_1769796304906.webp?w=480&auto=format%2Ccompress&fit=max)
_1769796304906.webp?w=480&auto=format%2Ccompress&fit=max)
ನಾದೋಪಾಸಕ ಬೇಂದ್ರೆಯವರ ಕಾವ್ಯಗಳಲ್ಲಿಯೇ ‘ಬೇಂದ್ರೆ ಸಂಗೀತ’ದ ಮೂಲವಿದೆ. ಬೇಂದ್ರೆಯವರು ಸಾಮಸಂಗೀತವನ್ನು ಆರಾಧಿಸಿದವರು. ಅಪರೂಪದ ಸಂಗೀತಗಾರರು. ತಮ್ಮ ಕವನಗಳಿಗೆ ತಾವೇ ಧಾಟಿ ರೂಪಿಸಿಕೊಂಡವರು. ಅವರ ಕಾವ್ಯಗಳೆಲ್ಲ ನಾದಮಯ. ನಾದ ಮತ್ತು ಲಯ ಕವಿತೆಯ ಲಕ್ಷಣ ಎಂದು ನಂಬಿದವರು ಇವುಗಳ ಪ್ರೇರಣೆಯಿಂದಲೇ ಕವಿತೆಗಳನ್ನು ಕಟ್ಟಿದವರು. ಹಿಂದುಸ್ತಾನಿ ರಾಗಗಳಿಗಾಗಿ ಹಲವು ಬಂದಿಶ್ಗಳನ್ನು ಕನ್ನಡದಲ್ಲಿ ರಚಿಸಿ ವಿವಿಧ ಕಲಾವಿದರಿಂದ ಹಾಡಿಸಿದ್ದಾರೆ. ಅವರ ಕವಿತೆಗಳಲ್ಲಿ ಸಂಗೀತದ ಶಾಸ್ತ್ರಾಂಶಗಳು ಅಡಕವಾಗಿವೆ. ಅವರು ರವೀಂದ್ರರಂತೆ ಹೊಸಬಗೆಯ ಸಂಗೀತದ ಹುಟ್ಟಿಗಾಗಿ ಹಂಬಲಿಸಿದವರಲ್ಲ. ತಾವೇ ನಾದರೂಪಕವಾಗಿದ್ದವರು.
‘ಬೇಂದ್ರೆ ಸಂಗೀತ’ವನ್ನು ರೂಪಿಸಲು ಬಯಸಿದ ಡಾ.ವಾಮನ ಬೇಂದ್ರೆ, ಡಾ.ಕೆ.ಎಸ್.ಶರ್ಮ, ಪಂ.ಕೃಷ್ಣಾಜಿ ಕುರ್ತಕೋಟಿ ಹಾಗೂ ಪಂ.ವೆಂಕಣ್ಣ ಮಣ್ಣೂರ ಮುಂತಾದವರು ಹಿಂದುಸ್ತಾನಿ ಸಂಗೀತದ ಛಾಯೆಯಡಿಯಲ್ಲಿಯೇ ಸಾಗುತ್ತಾರೆ. ಬೇಂದ್ರೆ ಸಂಗೀತ ಹಿಂದುಸ್ತಾನಿಸಂಗೀತದ ನೆಲೆಯಲ್ಲಿಯೇ ಸಾಗಿದ್ದರೂ, ರವೀಂದ್ರಸಂಗೀತದಿಂದಲೂ, ಹಿಂದುಸ್ತಾನಿಸಂಗೀತದಿಂದಲೂ ತನ್ನನ್ನು ಭಿನ್ನವಾಗಿಸಿಕೊಳ್ಳಲು ಪ್ರಯತ್ನಿಸುತ್ತದೆ. ಬೇಂದ್ರೆಸಂಗೀತವು ವರ್ಣ, ಸ್ವರ, ಪದ, ನಾದ, ಭಾವ, ರಾಗ, ಲಯ, ವಿನ್ಯಾಸಗಳೆಂಬ ಅಷ್ಟಾಂಗಗಳನ್ನು ಸಾಹಿತ್ಯಾರ್ಥ ಮತ್ತು ಸಂಗೀತಾರ್ಥಗಳ ಮಧುರಮಿಲನವನ್ನಾಗಿಸುತ್ತದೆ.
