

ಮೈಸೂರು: ದಸರಾ ಗಜಪಡೆಯ ಮಾವುತರು ಮತ್ತು ಕಾವಾಡಿಗಳ ಕುಟುಂಬಸ್ಥರಿಗೆ ಅರಮನೆ ಆವರಣದಲ್ಲಿ ಆಯೋಜಿಸಲಾಗಿದ್ದ ಉಪಹಾರ ಕೂಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಡವಾಗಿ ಆಗಮಿಸಿದ ಹಿನ್ನೆಲೆಯಲ್ಲಿ ಸ್ವಪಕ್ಷೀಯ ಶಾಸಕ ತನ್ವೀರ್ ಸೇಠ್ (Tanveer Sait) ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಸ್ಥಳದಿಂದ ನಿರ್ಗಮಿಸಿದ ಘಟನೆ ನಡೆದಿದೆ.
ದಸರಾ ಗಜಪಡೆಯ ಮಾವುತರು ಮತ್ತು ಕಾವಾಡಿಗಳ ಕುಟುಂಬ ವರ್ಗಕ್ಕೆ ಬೆಳಿಗ್ಗೆ 9 ಗಂಟೆಗೆ ಉಪಹಾರ ಕೂಟ ಹಾಗೂ ಕಿಟ್ ವಿತರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಆದರೆ, ಬೆಳಿಗ್ಗೆ 9.30 ಗಂಟೆಯಾದರೂ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸಿರಲಿಲ್ಲ. ಸಚಿವರಿಗಾಗಿ ಮಾವುತರು ಮತ್ತು ಕಾವಾಡಿಗಳ ಕುಟುಂಬ ಸದಸ್ಯರು ಟೇಬಲ್ ಮೇಲೆ ಹಾಕಲಾಗಿದ್ದ ಬಾಳೆ ಎಲೆಗಳನ್ನು ನೋಡುತ್ತಾ ಕಾದು ಕುಳಿತುಕೊಳ್ಳಬೇಕಾಯಿತು.
ಸಚಿವರು ಸಮಯಕ್ಕೆ ಸರಿಯಾಗಿ ಬಾರದ ಕಾರಣ ಹಾಗೂ ಮಾವುತರನ್ನು ಕಾಯಿಸಿದ್ದಕ್ಕೆ ಶಾಸಕ ತನ್ವೀರ್ ಸೇಠ್ ತೀವ್ರ ಅಸಮಾಧಾನಗೊಂಡರು. ಸ್ಥಳದಲ್ಲೇ ಕಾದು ಕಾದು ಕೋಪಗೊಂಡ ಶಾಸಕ ತನ್ವೀರ್ ಸೇಠ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ವಾಪಸ್ ತೆರಳಿದರು. ನಿರ್ಗಮಿಸುವ ವೇಳೆ ಫೋನ್ನಲ್ಲಿ ಮಾತನಾಡಿದ ಶಾಸಕ ಸೇಠ್, ಬೇರೆ ಕಾರ್ಯಕ್ರಮಗಳಾಗಿದ್ದರೆ ಓಕೆ, ಆದರೆ ಮಾವುತರು ಮತ್ತು ಕಾವಾಡಿಗಳನ್ನು ತಿಂಡಿಗೋಸ್ಕರ ಹೀಗೆ ಕಾಯಿಸುವುದು ಸರಿಯೇ..? ಎಂದು ತಮ್ಮ ಆಕ್ರೋಶ ಹೊರಹಾಕಿದರು.
ಕಾರ್ಯಕ್ರಮಕ್ಕೆ ಸಚಿವರು ಬರುವುದು ತಡವಾದಾಗ, ಅಧಿಕಾರಿಗಳನ್ನು ಕರೆದು ಕಾರ್ಯಕ್ರಮವನ್ನು ತಕ್ಷಣ ಆರಂಭಿಸುವಂತೆ ಶಾಸಕ ತನ್ವೀರ್ ಸೇಠ್ ಸೂಚಿಸಿದರು. ಆದರೆ, ಸಚಿವರು ಆಗಮಿಸದೆ ಆರಂಭಿಸಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ಇದರಿಂದ ಮತ್ತಷ್ಟು ಬೇಸರಗೊಂಡ ಶಾಸಕರು ಕಾರ್ಯಕ್ರಮದ ಸ್ಥಳದಿಂದ ಹೊರನಡೆಯಲು ಮುಂದಾದರು.
