ಫಲ ನೀಡಿದ ಬಹು ಬೆಳೆ ಪದ್ಧತಿ

ಕೆ.ಆರ್.ನಗರ ತಾಲೂಕಿನ ಕಾಮೇನಹಳ್ಳಿ ಗ್ರಾಮದಲ್ಲಿರುವ ವಿ.ಮುರಳಿ ಅವರ ತೋಟದಲ್ಲಿರುವ ವಿವಿಧ ಜಾತಿಯ ಮರಗಳು.
ಕೆ.ಆರ್.ನಗರ ತಾಲೂಕಿನ ಕಾಮೇನಹಳ್ಳಿ ಗ್ರಾಮದಲ್ಲಿರುವ ವಿ.ಮುರಳಿ ಅವರ ತೋಟದಲ್ಲಿರುವ ವಿವಿಧ ಜಾತಿಯ ಮರಗಳು.
Published on

ಪ್ರಮುಖ ಮುಖ್ಯಾಂಶಗಳು

  • ಕಾಮೇನಹಳ್ಳಿಯ ಎಂ.ಗಿರಿಜಾ ಮತ್ತು ವಿ.ಮುರಳಿ ದಂಪತಿ
  • ಆದರ್ಶ ಪ್ರಗತಿಪರ ರೈತ ದಂಪತಿ

ಕೆ.ಆರ್.ನಗರ:

ಸ್ನೇಹಿತರ ಊರು ನೋಡಲೆಂದು ಬಂದವರು ಆ ಪ್ರದೇಶದ ವಾತವರಣಕ್ಕೆ ಮನಸೋತ ದಂಪತಿ ಇದೀಗ ಆದರ್ಶ ಪ್ರಗತಿಪರ ರೈತ ದಂಪತಿಗಳಾಗಿದ್ದಾರೆ.

ತಾಲೂಕಿನ ಕಾಮೇನಹಳ್ಳಿಯ ಎಂ.ಗಿರಿಜಾ ಮತ್ತು ವಿ.ಮುರಳಿ ದಂಪತಿ ದೂರದ ತುಮಕೂರಿನಿಂದ ಬಂದು ಇಲ್ಲಿನ ನಿಸರ್ಗ ಕಂಡು ಕೃಷಿ ಮಾಡಬೇಕೆಂಬ ಆಸೆಯಿಂದ ಜಮೀನು ಖರೀದಿಸಿ ಇಲ್ಲಿಯೇ ನೆಲೆಸಿ ಈಗ ಕೃಷಿ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.
ಮೂಲತಃ ತುಮಕೂರಿನವರಾದ ಮುರುಳಿ ಎಂಎಸ್ಸಿ ಪದವಿಯನ್ನು ಕಾರಣಾಂತರದಿಂದ ಮೊಟಕುಗೊಳಿಸಿದರಾದರೂ ಅಸ್ಟ್ರಾಲಜಿಯಲ್ಲಿ ಎಂಎ ಪದವಿ ಪಡೆದಿದ್ದಾರೆ. ಮೈಸೂರಿನಲ್ಲಿ ನೆಲೆಸಬೇಕೆಂಬ ಇಚ್ಛೆಯೊಂದಿಗೆ ಕಳೆದ 10 ವರ್ಷಗಳ ಹಿಂದೆ ತಾಲೂಕಿನ ಕಾಮೇನಹಳ್ಳಿ ಗ್ರಾಮದವರೊಬ್ಬರ ಮನೆಯನ್ನು ಮೈಸೂರಿನಲ್ಲಿ ಖರೀದಿಸಿದರು. ನಂತರ ಅವರೊಂದಿಗೆ ಗ್ರಾಮಕ್ಕೆ ಬಂದ ಸಂದರ್ಭ ಯೋಗ ಮಾಡಲು ಕೆಆರ್‌ಎಸ್ ಹಿನ್ನೀರು ಪ್ರದೇಶಕ್ಕೆ ಹೋಗಿದ್ದರು. ನಿಸರ್ಗ ಪ್ರಿಯರಾದ ಮುರಳಿ ಅವರನ್ನು ಪರಿಸರ ಬಹಳ ಆಕರ್ಷಿಸಿತು.
