ವಾಡಿಕೆಯಂತೆ ರಾಜ್ಯಕ್ಕೆ ಮುಂಗಾರು ಪ್ರವೇಶ?-Mansoon

ನೈಋತ್ಯ ಮಾನ್ಸೂನ್
ನೈಋತ್ಯ ಮಾನ್ಸೂನ್
Published on
ಬೆಂಗಳೂರು: ‘ಸೂಪರ್ ಎಲ್‌ನಿನೋ’ ಆತಂಕ ನಡುವೆಯೂ ಈ ಬಾರಿ ನೈಋತ್ಯ ಮಾನ್ಸೂನ್ (ಮುಂಗಾರು) ವಾಡಿಕೆಯಂತೆ ರಾಜ್ಯಕ್ಕೆ ಆಗಮಿಸುವ ಸಾಧ್ಯತೆ ಇದೆ.
ಕಳೆದ ವರ್ಷ ಮುಂಗಾರು ಆಶಾದಾಯಕವಾಗಿತ್ತು. ‘ಲಾ-ನಿನಾ’ ಮತ್ತು ಹಿಂದೂ ಮಹಸಾಗರದ ದ್ವಿಧ್ರುವಿ (ಐಒಸಿ) ಪರಿಸ್ಥಿತಿ ತಟಸ್ಥವಾಗಿರುವ ಕಾರಣ 2025ರ ಜೂ.1ರಿಂದ ಸೆ.30ರವರೆಗೆ ವಾಡಿಕೆಗಿಂತ ಅಧಿಕ ಮಳೆಯಾಗಿತ್ತು. ಅಂದಾಜು 80 ಲಕ್ಷಕ್ಕೂ ಅಧಿಕ ಹೆಕ್ಟೇರ್ ಪ್ರದೇಶಗಳಲ್ಲಿ ಬೆಳೆ ಬೆಳೆಯಲಾಗಿತ್ತು. ಆದರೆ, ಈ ಬಾರಿ ಮುಂಗಾರು ಕುರಿತು ಬಿಡುಗಡೆ ಮಾಡಿರುವ ಮೊದಲ ಹಂತದ ವರದಿಯಲ್ಲಿ ಭಾರತೀಯ ಹವಾಮಾನ ಇಲಾಖೆಯು(ಐಎಂಡಿ), ಕರಾವಳಿ,ಮಲೆನಾಡು, ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಭೌಗೋಳಿಕ ಪ್ರದೇಶಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗುವ ಸಂಭವ ಇದೆ ಎಂದಿದೆ.
ಒಟ್ಟು ಮಳೆ ಪ್ರಮಾಣದಲ್ಲಿ ಶೇ.75 ಮಳೆಯು ಮುಂಗಾರಿನ ಅವಧಿಯಲ್ಲಿ ಸುರಿಯಲಿದೆ. ಆದರೆ, ಈ ಬಾರಿ ನೈಋತ್ಯ ಮಾನ್ಸೂನ್ ಮೇಲೆ ‘ಎಲ್ ನಿನೋ’ ಪ್ರಭಾವದಿಂದ ಅಧಿಕ ತಾಪಮಾನ ಮತ್ತು ಮಳೆ ಕುಂಠಿತ ಉಂಟಾಗಲಿದೆ. ಹಿಂದೂ ಮಹಾಸಾಗರದ ದ್ವಿಗುಣ ಪ್ರಭಾವವು ಸಕಾರಾತ್ಮಕವಾಗಿದ್ದರೆ ‘ಎಲ್ ನಿನೊ’ ಪರಿಣಾಮ ಸ್ವಲ್ಪ ಮಟ್ಟಿಗೆ ತಗ್ಗಬಹುದು ಎಂದು ಹವಾಮಾನ ತಜ್ಞರು ವಿಶ್ಲೇಷಿಸಿದ್ದಾರೆ.
