ಪಂಚಮಿಗೆ ಜೋಕಾಲಿ, ಆಡೋಣ ಜೋಡಿಲಿ... ಏನಿದು ಉತ್ತರ ಕರ್ನಾಟಕದ ವಿಶಿಷ್ಟ ಸಂಪ್ರದಾಯ? | Nagara Panchami Jokali

ಉತ್ತರ ಕರ್ನಾಟಕದಲ್ಲಿ ನಾಗರ ಪಂಚಮಿಗೆ ‘ಜೋಕಾಲಿ’ ಸಂಪ್ರದಾಯ
ಉತ್ತರ ಕರ್ನಾಟಕದಲ್ಲಿ ನಾಗರ ಪಂಚಮಿಗೆ ‘ಜೋಕಾಲಿ’ ಸಂಪ್ರದಾಯ
Published on

ಪ್ರಮುಖ ಮುಖ್ಯಾಂಶಗಳು

  • ನಾಗರ ಪಂಚಮಿಗೆ ಉಯ್ಯಾಲೆ ಕಟ್ಟುವ ವಿಶೇಷ ಸಂಪ್ರದಾಯ
  • ತವರು ಮನೆಗೆ ಬರುವ ಹೆಣ್ಣುಮಕ್ಕಳಿಗೆ ಜೋಕಾಲಿ ಆಟ ವಿಶೇಷ
  • ಪ್ರಕೃತಿಯೊಂದಿಗೆ ಬೆಸೆದುಕೊಂಡಿರುವ ಹಬ್ಬ ನಾಗರ ಪಂಚಮಿ
Nagara Panchami festival: ‘ಶ್ರಾವಣ ಬಂತು ಕಾಡಿಗೆ, ಬಂತು ನಾಡಿಗೆ‘ ಎಂಬಂತೆ ಶ್ರಾವಣ ಮಾಸ ಎಂದರೆ ಸಾಲು ಸಾಲು ಹಬ್ಬಗಳ ಸಂಭ್ರಮ. ಹೀಗಾಗಿಯೇ ಶ್ರಾವಣವನ್ನು ಹಬ್ಬಗಳ ಹೆಬ್ಬಾಗಿಲು ಎಂದು ಕರೆಯಲಾಗುತ್ತೆ. ಈ ಮಾಸದ ಹಬ್ಬಗಳಿಗೆ ಮುನ್ನುಡಿ ಬರೆಯುವ ಮೊದಲ ಪರ್ವವೇ ನಾಗರ ಪಂಚಮಿ.
ನಾಗರ ಪಂಚಮಿಯಂದು ನಾಗ ದೇವತೆಯನ್ನು ಶ್ರದ್ಧಾ-ಭಕ್ತಿಯಿಂದ ಪೂಜಿಸುವುದು ಸಂಪ್ರದಾಯ. ಆದರೆ, ಈ ಹಬ್ಬ ಕೇವಲ ಪೂಜೆ-ನೈವೇದ್ಯಕ್ಕೆ ಸೀಮಿತವಾಗಿಲ್ಲ. ಉತ್ತರ ಕರ್ನಾಟಕದ ಭಾಗಗಳಲ್ಲಿ ನಾಗರ ಪಂಚಮಿಗೆ ವಿಶೇಷವಾದ ಆಚರಣೆಗಳು ಇಂದಿಗೂ ಹಸಿರಾಗಿವೆ. ಅದರಲ್ಲೂ ಪಂಜಮಿ ಜೋಕಾಲಿ ಕಟ್ಟಿಕೊಂಡು, ಹಾಡು-ಹಸೆಗಳೊಂದಿಗೆ ಜೋಕಾಲಿ ಆಡುವುದು ಹಬ್ಬದ ಪ್ರಮುಖ ಆಕರ್ಷಣೆ. ಹೀಗೆ ಸಂಪ್ರದಾಯ, ಸಂಭ್ರಮಗಳನ್ನು ಒಟ್ಟುಗೂಡಿಸುವ ನಾಗರ ಪಂಚಮಿ ಮಹತ್ವ ಪಡೆದಿದೆ.

ಆಡೋಣ ಬಾ ಜೋಕಾಲಿ

ಇನ್ನು ಉತ್ತರ ಕರ್ನಾಟಕದಲ್ಲಿ ನಾಗರ ಪಂಚಮಿ ಎಂದರೆ ಮಹಿಳೆಯರ ಸಡಗರ-ಸಂಭ್ರಮದ ಹಬ್ಬ. ಈ ಹಬ್ಬದಂದು ಮನೆ ಮುಂದೆ, ಮರದ ಕೊಂಬೆಗೋ? ಮನೆಯ ಪಡಸಾಲೆಯಲ್ಲೋ ಜೋಕಾಲಿ ಕಟ್ಟುತ್ತಾರೆ. ಮಹಿಳೆಯರು, ಯುವತಿಯರು ಹೊಸ ಉಡುಗೆ ತೊಟ್ಟು, ಜೋಕಾಲಿ ಆಡಿ ಹಬ್ಬದ ಸಂಭ್ರಮವನ್ನು ಸವಿಯುತ್ತಾರೆ. ಮಕ್ಕಳು ಕೊಬ್ಬರಿ ಬಟ್ಟಲಿಗೆ ದಾರ ಕಟ್ಟಿ ಆಟವಾಡಿ ಖುಷಿಪಡುತ್ತಾರೆ. ಇನ್ನು ಗಂಡಸರದ್ದೇ ಬೇರೆಯ ಆಟ; ಅವರು ನಿಂಬೆಹಣ್ಣು ಎಸೆಯುವಂತಹ ಸಾಂಪ್ರದಾಯಿಕ ಆಟಗಳನ್ನು ಆಡಿ ಹಬ್ಬದ ಮಜಾ ಹೆಚ್ಚಿಸುತ್ತಾರೆ.

