ನೆಲಮಂಗಲ : ಬೆಂಗಳೂರು ಉತ್ತರ ತಾಲೂಕಿನ ಮಾದಾವರದಲ್ಲಿ ದುಷ್ಕರ್ಮಿಗಳು ಧಾರವಾಡ ಮೂಲದ ರವಿ (30) ಎಂಬಾತನನ್ನು ಹತ್ಯೆ ಮಾಡಿ ಗುರುತು ಸಿಗದಂತೆ ಮಾಡಲು ಶವಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ.
2 ತಿಂಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ರವಿ ಪೀಣ್ಯ ಬಳಿ ಎಗ್ರೈಸ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಜ.1ರಂದು ತಡರಾತ್ರಿ ದುಷ್ಕರ್ಮಿಗಳು ತಲೆ ಮೇಲೆ ಕಲ್ಲುಹಾಕಿ ಹತ್ಯೆ ಮಾಡಿದ್ದಾರೆ. ಬಳಿಕ ಮೃತ ದೇಹಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಜ.2ರಂದು ಬೆಳಗ್ಗೆ 8 ಗಂಟೆಗೆ ಮಾದಾವರದ ಆಟದ ಮೈದಾನದಲ್ಲಿ ಕ್ರಿಕೆಟ್ ಆಟವಾಡಲು ಬಂದಿದ್ದ ನಾಲ್ಕೆ$ದು ಯುವಕರ ತಂಡ ಶವ ಗಮನಿಸಿ ಪೊಲೀಸರ ಗಮನಕ್ಕೆ ತಂದಿದ್ದಾರೆ.
ಮಾದನಾಯಕನಹಳ್ಳಿ ಪೊಲೀಸರು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎಸ್ಪಿ ಭೇಟಿ : ಮೃತದೇಹ ಪತ್ತೆಯಾದ ಹಿನ್ನೆಲೆಯಲ್ಲಿ ಗ್ರಾಮಾಂತರ ಜಿಲ್ಲಾ ನೂತನ ಪೊಲೀಸ್ ವರಿಷ್ಠಾಧಿಕಾರಿ ಎಂ.ವಿ.ಚಂದ್ರಕಾಂತ್, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾಗರಾಜು, ವೆಂಕಟೇಶ್ ಪ್ರಸನ್ನ, ಡಿವೈಎಸ್ಪಿ ಜಗದೀಶ್ ಮತ್ತು ಮಾದನಾಯಕನಹಳ್ಳಿ ಠಾಣೆ ಆರಕ್ಷಕ ನಿರೀಕ್ಷಕ ಮುರಳೀಧರ್ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಾದಾವರದ ಆಟದ ಮೈದಾನದಲ್ಲಿ ರವಿ ಎಂಬಾತನ ಶವ ಪತ್ತೆಯಾಗಿದ್ದು, ಕುಟುಂಬಸ್ಥರ ಮಾಹಿತಿ ದೊರಕಿದೆ. ತನಿಖೆ ಚುರುಕುಗೊಳಿಸಲಾಗುವುದು.