ಜುಲೈನಲ್ಲಿ ‘ಎಲ್ ನಿನೋ ’ ಆರಂಭ:
ಪೆಸಿಫಿಕ್ ಸಾಗರದಲ್ಲಿ ಪ್ರಸ್ತುತ ‘ಲಾ-ನಿನಾ’ ಸ್ಥಿತಿ ಇದೆ. ಆದರೆ, ಜುಲೈ ವೇಳೆಗೆ ಇದು ‘ಎಲ್ ನಿನೋ’ ಆಗಿ ಪರಿವರ್ತನೆಗೊಳ್ಳುವ ಸಾಧ್ಯತೆ ಇದೆ. ಈ ಬದಲಾವಣೆಯು ಮುಂಗಾರು ಮಳೆ ಮೇಲೆ ನೇರ ಪರಿಣಾಮ ಬೀರಲಿದೆ. ಜೂನ್, ಜುಲೈನಲ್ಲಿ ವಾಡಿಕೆಯಷ್ಟೇ ಮಳೆಯಾದರೆ, ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಮಳೆ ಪ್ರಮಾಣ ಗಣನೀಯವಾಗಿ ಇಳಿಮುಖವಾಗಲಿದೆ.
ಏನಿದು ಎಲ್ ನಿನೋ ಮತ್ತು ಲಾ-ನಿನಾ?
ಪ್ರತಿ ವರ್ಷ‘ಎಲ್ ನಿನೋ ಮತ್ತು ಲಾ-ನಿನಾ ಪರಿಸ್ಥಿತಿ ಮೇರೆಗೆ ಮುಂಗಾರು ಮಳೆ ಮೇಲೆ ಪರಿಣಾಮ ಬೀರುತ್ತದೆ. ಸಮುದ್ರದ ಪೂರ್ವ ಭಾಗದಲ್ಲಿ ಸಮುದ್ರ ನೀರಿನ ಉಷ್ಣಾಂಶ ವಾಡಿಕೆಗಿಂತ 1 ಡಿ.ಸೆ.ನಿಂದ 1.5 ಡಿ.ಸೆ.ವರೆಗೆ ಹೆಚ್ಚು ದಾಖಲಾದರೆ ‘ಎಲ್ ನಿನೋ’ ಉಂಟಾಗುತ್ತದೆ.ಫೆಸಿಫಿಕ್ ಸಮುದ್ರದ ಪಶ್ಚಿಮ ಭಾಗದಲ್ಲಿ ಸಮುದ್ರ ನೀರಿನ ಉಷ್ಣಾಂಶ ವಾಡಿಕೆಗಿಂತ ಹೆಚ್ಚು ಇದ್ದರೆ ‘ಲಾ-ನಿನಾ’ ಎಂದು ಕರೆಯಲಾಗುತ್ತಿದೆ. 2023-24ರಲ್ಲಿ ‘ಎಲ್ ನಿನೋ’ ಪ್ರಭಾವವು ಮುಂಗಾರು ಮೇಲೆ ಪರಿಣಾಮ ಬೀರಿತ್ತು. ಇದರಿಂದ ರಾಜ್ಯದಲ್ಲಿ ತೀವ್ರ ಮಳೆ ಕುಂಠಿತವಾಗಿ ಬರಗಾಲ ಉಂಟಾಗಿತ್ತು. 2024-25 ಮತ್ತು 2025-26ರಲ್ಲಿ ‘ಲಾ-ನಿನಾ’ ಪರಿಣಾಮದಿಂದ ಉತ್ತಮ ಮಳೆಯಾಗಿತ್ತು.
ಸದ್ಯದ ಹವಾಮಾನ ಸ್ಥಿತಿ ಗಮನಿಸಿದರೆ ಮುಂಗಾರು ಆಗಮನಕ್ಕೆ ಯಾವುದೇ ಅಡಚಣೆ ಇಲ್ಲ. ವಾಡಿಕೆ ಅಥವಾ ವಾಡಿಕೆಗಿಂತ 3 ದಿನ ಮುನ್ನ ಮಾನ್ಸೂನ್ ರಾಜ್ಯಕ್ಕೆ ಪ್ರವೇಶಿಸಲಿದೆ.
ಡಾ.ಶ್ರೀನಿವಾಸರೆಡ್ಡಿ, ಹಿರಿಯ ಹವಾಮಾನ ತಜ್ಞ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net