ನಂತರ ಆ ಭಾಗದಲ್ಲಿ 5 ಎಕರೆ ಜಮೀನು ಖರೀದಿಸಿ ತೋಟಗಾರಿಕೆ ಪ್ರಾರಂಭಿಸಿದರು. ನಂತರ ಎರಡೂವರೆ ಎಕರೆ ಖರೀದಿ ಮಾಡಿದರು. ಪ್ರಸ್ತುತ 7.20 ಎಕರೆ ಜಮೀನಿದ್ದು, ತಮ್ಮಲ್ಲಿರುವ ಎರಡು ಕೊಳವೆ ಬಾವಿಗಳ ಜತೆಗೆ ಕಾಲುವೆ ನೀರನ್ನು ಬಳಸಿಕೊಂಡು ಸಾವಯವ ಕೃಷಿ ಪದ್ದತಿಯಲ್ಲಿ ನೈಸರ್ಗಿಕ ಬಹುಬೆಳೆ ಬೆಳೆಯುವ ಮೂಲಕ ಲಕ್ಷಾಂತರ ರೂ. ಸಂಪಾದನೆ ಮಾಡುತ್ತ ಇಲ್ಲೇ ನೆಲೆಸಿದ್ದಾರೆ.
ಮೈಸೂರಿನಲ್ಲಿ ಈಶಾನ್ಯ ಸ್ಪೇಸಸ್ ಹೆಲ್ತ್ ಅ್ಯಂಡ್ ವೆಲ್ತ್ ಸೆಂಟರ್ ನಡೆಸುತ್ತಿದ್ದು, ನಿತ್ಯ ದಂಪತಿ ಬೆಳಗ್ಗೆ ಮೈಸೂರಿಗೆ ಹೋಗಿ ಮತ್ತೆ ಕಾಮೇನಹಳ್ಳಿಗೆ ಹಿಂದಿರುಗುತ್ತಾರೆ. ರಜಾ ದಿನಗಳಲ್ಲಿ, ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ಸಮಯದಲ್ಲಿ ಜಮೀನಿನಲ್ಲಿ ಕೆಲಸ ಮಾಡುತ್ತಾರೆ. ಇವರ ಪುತ್ರ ಮನಿಷ್ ಎಂ.ತುಳಸಿ ಅಮೆರಿಕ ಕಂಪನಿಯೊಂದರಲ್ಲಿ ಸ್‌ಟಾವೇರ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಪುತ್ರಿ ತೃಪ್ತಿ ಮೈಸೂರು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದಾರೆ.
ಸಾವಯವ ಕೃಷಿ ಮತ್ತು ತೋಟಗಾರಿಕೆಯಲ್ಲಿ ಬಹುಬೆಳೆ ಪದ್ಧತಿಯನ್ನು ಅಳವಡಿಸಿಕೊಂಡಿರುವ ಮುರುಳಿ ದಂಪತಿ ತೋಟದಲ್ಲಿ 650 ತೆಂಗು, ವಿವಿಧ ತಳಿಯ ಮಾವು, ದಾಳಿಂಬೆ, ಸಪೋಟ, ಪನ್ನೇರಳೆ, ವಿವಿಧ ತಳಿಯ ಸೀಬೆ, ಜಮ್‌ನೇರಳೆ, ನೇರಳೆ, ಮೂಸಂಬಿ, ಕಿತ್ತಳೆ, ನಿಂಬೆ, ಕಾಶ್ಮೀರ್ ಸೇಬು, ಲಿಚ್ಚಿ, ಕರ್ಜೂರ, ಮರಸೇಬು, ರಾಮಫಲ, ಸೀತಾಫಲ, ಚೆರ್ರಿ ಹಣ್ಣುಗಳು, ಇಂಗು, ಚಿಕ್ಕೆ, ಲವಂಗ, ಜಾಯ್‌ಕಾಯ್, ಅಡಕೆ, ವಿಲಕ್ಕಿ, ಪಚ್ಚ, ಪುಟ್‌ಬಾಳೆ, ತೇಗ, ಬೇವು, ಸಿಲ್ವರ್, ಓಕ್ ಮರಗಳಿವೆ. 50 ರಿಂದ 60 ರೀತಿಯ ವಿವಿಧ ಹಣ್ಣುಗಲೂ ಇವರ ತೋಟದಲ್ಲಿವೆ.
ಅಡುಗೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಮುರುಳಿ ಅವರ ಪತ್ನಿ ಗಿರಿಜಾ ಅವರು ಆರ್ಗ್ಯಾನಿಕ್ ಗ್ರೂಪ್ ರಚಿಸಿಕೊಂಡಿದ್ದು, ಅದರ ಮೂಲಕ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ಇವರ ಜಮೀನಿನಲ್ಲಿ ಬೆಳೆದ ನಿಂಬೆ, ಮಾವು, ಇಂಗು, ಮೆಣಸಿನಕಾಯಿ, ವಿವಿಧ ಬೆಳೆಗಳು ಹಾಗೂ ತಾವೇ ತಯಾರಿಸಿದ ಅಡುಗೆ ಎಣ್ಣೆಯನ್ನು ಉಪಯೋಗಿಸಿ ತಯಾರಿಸುವ ಉಪ್ಪಿನಕಾಯಿ ಅತ್ಯಂತ ಜನಪ್ರಿಯವಾಗಿದೆ. ಈ ದಂಪತಿಯ ಸ್ನೇಹಿತರು ಅಮೆರಿಕ, ಕೆನಡಾ, ಜರ್ಮನಿಯಲ್ಲಿದ್ದು, ಕರ್ನಾಟಕಕ್ಕೆ ಬಂದ ಸಂದರ್ಭ ತೋಟಕ್ಕೆ ಭೇಟಿ ನೀಡಿ, ಉಪ್ಪಿನಕಾಯಿ ಖರೀದಿಸುತ್ತಾರೆ. ಆರ್ಗ್ಯಾನಿಕ್ ಗ್ರೂಪ್ ಮೂಲಕವೂ ಮಾರಾಟವಾಗುತ್ತದೆ.
ಇನ್ನು ಮಿಶ್ರ ಬೆಳೆಯಾಗಿ ರಾಗಿ, ಹುರುಳಿ, ಮುಸುಕಿನ ಜೋಳ, ಅವರೆ, ಅಲಸಂದೆ ಬೆಳೆಯುತ್ತಿದ್ದು ಸಾವಯವ ಪ್ರಧಾನವನ್ನಾಗಿಸಿಕೊಂಡು ಕಾಂಪೋಸ್ಟ್ ಗೊಬ್ಬರ ಘಟಕ ಹಾಗೂ ಜೀವಾಮೃತ ಬಳಕೆಯನ್ನು ರೂಢಿಸಿಕೊಂಡಿದ್ದಾರೆ. ಇದಲ್ಲದೆ ಟೊಮ್ಯಾಟೊ, ಬದನೆಕಾಯಿ, ಮೆಣಸಿನಕಾಯಿ, ತೊಂಡೆ, ಮಂಗಳೂರು ಸೌತೆ, ಕುಂಬಳ ಕೂಡ ಬೆಳೆಯುತ್ತಾರೆ.
