Murder Case; ರಹಸ್ಯ ಮದುವೆ: ಯುವತಿಯನ್ನು ಕೊಂದು ಆತ್ಮಹತ್ಯೆ ನಾಟಕವಾಡಿದ ಆಟೋ ಚಾಲಕ!

Murder Case
Murder Case
Published on
ಬೆಂಗಳೂರು: ರಹಸ್ಯವಾಗಿ ಮದುವೆಯಾಗಿದ್ದ ಪತ್ನಿಯ ನಿಶ್ಚಿತಾರ್ಥ ನಡೆಯಲಿದೆಯೆಂಬ ಮಾಹಿತಿ ತಿಳಿದ ಬಳಿಕ ಆಕೆಯನ್ನು ಕೊಲೆ(Murder Case) ಮಾಡಿದ ಆರೋಪದಲ್ಲಿ ಆಟೋ ಚಾಲಕನೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಜಿ. ಹೊಸಹಳ್ಳಿ ರಸ್ತೆಯಲ್ಲಿ ನಡೆದಿದೆ.
ಮೃತ ಯುವತಿಯನ್ನು ಭವಾನಿ ಎಸ್. (33)ಎಂದು ಗುರುತಿಸಲಾಗಿದೆ. ಆಕೆ ಮೂಲತಃ ಮಾಗಡಿ ಭಾಗದವರಾಗಿದ್ದು, ಬೆಂಗಳೂರಿನ ತುಳಸಿ ನಗರದಲ್ಲಿ ವಾಸವಾಗಿದ್ದರು. ಖಾಸಗಿ ಮೊಬೈಲ್ ಅಂಗಡಿಯಲ್ಲಿ ಬಿಲ್ಲಿಂಗ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದರು. ಆರೋಪಿಯನ್ನು ಚಂದ್ರಶೇಖರ್ ಎಂದು ಗುರುತಿಸಲಾಗಿದ್ದು, ಆತ ಆಟೋ ಚಾಲಕನಾಗಿದ್ದಾನೆ.
ಪೊಲೀಸರ ಮಾಹಿತಿ ಪ್ರಕಾರ, ಭವಾನಿ ಮತ್ತು ಚಂದ್ರಶೇಖರ್ ಸುಮಾರು ಒಂದು ವರ್ಷದ ಹಿಂದೆ ಕುಟುಂಬದವರಿಗೆ ತಿಳಿಯದಂತೆ ರಹಸ್ಯವಾಗಿ ಮದುವೆಯಾಗಿದ್ದರು. ಆದರೆ ಈ ವಿಚಾರವನ್ನು ಭವಾನಿ ತನ್ನ ಮನೆಯವರಿಗೆ ತಿಳಿಸಿರಲಿಲ್ಲ. ಇತ್ತೀಚೆಗೆ ಆಕೆಯ ಕುಟುಂಬ ಸದಸ್ಯರು ಆಕೆಗೆ ಮತ್ತೊಬ್ಬ ವರನನ್ನು ಹುಡುಕುತ್ತಿದ್ದು, ನಿಶ್ಚಿತಾರ್ಥದ ಸಿದ್ಧತೆ ನಡೆಸುತ್ತಿದ್ದರು. ಈ ವಿಷಯ ತಿಳಿದ ಚಂದ್ರಶೇಖರ್ ಕೋಪಗೊಂಡಿದ್ದ ಎನ್ನಲಾಗಿದೆ.
ಶನಿವಾರ ಬೆಳಗ್ಗೆ ಭವಾನಿಯ ಸಂಬಂಧಿಕರು ಆಕೆ ಇನ್‌ಸ್ಟಾಗ್ರಾಂನಲ್ಲಿ ಯುವಕನೊಬ್ಬನ (ಚಂದ್ರಶೇಖರ್ಜೊತೆಗಿನ ಫೋಟೋ ಹಂಚಿಕೊಂಡಿರುವುದನ್ನು ಗಮನಿಸಿದ್ದರು. ಬಳಿಕ ಆಕೆಯ ತಂದೆ ಶ್ರೀನಿವಾಸ್ ಅವರು ಕರೆ ಮಾಡಿದರೂ ಭವಾನಿ ಫೋನ್ ಸ್ವೀಕರಿಸಿರಲಿಲ್ಲ. ಅನುಮಾನಗೊಂಡ ಅವರು ಮನೆಯ ಮಾಲೀಕರಿಗೆ ಮಾಹಿತಿ ನೀಡಿ ಪರಿಶೀಲಿಸಲು ಕೇಳಿದ್ದರು.
ಮನೆಗೆ ತೆರಳಿದಾಗ ಭವಾನಿ ಮೃತಪಟ್ಟಿರುವುದು ಪತ್ತೆಯಾಗಿದೆ. ತನಿಖೆ ನಡೆಸಿದ ಪೊಲೀಸರಿಗೆ, ಚಂದ್ರಶೇಖರ್ ಮೊದಲು ಭವಾನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ನಂತರ ತಾನೂ ವಿಷ ಸೇವಿಸಿ ಇಬ್ಬರೂ ಆತ್ಮಹತ್ಯೆಗೆ ಯತ್ನಿಸಿದಂತೆ ನಾಟಕವಾಡಲು ಪ್ರಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಆದರೆ ವೈದ್ಯಕೀಯ ಪರೀಕ್ಷೆ ಮತ್ತು ತನಿಖೆಯಲ್ಲಿ ಸತ್ಯ ಬಹಿರಂಗವಾಗಿದ್ದು, ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಕರಣದ ಕುರಿತು ಬ್ಯಾಡರಹಳ್ಳಿ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net