ಬೇಂದ್ರೆ ಸಂಗೀತವನ್ನು ಶಾಸ್ತ್ರವನ್ನಾಗಿ ಕಟ್ಟುವ ದಿಸೆಯಲ್ಲಿ ಹನ್ನೆರಡು ಕೃತಿಗಳು ಪ್ರಕಟವಾಗಿವೆ. ಅವರ 1427 ಕವಿತೆಗಳ ಪೈಕಿ 347 ಗೀತೆಗಳಿಗೆ ಹಿಂದುಸ್ತಾನಿಸಂಗೀತಕ್ಕನುಗುಣವಾಗಿ ರಾಗ ಸಂಯೋಜಿಸಲಾಗಿದೆ. ‘ಬೇಂದ್ರೆ ಸಂಗೀತ ಪ್ರವೇಶಿಕಾಃ ಪ್ರಥಮ ವರ್ಷ’ ಕೃತಿಯು (2013) ಏಕೈಕ ಮತ್ತು ಕೊನೆಯ ಪಠ್ಯಪುಸ್ತಕವಾಗಿದೆ. ‘ಬೇಂದ್ರೆಸಂಗೀತ ಸಿದ್ಧಾಂತ ಕೃತಿ’ (2006) ಬೇಂದ್ರೆಸಂಗೀತದ ಕುರಿತು ಬರೆದ ಲೇಖನಗಳನ್ನು ಒಳಗೊಂಡಿವೆ.
ಬೇಂದ್ರೆ ಸಂಗೀತಕ್ಕೆ ಹಿಂದುಸ್ತಾನಿ ಸಂಗೀತವು ಮೂಲಾಧಾರ ಮಾತ್ರವಲ್ಲ; ಅದನ್ನೇ ಅನುಕರಿಸುತ್ತದೆ. ಹಾಗಂತ ಅದು ಹಿಂದುಸ್ತಾನಿಯ ‘ಖಯಾಲ್’ ಗಾಯನಕ್ಕೆ ಬದ್ಧವಾಗಿರಬೇಕಾದ ಅಗತ್ಯವಿಲ್ಲ. ಬೇಂದ್ರೆಯವರ ಅಮೂರ್ತವಾದ ನಾದಯಾತ್ರೆಗೆ ಮೂರ್ತರೂಪವನ್ನು ಕೊಡುವ ಪ್ರಯತ್ನವನ್ನು ಬೇಂದ್ರೆಸಂಗೀತ ಮಾಡುತ್ತದೆ. ಬೇಂದ್ರೆಸಂಗೀತಕ್ಕಿರುವ ನಿರ್ದಿಷ್ಟ ಗುರಿಗಳೆಂದರೆ, ಬೇಂದ್ರೆಕಾವ್ಯವನ್ನು ಎಲ್ಲರಿಗೂ ತಲುಪಿಸುವುದು, ಸುಗಮ ಸಂಗೀತಕ್ಕಿಂತ ವಿಭಿನ್ನ ಸ್ವರೂಪ ಪಡೆದುಕೊಳ್ಳುವುದು, ಬೇಂದ್ರೆ ಸಂಗೀತವನ್ನು ಜನಪ್ರಿಯಗೊಳಿಸುವುದು.