ಸಮಗ್ರ ಅಂತರ ಬೆಳೆ ಬೇಸಾಯ ಪದ್ಧತಿ ಸಾಧನೆಗೆ ಎಂ.ಗಿರಿಜಾ ಅವರಿಗೆ ಬೆಂಗಳೂರಿನ ಜಿಕೆವಿಕೆಯಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಕೃಷಿ ಮೇಳದಲ್ಲಿ ಪ್ರಶಸ್ತಿ ದೊರೆತಿದೆ. ಮೈಸೂರಿನ ಪ್ರಗತಿ ಪರ ರೈತ ಮಹಿಳೆ ಎಂದು ಗೌರವಿಸಲಾಗಿದೆ. ಕೃಷಿಯಲ್ಲಿನ ಸಾಧನೆಗಾಗಿ ಮುರಳಿ ಅವರಿಗೆ ಮೈಸೂರು ದಸರಾ ಪ್ರಶಸ್ತಿ, ಬೆಂಗಳೂರಿನ ರೋಟರಿ ಸಂಸ್ಥೆ ಪ್ರಶಸ್ತಿ ದೊರೆತಿದ್ದು, ಆಕಾಶವಾಣಿಯಲ್ಲಿ ಕಾರ್ಯಕ್ರಮ ಕೂಡ ನೀಡಿದ್ದಾರೆ. ರೈತರಿಗೆ ಉಪಯುಕ್ತ ಮಾಹಿತಿ ನೀಡಲು ಗ್ಲೋಬಲ್ ಫಾರ್ಮರ್ ಫೌಂಡೇಷನ್‌ಅನ್ನು ಆರಂಭಿಸಿದ್ದಾರೆ.
ಈ ಹಿಂದೆ ಎರಡು ಹಸುಗಳನ್ನು ಸಾಕಣೆ ಮಾಡುತ್ತಿದ್ದ ಇವರು ಹಾಲನ್ನು ಮಾರಾಟ ಮಾಡುತ್ತಿರಲಿಲ್ಲ. ಬದಲಾಗಿ ಮೊಸರು ಮಾಡಿ ಅದರಿಂದ ಬೆಣ್ಣೆ ತೆಗೆದು ಮಾರಾಟ ಮಾಡುತ್ತಿದ್ದರು. ಮನೆಯಲ್ಲಿ ತಯಾರಿಸುವ ಬೆಣ್ಣೆಗೆ ಎಲ್ಲೆಡೆ ಬೇಡಿಕೆ ಹೆಚ್ಚಾಗಿದೆ ಎಂದು ಹೇಳುವ ಮುರುಳಿ, ಪ್ರತಿನಿತ್ಯ ಮೈಸೂರಿಗೆ ಬಂದು ಹೋಗಬೇಕಾದ್ದರಿಂದ ಹಸುಗಳ ಕಡೆ ಹೆಚ್ಚಿನ ನಿಗ ವಹಿಸಲು ಸಾದ್ಯವಾಗದೆ ಹಸು ಸಾಕಣೆ ನಿಲ್ಲಿಸಿದ್ದೇನೆ ಎನ್ನುತ್ತಾರೆ.
ರೈತರು ಬೆಳೆದ ಬೆಲೆಗೆ ಸೂಕ್ತ ಬೆಲೆ ಇಲ್ಲವೆಂದು ಸಾಲದ ಸುಳಿಯಲ್ಲಿ ಸಿಕ್ಕಿ ನೊಂದು ಆತ್ಮಹತ್ಯೆಯ ದಾರಿ ಹಿಡಿಯುತ್ತಿರುವವರಿಗೆ ಎಂ.ಗಿರಿಜಾ ಮತ್ತು ಮುರಳಿ ದಂಪತಿ ಆದರ್ಶವಾಗಲಿದ್ದಾರೆ. ಕೃಷಿಯಲ್ಲಿ ಏಕ ಬೆಳೆ ಪದ್ಧತಿಗೆ ಅಂಟಿಕೊಳ್ಳದೆ ಬಹು ಬೆಳೆಗಳನ್ನು ಬೆಳೆಯುವ ಮೂಲಕ ಕಡಿಮೆ ಖರ್ಚಿನಲ್ಲಿ ಹೆಚ್ಚು ಸಂಪಾದನೆ ಮಾಡಬಹುದು ಎಂಬುದಕ್ಕೆ ಮಾದರಿಯಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net