ಮೈಸೂರಿನ ಸಬ್ ಅರ್ಬನ್ ರಸ್ತೆ ಮುಂದಿನ ಗೋಡೆಗಳಲ್ಲಿ ಕನ್ನಡಿಯಿಟ್ಟ ಪಾಲಿಕೆ; ಮೂತ್ರ ವಿಸರ್ಜನೆ ತಡೆಯಲು ಮೆಗಾ ಪ್ಲ್ಯಾನ್.. Mysore

Mirror experiment in Mysore
Mirror experiment in Mysore
Published on

ಪ್ರಮುಖ ಮುಖ್ಯಾಂಶಗಳು

  • ಸ್ವಚ್ಛ ಮೈಸೂರಿಗಾಗಿ ಸಾರ್ವಜನಿಕ ಸ್ಥಳದಲ್ಲಿ ಕನ್ನಡಿ ಅಳವಡಿಸಿದ ಪಾಲಿಕೆ
  • ಮೈಸೂರಿನ ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುವುದನ್ನ ತಡೆಗಟ್ಟಲು ಮೆಗಾ ಪ್ಲ್ಯಾನ್
  • ಸಬ್​ ಅರ್ಬನ್​​ ರಸ್ತೆ ಮುಂದಿನ ಗೋಡೆಯುದ್ದಕ್ಕೂ ಬೃಹತ್​ ಗಾತ್ರದ ಎಲ್​ಇಡಿ ಕನ್ನಡಿ ಅಳವಡಿಕೆ
ಮೈಸೂರು: ಕಸ ಅಥವಾ ಮೂತ್ರ ವಿಸರ್ಜನೆ ಮಾಡುವ ಸ್ಥಳದಲ್ಲಿ ಸಾಮಾನ್ಯವಾಗಿ, ಇಲ್ಲಿ ಮೂತ್ರ ವಿಸರ್ಜನೆ ಮಾಡುವವರಿಗೆ, ಕಸ ಹಾಕುವವರಿಗೆ ದಂಡ ವಿಧಿಸಲಾಗುವುದು ಎನ್ನುವ ಬೋರ್ಡ್​ ನೋಡಿಯೇ ಇರುತ್ತೇವೆ. ಆದರೆ, ಏನೇ ತಂತ್ರ ರೂಪಿಸಿದರು ಸಹ ಜನರಲ್ಲಿ ಶಿಸ್ತು ಬರುತ್ತಿಲ್ಲ. ಜನರು ತಮ್ಮ ಚಾಳಿ ಬಿಡದೇ ಸಮಸ್ಯೆಗೂ ಪರಿಹಾರ ಸಿಗುತ್ತಿಲ್ಲ ಎನ್ನುವುದು ನಗರ ಪಾಲಿಕೆಗಳ ಚಿಂತೆ. ಈ ಮಧ್ಯೆ ಮೈಸೂರು ನಗರ ಪಾಲಿಕೆಯು ಇಂತಹ ತಲೆನೋವನ್ನು ಹೋಗಲಾಡಿಸಲು 'ಮಾಸ್ಟರ್ ಪ್ಲ್ಯಾನ್' ಒಂದನ್ನು ಜಾರಿಗೆ ತಂದಿದೆ.

ಏನಿದು ಹೊಸ ಯೋಜನೆ?

ಹೌದು, ಮೈಸೂರಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮಹಾನಗರ ಪಾಲಿಕೆ ಸಬ್​ ಅರ್ಬನ್​​ ಬಸ್​ ನಿಲ್ದಾಣ ನಿಲ್ದಾಣದ ಗೋಡೆಗಳಿಗೆ ಕನ್ನಡಿ (ರಿಫ್ಲೆಕ್ಟರ್) ಮತ್ತು ಎಲ್ಇಡಿ ಬಲ್ಬ್‌ಗಳನ್ನು ಅಳವಡಿಸಿದೆ. ಈ ಮೂಲಕ ನಗರ ಶುಚಿತ್ವ ಹಾಳು ಮಾಡುವವರ ವಿರುದ್ಧ ಸಮರ ಸಾರಿದೆ.
ಸಾಮಾನ್ಯವಾಗಿ ಜನರು ಕತ್ತಲೆಯ ಅಥವಾ ನಿರ್ಜನವಾದ ಗೋಡೆಗಳನ್ನು ಮೂತ್ರ ವಿಸರ್ಜನೆಗೆ ಬಳಸಿಕೊಳ್ಳುತ್ತಾರೆ. ಆದರೆ ಇಲ್ಲಿ ಕನ್ನಡಿ ಅಳವಡಿಸಿರುವುದರಿಂದ, ಯಾರಾದರೂ ಗೋಡೆಯತ್ತ ಮುಖ ಮಾಡಿದರೆ ಅವರ ಪ್ರತಿಬಿಂಬ ಅವರಿಗೇ ಕಾಣುತ್ತದೆ. ಇದು ಸಾರ್ವಜನಿಕರಲ್ಲಿ ಮುಜುಗರವನ್ನು ಉಂಟುಮಾಡುವ ಮೂಲಕ ಅವರ ಶಿಸ್ತುಬಾಹಿರ ವರ್ತನೆಗೆ ತಡೆ ಹಾಕುತ್ತದೆ.
ಜೊತೆಗೆ ರಾತ್ರಿ ಹೊತ್ತಲ್ಲಿ ಕನ್ನಡಿ ಕಾಣುವಂತೆ ಎಲ್‌ಇಡಿ ಬಲ್ಬ್‌ಗಳ ಬೆಳಕು ಇರುವುದರಿಂದ ಕತ್ತಲೆಯಲ್ಲಿ ಇಂತಹ ಕೆಲಸ ಮಾಡುವವರಿಗೆ ಈಗ ಜಾಗವಿಲ್ಲದಂತಾಗಿದೆ. ನಗರದ ಶುಚಿತ್ವವನ್ನು ಹಾಳುಮಾಡುವವರ ವಿರುದ್ಧ ಮೈಸೂರು ಮಹಾನಗರ ಪಾಲಿಕೆ ಈ ಮೂಲಕ ಹೊಸ ಸಮರವನ್ನೇ ಸಾರಿದ್ದು, ಈ ವಿನೂತನ ಪ್ರಯೋಗ ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ಇನ್​ಸ್ಟಾಗ್ರಾಮ್​ನಲ್ಲಿನ ವಿಡಿಯೋದಲ್ಲಿ ಏನಿದೆ?

