ತುತ್ತು ಅನ್ನ ನೀಡಿದ ಅಜ್ಜಿಯ ಸಾವಿಗೆ ಕಣ್ಣೀರು ಸುರಿಸಿದ ವಾನರ.. ಚನ್ನಪಟ್ಟಣದಲ್ಲಿ ಮನಕಲಕುವ ಘಟನೆಯ ವಿಡಿಯೋ ವೈರಲ್! Monkey Mourns
Monkey Mourns (ಚಿತ್ರ Instagram)
Published on:
Copied
Follow Us
ರಾಮನಗರ: ರಾಮನಗರ ತಾಲೂಕಿನ ರಾಯರದೊಡ್ಡಿ ಗ್ರಾಮದಲ್ಲಿ ನಡೆದ ಘಟನೆಯೊಂದು (Monkey Mourns) ಪ್ರಾಣಿ ಮತ್ತು ಮನುಷ್ಯರ ನಡುವಿನ ಅವಿನಾಭವ ಸಂಬಂಧಕ್ಕೆ ಕನ್ನಡಿ ಹಿಡಿದಂತಿದೆ. ಮೂಕ ಪ್ರಾಣಿಯೊಂದು ಮಹಿಳೆಯೊಬ್ಬಳ ಸಾವಿಗೆ ಕಣ್ಣೀರು ಹಾಕುತ್ತಾ, ತನ್ನ ನಿಷ್ಠೆ ತೋರಿಸಿರುವುದು ಸಧ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಘಟನೆ ಏನು?
ರಾಯರದೊಡ್ಡಿ ಗ್ರಾಮದ 85 ವರ್ಷದ ವೃದ್ಧೆ ಪಾರ್ವತಮ್ಮ ವಯೋಸಹಜ ಕಾಯಿಲೆಯಿಂದ ಸೋಮವಾರ (ಮಾ. 30) ನಿಧನರಾಗಿದ್ದರು. ಈ ವೇಳೆ ಕೋತಿಯೊಂದು ಆಕೆಯ ಮನೆಗೆ ಬಂದು ಪಾರ್ಥೀವ ಶರೀರದ ಮೇಲೆ ಅಳುತ್ತಾ ಕುಳಿತಿರುವುದನ್ನು ನೋಡಿ ಅಲ್ಲಿದ್ದವರ ಕಣ್ಣಾಲಿಗಳು ತೇವಗೊಂಡವು.
ಪಾರ್ವತಮ್ಮ ಪ್ರಾಣಿಪ್ರಿಯರಾಗಿದ್ದು, ತಮ್ಮ ಮನೆಯ ಬಳಿಗೆ ಬರುತ್ತಿದ್ದ ಪ್ರಾಣಿಗಳಿಗೆ ಆಹಾರವನ್ನು ನೀಡುತ್ತಿದ್ದರು. ಅನೇಕರು ಈ ಕೋತಿಗಳನ್ನು ತೊಂದರೆ ಎಂದು ಭಾವಿಸಿದರೆ, ಆ ಅಜ್ಜಿ ಮಾತ್ರ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಕಾಲಾನಂತರದಲ್ಲಿ ಪ್ರಾಣಿಗಳ ಜೊತೆ ಅವರ ಬಾಂಧವ್ಯ ಬಲಗೊಳ್ಳುತ್ತಾ ಹೋಯಿತು.
ಪ್ರಾಣಿಗಳು ಅಳುವುದಿಲ್ಲ ಎನ್ನುವುದು ಜನರ ನಂಬಿಕೆ, ಆದರೆ ಈ ವಿಡಿಯೋದಲ್ಲಿ ಕೋತಿಯು ತನ್ನ ಎರಡೂ ಕೈಗಳಿಂದ ಪಾರ್ವತಮ್ಮರನ್ನು ಅಪ್ಪಿ, ಅವರ ಮುಖವನ್ನು ನೇವರಿಸುತ್ತಾ ಕಣ್ಣೀರು ಹಾಕುತ್ತಿರುವುದನ್ನು ಕಾಣಬಹುದು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅನೇಕ ಬಳಕೆದಾರರು ಪ್ರತಿಕ್ರಿಯಿಸಿದ್ದು, ಪ್ರಾಣಿಗಳು ಯಾರಾದರೂ ತಮಗೆ ದಯೆ ತೋರಿಸಿದಾಗ ಅವುಗಳನ್ನು ಎಂದಿಗೂ ಮರೆಯುವುದಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಆ ಕೋತಿ ಮಹಿಳೆಯನ್ನು ತಬ್ಬಿಕೊಂಡ ರೀತಿ ಬಹಳ ದುಃಖವನ್ನು ತರಿಸುತ್ತದೆ ಎಂದು ಇನ್ನೊಬ್ಬರು ಬರೆದಿದ್ದಾರೆ (ಏಜೆನ್ಸೀಸ್).