ತಾಯಿಯ ಹಾಲು ಮಗುವಿಗೆ ಮೊದಲ ಲಸಿಕೆ

ಹುಣಸೂರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಡಾ.ಸುಜಾತಾ ಲಕ್ಷ್ಮೀ ಮಾತನಾಡಿದರು. ಟಿಎಚ್‌ಒ ಡಾ.ಜಿ.ಗಿರಿದಾಸ್, ಡಾ.ಶಿವಶಂಕರ್, ಡಾ.ರೂಪ, ಡಾ.ಭಾನು, ರಾಜೇಶ್ವರಿ ಇತರರಿದ್ದಾರೆ.
ಹುಣಸೂರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಡಾ.ಸುಜಾತಾ ಲಕ್ಷ್ಮೀ ಮಾತನಾಡಿದರು. ಟಿಎಚ್‌ಒ ಡಾ.ಜಿ.ಗಿರಿದಾಸ್, ಡಾ.ಶಿವಶಂಕರ್, ಡಾ.ರೂಪ, ಡಾ.ಭಾನು, ರಾಜೇಶ್ವರಿ ಇತರರಿದ್ದಾರೆ.
Published on

ಹುಣಸೂರು:

ತಾಯಿ ಹಾಲು ಅತ್ಯಂತ ಸ್ವಚ್ಛ, ಸುರಕ್ಷಿತ ಮಾತ್ರವಲ್ಲದೆ ಮಗುವಿಗೆ ಮೊದಲ ಲಸಿಕೆಯಾಗಿದೆ ಎನ್ನುವುದನ್ನು ತಾಯಂದಿರು ಅರಿತುಕೊಳ್ಳಬೇಕು ಎಂದು ಮಕ್ಕಳ ತಜ್ಞೆ ಡಾ.ಸುಜಾತಾ ಲಕ್ಷ್ಮೀ ತಿಳಿಸಿದರು.

ನಗರದ ಡಿ.ದೇವರಾಜ ಅರಸು ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಆಯೋಜಿಸಿದ್ದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು. ತಾಯಿಯ ಹಾಲು ಹುಟ್ಟಿದ ಮಗುವಿಗೆ ಶ್ರೀರಕ್ಷೆ. ಕನಿಷ್ಠ 6 ತಿಂಗಳು ಮಗುವಿಗೆ ತಾಯಂದಿರು ಹಾಲು ನೀಡಬೇಕು. ತಾಯಿಹಾಲು ನೀಡುವುದರಿಂದ ಸೌಂದರ್ಯ ಕಳೆದುಕೊಳ್ಳುತ್ತೇವೆಂಬ ಮೂಢನಂಬಿಕೆ ತಾಯಂದಿರಿಲ್ಲಿದೆ. ಇದು ತಪ್ಪು. ಬದಲಾಗಿ ಹಾಲು ನೀಡುವುದರಿಂದ ತಾಯಂದಿರ ಆರೋಗ್ಯದಲ್ಲಿ ವೃದ್ಧಿ ಕಾಣಬಹುದು. ತಾಯಿ ಹಾಲು ನೀಡುವುದರಿಂದ ತಾಯಿ ಸ್ತನ ಕ್ಯಾನ್ಸರ್, ಗರ್ಭಕೋಶ ಕ್ಯಾನ್ಸರ್‌ನಂತಹ ಖಾಯಿಲೆಗಳಿಂದ ಮುಕ್ತರಾಗಬಹುದು. ರಕ್ತಸ್ರಾವ ಕಡಿಮೆಯಾಗುತ್ತದೆ ಎಂದರು.
ಬಾಂಧವ್ಯ ವೃದ್ಧಿ: ತಾಯಿಯ ಹಾಲಿನಷ್ಟು ಪೋಷಕಾಂಶ ಭರಿತ ಆಹಾರ ಭೂಮಿಯಲ್ಲಿ ಬೇರೊಂದಿಲ್ಲ. ಮಗುವಿನ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ತಾಯಿ ಹಾಲು ಅತಿಮುಖ್ಯ. ತಾಯಿ ತನ್ನ ಮಗುವಿಗೆ ಹಾಲು ಉಣಿಸುವುದರಿಂದ ತಾಯಿ-ಮಗುವಿನ ಬಾಂಧವ್ಯ ಹೆಚ್ಚಾಗುತ್ತದೆ. ಭಾವನಾತ್ಮಕ ಸಂಬಂಧ ವೃದ್ಧಿಸುತ್ತದೆ. ತಾಯಿಯ ಹಾಲನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ಮಗುವಿಗೆ ನೀಡುವ ಚುಚ್ಚುಮದ್ದಿಗಿಂತ ಶಕ್ತಿಶಾಲಿ ಈ ಹಾಲು. ಸ್ತನ್ಯಪಾನ ಮಾತೆಯ ಮಮಕಾರದ ಪ್ರತೀಕ ಎನ್ನುವುದನ್ನು ಮರೆಯಬೇಡಿ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ.ಜಿ.ಗಿರಿದಾಸ್ ಮಾತನಾಡಿ, ತಾಯಿಯ ಹಾಲು ಮಗುವಿನ ಬದುಕಿಗೆ ಬುನಾದಿಯಾಗಿದೆ. ಮಗುವಿಗೆ ತಾಯಿಯ ಎದೆಹಾಲು ನೀಡುವುದು ತಾಯಂದಿರ ಆದ್ಯ ಕರ್ತವ್ಯ ಎನ್ನುವುದನ್ನು ಮರೆಯಬೇಡಿ ಎಂದರು.
ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶಿವಶಂಕರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞೆ ಡಾ.ರೂಪಾ, ಡಾ.ಭಾನು, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ ಸೇರಿದಂತೆ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಗರ್ಭಿಣಿಯರು ಮತ್ತು ಬಾಣಂತಿಯರು ಹಾಜರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net