ಮೈಸೂರಿನ ಸಬ್​ ಅರ್ಬನ್​​ ಬಸ್​ ನಿಲ್ದಾಣದ ಮುಂದಿನ ರಸ್ತೆಯಲ್ಲಿ ಕನ್ನಡಿಯನ್ನು ಇಡಲಾಗಿದೆ. ದಂಡ ವಿಧಿಸಲಾಗುತ್ತದೆ ಎಂದು ಏನೇ ಕ್ರಮ ಕೈಗೊಂಡರು ಬೀದಿ ನಾಯಿಗಳು ಲೈಟ್​ ಕಂಬಕ್ಕೆ ಮೂತ್ರ ವಿಸರ್ಜಿಸುವಂತೆ, ಜನರು ಗೋಡೆಗಳ ಮೇಲೆ ವಿಸರ್ಜನೆ ಮಾಡುತ್ತಿದ್ದರು. ಈ ಪ್ಲಾನ್​ ಯಾರದ್ದೋ ಗೊತ್ತಿಲ್ಲ. ಆದರೆ, ಒಳ್ಳೆಯ ಪ್ಲ್ಯಾನ್​ ಮಾಡಿದ್ದಾರೆ. ಇನ್ಮುಂದೆ ಗೋಡೆ ಮೇಲೆ ಮೂತ್ರ ವಿಸರ್ಜಿಸೋರ ಸಂಖ್ಯೆ ಕಡಿಮೆಯಾಗಬಹುದು ಎಂದು ಇನ್​ಸ್ಟಾಗ್ರಾಮ್​ನಲ್ಲಿ ಇನ್​ ಮೈಸೂರು ಎನ್ನುವ ಖಾತೆಯಿಂದ ಹಂಚಿಕೊಂಡಿದೆ. ಇದಕ್ಕೆ ಶೀರ್ಷಿಕೆ ಸ್ವಚ್ಛತೆ ಕಡೆ ನಮ್ಮ ನಡೆ ಎಂದು ಕೊಟ್ಟುಕೊಂಡಿದ್ದಾರೆ.
ಮೈಸೂರು ಒಂದು ಐತಿಹಾಸಿಕ ಹಿನ್ನೆಲೆಯುಳ್ಳ ತಾಣ, ಇಲ್ಲಿನ ಅರಮನೆ ಮತ್ತು ದೇವಸ್ಥಾನ ನೋಡಲು ಸಾವಿರಕ್ಕು ಹೆಚ್ಚು ಪ್ರವಾಸಿಗರು ನಿತ್ಯ ಭೇಟಿ ನೀಡುತ್ತಾರೆ. ಇಂತಹ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಆದ್ಯತೆ. ಆದರೆ, ಹಲವರು ಪ್ರಯಾಣಿಸುವ ಮಾರ್ಗ ಮಧ್ಯೆಯೇ ಮೂತ್ರ ವಿಸರ್ಜನೆ ಮಾಡುವ ಪ್ರಕರಣ ಹೆಚ್ಚಾಗುತ್ತರುವುದನ್ನು ತಡೆಗಟ್ಟುವುದು, ಮೈಸೂರಿನ ಅಂದ ಕಾಪಾಡಲು ನಗರ ಪಾಲಿಕೆ ಈ ಮಹತ್​ ಕಾರ್ಯಕ್ಕೆ ಕೈ ಹಾಕಿದೆ, (ಏಜೆನ್ಸೀಸ್)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net