ಬೇಂದ್ರೆ ಸಂಗೀತವು ಕಾವ್ಯದ ಭಾವಕ್ಕನುಗುಣವಾಗಿ ಹಿಂದುಸ್ತಾನಿ ರಾಗಗಳನ್ನು ಬಳಸಿಕೊಳ್ಳುವ ಪ್ರಯತ್ನ ಮಾಡುತ್ತದೆ. ಅದು ರವೀಂದ್ರ ಸಂಗೀತದಂತೆ ರಾಗಸಂವಿಧಾನವನ್ನು ಮೀರುವುದಿಲ್ಲ. ಬೇಂದ್ರೆಸಂಗೀತವು ಶಾಸ್ತ್ರೀಯ ಲಘುಸಂಗೀತ ಪ್ರಕಾರಗಳನ್ನು ಒಳಗೊಳ್ಳದೆ ಲಾವಣಿಯಂಥ ಜಾನಪದ ರಚನೆಗಳ ಸಂವಿಧಾನವನ್ನು ಸಂಗೀತದಲ್ಲಿಯೂ, ಕೀರ್ತನೆಗಳನ್ನು ರಚನಾ ವಿನ್ಯಾಸದಲ್ಲಿಯೂ ಅವಲಂಬಿಸುತ್ತದೆ.
ಬೇಂದ್ರೆಯವರ ಹಾಡುಗಳನ್ನು ಹಾಡುವ ಪರಮೋದ್ದೇಶವನ್ನು ಹೊಂದಿರುವುದರಿಂದ ಗಾಯಕರಿಗೆ ರವೀಂದ್ರಸಂಗೀತದಂತೆ ನಿರ್ಬಂಧವನ್ನು ಇದು ವಿಧಿಸುವುದಿಲ್ಲ. ಹಾಡೆಂಬುದು ನಾದದ ಮೂಲದಿಂದ ಉಗಮಿಸಿದರೂ ಶಾಸ್ತ್ರದ ಹಂಗುತೊರೆದು ಹೊಮ್ಮಬೇಕು ಎಂಬುದು ಬೇಂದ್ರೆಯವರು ನಂಬಿದ ಮೂಲತತ್ತ ್ವಗಳಲ್ಲಿ ಒಂದು. ಅದು ಭಾರತೀಯ ಸಾಂಪ್ರದಾಯಿಕ ಸಂಗೀತದಿಂದ ಬೇರ್ಪಟ್ಟು ರವೀಂದ್ರಸಂಗೀತದಂತೆ ಸ್ವಂತ ಅಸ್ತಿತ್ವ ಪಡೆಯಲು ಇನ್ನೂ ಸಾಕಷ್ಟು ಪ್ರಯತ್ನ ಮತ್ತು ಕಾಲಾವಕಾಶ ಬೇಕು.
ಬೇಂದ್ರೆಸಂಗೀತವನ್ನು ಕಟ್ಟುವ ಕೆಲಸ ಅರ್ಧಕ್ಕೆ ನಿಂತಿದೆ. ಬೇಂದ್ರೆಯವರ ಮಾತಿನಲ್ಲೇ ಹೇಳುವುದಾದರೆ, ಅದಿನ್ನೂ ಆಗಬೇಕಿರುವ ಕಲ್ಕಿಯ ಅವತಾರ. ‘ಹುಟ್ಟಿದಾಗಲೇ ಹಡದಾಕಿನ್ನ ಬಿಟ್ಟಬಂದಾ’ ಎಂಬುದು ರವೀಂದ್ರಸಂಗೀತದಲ್ಲಿ ಘಟಿಸಿದಂತೆ ಬೇಂದ್ರೆಸಂಗೀತದಲ್ಲಿ ಘಟಿಸಬೇಕಾಗಿರುವ ಸಂಗತಿ. ನಿಂತುಹೋಗಿರುವ ಕೆಲಸವನ್ನು ಮುಂದುವರಿಸುವ ಪಡೆಯ ನಿರೀಕ್ಷೆಯನ್ನು ಅದು ಇಟ್ಟುಕೊಂಡಿದೆ.
-ಶಿರೀಷ ಜೋಶಿ ಬೆಳಗಾವಿ (ಲೇಖಕರು ಸಾಹಿತಿ ಮತ್ತು ಸಂಗೀತ ವಿಮರ್ಶಕರು)