ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಪ್ರಾಂಗಣದಲ್ಲಿರುವ ರಾಜ ಪರಿವಾರ ಪ್ರತಿಮೆಗಳಿಗೆ ಪೂಜಾ ಕೈಂಕರ್ಯ ನೆರವೇರಿತು. ಪ್ರಮೋದಾದೇವಿ ಒಡೆಯರ್, ತ್ರಿಷಿಕಾ ಒಡೆಯರ್ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ 232ನೇ ಜಯಂತ್ಯುತ್ಸವ
ಅರಸು ಅಸೋಸಿಯೇಷನ್
ನಂಜನಗೂಡು:
ಮೈಸೂರು ಸಂಸ್ಥಾನ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ 232ನೇ ಜಯಂತ್ಯುತ್ಸವವನ್ನು ಅರಸು ಅಸೋಸಿಯೇಷನ್ ವತಿಯಿಂದ ಶಾಸ್ತ್ರೋಕ್ತವಾಗಿ ಆಚರಿಸಲಾಯಿತು.
ಜಯಂತ್ಯುತ್ಸವ ಅಂಗವಾಗಿ ಇಲ್ಲಿನ ಶ್ರೀಕಂಠೇಶ್ವರ ದೇವಾಲಯದಲ್ಲಿ ನಂಜುಂಡೇಶ್ವರನಿಗೆ ವಿವಿಧ ಪಂಚ ದ್ರವ್ಯಗಳಿಂದ ಮಹಾ ರುದ್ರಾಭಿಷೇಕ, ದೇವಾಲಯದ ಪ್ರಾಂಗಣದಲ್ಲಿರುವ ರಾಜ ಪರಿವಾರದ ಪ್ರತಿಮೆಗಳಿಗೆ ಪುಷ್ಪಾರ್ಚನೆ ಹಾಗೂ ಪೂಜಾ ಕೈಂಕರ್ಯ ನೆರವೇರಿಸಲಾಯಿತು. ನಂತರ ಮೃತ್ಯುಂಜಯ ಹೋಮ, ಅನ್ನದಾಸೋಹದ ಬಳಿಕ ಶ್ರೀಕಂಠೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ದೇವಾಲಯದ ಸುತ್ತ ಮೆರವಣಿಗೆ ಮಾಡಲಾಯಿತು.
ರಾಜವಂಶಸ್ಥೆ ಪ್ರಮೋದಾದೇವಿ, ತ್ರಿಷಿಕಾ ಕುಮಾರಿ ಒಡೆಯರ್, ಆದ್ಯವೀರ್ ನರಸಿಂಹರಾಜ ಒಡೆಯರ್ ಅವರು ಕೃಷ್ಣರಾಜ ಒಡೆಯರ್ ಅವರ ತೇರನ್ನು ಎಳೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ರಾಜ ಬೀದಿಗಳಲ್ಲಿ ತೇರು ಸಾಗಿ ನಂತರ ಸ್ವಸ್ಥಾನ ತಲುಪಿತು.
ಪ್ರತಿ ವರ್ಷವೂ ಅರಸು ಅಸೋಸಿಯೇಷನ್ ವತಿಯಿಂದ ರಾಜರ ಜಯಂತ್ಯುತ್ಸವವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಅನೇಕ ದೇವತಾ ಕಾರ್ಯ ಹಾಗೂ ಸಮಾಜ ಸೇವಾ ಕಾರ್ಯ ವಿಜೃಂಭಣೆಯಿಂದ ನೆರವೇರುತ್ತದೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸುದ್ದಿಗಾರರಿಗೆ ತಿಳಿಸಿದರು.
ಅಸೋಸಿಯೇಷನ್ ಅಧ್ಯಕ್ಷ ಸುಬ್ರಮಣ್ಯ ಮಾತನಾಡಿ, ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಆಡಳಿತಾವಧಿದಲ್ಲಿ ಸರ್ವಸ್ವವನ್ನೂ ಕಳೆದುಕೊಂಡಿದ್ದರು. ಆ ಸಮಯದಲ್ಲಿ ಶ್ರೀಕಂಠೇಶ್ವರನಿಗೆ ಮಹಾ ರುದ್ರಾಭಿಷೇಕ ನಡೆಸಿದ ನಂತರ ಸಂಪತ್ತು ದೊರಕಿತು. ಹೀಗಾಗಿ ಅವರ ಜನ್ಮದಿನವನ್ನು ಶ್ರೀಕಂಠೇಶ್ವರ ದೇವಾಲಯದಲ್ಲೇ ಆಚರಣೆ ಮಾಡಲಾಗುತ್ತದೆ ಎಂದರು.
ಅರಸು ಅಸೋಸಿಯೇಷನ್‌ನಿಂದ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ತಲಾ 5,000 ರೂ. ವಿದ್ಯಾರ್ಥಿವೇತನ, ಆರೋಗ್ಯ ಉಚಿತ ತಪಾಸಣೆ, ರಕ್ತದಾನ ಶಿಬಿರ, ಸಾಮೂಹಿಕ ಸತ್ಯನಾರಾಯಣ ಪೂಜೆ, ಸಾಮೂಹಿಕ ಉಪಕರ್ಮದಂತಹ ಸಾಮಾಜಿಕ ಕಾರ್ಯಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಅಸೋಸಿಯೇಷನ್ ಉಪಾಧ್ಯಕ್ಷರಾದ ವಿ.ಕೆ.ವಿಶಾಲ್ ಅರಸ್, ಎನ್.ಆರ್.ಅಶೋಕ್ ಅರಸ್, ಕಾರ್ಯದರ್ಶಿ ಶ್ರೀಕಾಂತ್‌ರಾಜ್ ಅರಸ್, ಖಜಾಂಚಿ ಡಾ.ಎಲ್.ದೇವರಾಜು ಅರಸ್, ಜಂಟಿ ಕಾರ್ಯದರ್ಶಿ ಪ್ರಭುರಾಜೆ ಅರಸ್, ನಾಗೇಂದ್ರ ರಾಜ್ ಅರಸ್ ಇತರರಿದ್ದರು.