತ್ಮನಿರ್ಭರವಾಗಲು ಸ್ವದೇಶಿ ಉತ್ಪನ್ನಗಳನ್ನೇ ಬಳಕೆಗೆ ದೇಶದ ನಿವಾಸಿಗಳು ಮುಂದಾಗಬೇಕು. ಇದು ದೇಶೀಯ ಕೈಗಾರಿಕೆಗಳನ್ನು ಸದೃಢಗೊಳಿಸುತ್ತದೆ. ರಾಷ್ಟ್ರದ ಸೌಂದರ್ಯವನ್ನು ಅನ್ವೇಷಿಸಲು ‘ಸ್ವದೇಶಿ ಪ್ರವಾಸ’ ಕೈಗೊಳ್ಳಬೇಕು. ಇದು ದೇಶೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲಿದೆ ಎಂದರು.
ಭೂತಾಯಿಯನ್ನೂ ರಕ್ಷಿಸಲು ರಾಸಾಯನಿಕಮುಕ್ತ ಕೃಷಿಗೆ ಪ್ರಾಶಸ್ತ್ಯ ಕೊಡಬೇಕು. ಇದಕ್ಕಾಗಿ ರೈತರು ನೈಸರ್ಗಿಕ ಕೃಷಿಗೆ ಮೊರೆ ಹೋಗಬೇಕು ಎಂದು ಸಲಹೆ ನೀಡಿದರು.
ಈಗಿನ ಕಾಲದಲ್ಲಿ ಆರೋಗ್ಯ ರಕ್ಷಣೆಯತ್ತ ವಿಶೇಷ ಗಮನಹರಿಸಬೇಕು. ಎಚ್.ಡಿ.ದೇವೇಗೌಡರು ರಾಗಿಮುದ್ದೆಯನ್ನು ಜನಪ್ರಿಯಗೊಳಿಸಿದರು. ರಾಗಿ ಮಹತ್ವದ ಅರಿವು ಅವರಿಗಿದೆ. ಅಂತೆಯೇ ಯುವಜನರು ಸಹ ಪ್ರಾದೇಶಿಕ ಮುಖ್ಯ ಆಹಾರವಾದ ಸಿರಿಧಾನ್ಯಗಳನ್ನು ಬಳಕೆ ಮಾಡಬೇಕು. 
ಈಗಿನ ಜನರನ್ನು ಅತಿಯಾಗಿ ಕಾಡುತ್ತಿರುವ ಬೊಜ್ಜಿನ ವಿರುದ್ಧ ಹೋರಾಡಲು ಅಡುಗೆ ಎಣ್ಣೆಯ ಬಳಕೆ ಪ್ರಮಾಣವನ್ನು ಶೇ.10ರಷ್ಟು ತಗ್ಗಿಸಬೇಕು. ದೈನಂದಿನ ಜೀವನದಲ್ಲಿ ಸದೃಢತೆ  (ಫಿಟ್‌ನೆಸ್) ಕಾಯ್ದುಕೊಳ್ಳಲು ಯೋಗ, ಕ್ರೀಡೆಯಲ್ಲಿ ಸಕ್ರಿಯವಾಗಬೇಕು. ಅಗತ್ಯ ಇರುವವರಿಗೆ ನೆರವಾಗಲು ಸೇವಾ ಮನೋಭಾವ ಬದುಕಿನ ಮುಖ್ಯ ಉದ್ದೇಶವಾಗಬೇಕು ಎಂದು ಯುವಜನರಿಗೆ ತಿಳಿಹೇಳಿದರು.
ಈ ಎಲ್ಲ ಸಂಕಲ್ಪ ಜೀವನದಲ್ಲಿ ಮೈಗೂಡಿಸಿಕೊಳ್ಳಬೇಕು. ಇದು ವಿಕಸಿತ ಕರ್ನಾಟಕ, ವಿಕಸಿತ ಭಾರತ ನಿರ್ಮಾಣಕ್ಕೆ ಇನ್ನಷ್ಟು ವೇಗ ಸ್ಪರ್ಶ ನೀಡಲಿದೆ ಎಂದು ಭರವಸೆ ವ್ಯಕ್ತಪಡಿಸಿದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net