ತವರು ಮನೆಯ ನಂಟಿನ ಸಂಕೇತ

ಈ ಜೋಕಾಲಿ ಆಟದ ಹಿಂದೆ ಹೆಣ್ಣುಮಕ್ಕಳಿಗೆ ತಮ್ಮ ತವರು ಮನೆಯ ನಂಟಿನ ಕಥೆ ಕೂಡ ಇದೆ. ಮದುವೆಯಾದ ಹೆಣ್ಣುಮಕ್ಕಳು ನಾಗರ ಪಂಚಮಿ ಹಬ್ಬಕ್ಕೆ ತವರು ಮನೆಗೆ ಬಂದು ಅಕ್ಕ-ತಂಗಿಯರು ಜತೆ ಸೇರಿ ಜೋಕಾಲಿ ಆಡುತ್ತಾರೆ. ಹೀಗಾಗಿ ಜೋಕಾಲಿ ಕೇವಲ ಆಟವಲ್ಲ, ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವ, ಕುಟುಂಬದ ಜೊತೆ ಸಮಯ ಕಳೆಯುವ ಸಂತಸದ ಕ್ಷಣ.

ಪಂಚಮಿ ಉಂಡಿ ಸವಿಯುವ ಹಬ್ಬ

ನಾಗರ ಪಂಚಮಿ ಹಬ್ಬದಂದು ಉತ್ತರ ಕರ್ನಾಟಕದ ಮನೆಗಳಲ್ಲಿ ವಿಶೇಷ ಸಿಹಿ ಖಾದ್ಯಗಳನ್ನು ತಯಾರಿಸುವ ಸಂಪ್ರದಾಯವೂ ಇದೆ. ವಿವಿಧ ಬಗೆಯ ಪಂಚಮಿ ಉಂಡಿ, ರೊಟ್ಟಿ ಹಬ್ಬ, ಹೋಳಿಗೆ ಸೇರಿದಂತೆ ಬಗೆಬಗೆಯ ತಿನಿಸುಗಳನ್ನು ಸಿದ್ಧಪಡಿಸಲಾಗುತ್ತದೆ. ಪ್ರಕೃತಿಯೊಂದಿಗೆ ಬೆಸೆದುಕೊಂಡಿರುವ ಈ ಹಬ್ಬ, ಗ್ರಾಮೀಣ ಜನರಿಗೆ ತಮ್ಮ ದಿನನಿತ್ಯದ ಕಷ್ಟ-ಕಾರ್ಪಣ್ಯಗಳನ್ನು ಮರೆತು ಸಂಭ್ರಮಿಸುವ ಅವಕಾಶವನ್ನು ನೀಡುತ್ತದೆ.
ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ರೈತರು, ಹೊಲ-ಗದ್ದೆಗಳಲ್ಲಿ ಸರ್ಪಗಳಿಂದ ಯಾವುದೇ ತೊಂದರೆಯಾಗದಿರಲಿ ಎಂದು ನಾಗದೇವರಿಗೆ ಹಾಲೆರೆದು ಭಕ್ತಿಯಿಂದ ಪ್ರಾರ್ಥಿಸುತ್ತಾರೆ. ಬೆಳೆ ಸಮೃದ್ಧಿಯಾಗಿ ಬರಲಿ, ರೈತರ ಬದುಕು ಹಸನಾಗಿರಲಿ ಎಂದು ಪೂಜೆ ಸಲ್ಲಿಸುತ್ತಾರೆ. ಆಧುನಿಕ ಜೀವನಶೈಲಿಯ ಪ್ರಭಾವದಿಂದ ಇಂತಹ ಸಾಂಪ್ರದಾಯಿಕ ಆಚರಣೆಗಳು ನಿಧಾನವಾಗಿ ಕಡಿಮೆಯಾಗುತ್ತಿದ್ದರೂ, ಉತ್ತರ ಕರ್ನಾಟಕದ ಹಲವು ಗ್ರಾಮಗಳಲ್ಲಿ ನಾಗರ ಪಂಚಮಿಯ ಈ ವಿಶಿಷ್ಟ ಸಂಪ್ರದಾಯಗಳು ಇಂದಿಗೂ ಜೀವಂತವಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net