ಈ ವೇಳೆ ಸ್ಥಳದಲ್ಲಿದ್ದ ಎಂಎಲ್‌ಸಿ ಡಾ. ತಿಮ್ಮಯ್ಯ ಅವರು ಶಾಸಕರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಬಳಿಕ ಶಾಸಕರು ಕಾರು ಹತ್ತುವ ಸಂದರ್ಭದಲ್ಲಿ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಅವರು ಕೂಡ ದೂರವಾಣಿ ಮೂಲಕ ಮಾತನಾಡಿ ಸಮಾಧಾನಪಡಿಸಲು ಯತ್ನಿಸಿದರು. ಆದರೆ, ಶಾಸಕ ತನ್ವೀರ್ ಸೇಠ್ ತಮ್ಮ ಅಸಮಾಧಾನವನ್ನು ದೂರವಾಣಿಯಲ್ಲೂ ತೀವ್ರವಾಗಿಯೇ ವ್ಯಕ್ತಪಡಿಸಿದರು.
ಮಾವುತರ ಕಾರ್ಯಕ್ರಮಕ್ಕಾಗಿ ಇಷ್ಟು ಹೊತ್ತು ಕಾಯಿಸುವುದು ಸರಿಯಲ್ಲ. ಪ್ರತಿಯೊಂದಕ್ಕೂ ಸಮಯ ನಿಗದಿಯಾಗಿರುತ್ತದೆ, ಎಲ್ಲರಿಗೂ ಸಮಯ ಪ್ರಜ್ಞೆ ಇರಬೇಕು. ಸಮಯ ಪ್ರಜ್ಞೆ ಇಲ್ಲದಿದ್ದರೆ ಏನು ಮಾಡವುದು..? ನಾನು ಇಲ್ಲಿರುವುದಿಲ್ಲ, ಬೇರೆಯವರು ಏನು ಬೇಕಾದರೂ ಮಾಡಲಿ. ಮಾವುತರನ್ನು ಹೀಗೆ ಕಾಯಿಸುವುದು ಸರಿಯಲ್ಲ, ನಾನು ಇಲ್ಲಿಂದ ಹೊರಡುತ್ತೇನೆ ಎಂದು ಆಕ್ರೋಶ ಹೊರಹಾಕಿ ಕಾರಿನ ಬಾಗಿಲನ್ನು ಜೋರಾಗಿ ಹಾಕಿ ತೆರಳಿದರು.
ಬೆಳಿಗ್ಗೆ 9 ಗಂಟೆಗೆ ನಿಗದಿಯಾಗಿದ್ದ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಬೆಳಿಗ್ಗೆ 10.12ಕ್ಕೆ (ಒಂದೂಕಾಲು ಗಂಟೆ ತಡವಾಗಿ) ಆಗಮಿಸಿದರು. ಬಳಿಕ 10.15ಕ್ಕೆ ಮಾವುತರು, ಕಾವಾಡಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ ಉಪಾಹಾರ ಬಡಿಸಲಾಯಿತು. ಕಾರ್ಯಕ್ರಮ ತಡವಾದ ಹಿನ್ನೆಲೆಯಲ್ಲಿ ಮಾವುತರ ಕುಟುಂಬ ಸದಸ್ಯರು ಸಾಕಷ್ಟು ಸಮಯ ಉಪಾಹಾರಕ್ಕಾಗಿ ಕಾಯುವಂತಾಯಿತು.
ಉಪಾಹಾರ ಕೂಟಕ್ಕೆ ತಡವಾಗಿ ಆಗಮಿಸಿದ ಬಗ್ಗೆ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದರು. ಮೈಸೂರಿನಲ್ಲಿ ನನ್ನದು ಹೊಸ ಮನೆಯಾಗಿದೆ. ಕೆಲವು ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು. ಮನೆಯಲ್ಲಿ ತಾಯಿ ಇರಲಿಲ್ಲ ಹಾಗೂ ಯಾವುದೇ ಕೆಲಸಗಾರರೂ ಇರಲಿಲ್ಲ. ಹೀಗಾಗಿ ಮನೆಯಲ್ಲಿನ ಕೆಲವು ವ್ಯವಸ್ಥೆಗಳನ್ನು ಮಾಡಿಕೊಂಡು ಬರುವಲ್ಲಿ ತಡವಾಯಿತು. ಉದ್ದೇಶಪೂರ್ವಕವಾಗಿ ತಡವಾಗಿ ಬಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಅಲ್ಲದೆ, ಈ ಕುರಿತು ಶಾಸಕ ತನ್ವೀರ್ ಸೇಠ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿರುವುದಾಗಿಯೂ ಸಚಿವ ಯತೀಂದ್ರ ತಿಳಿಸಿದರು.
ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಶಾಸಕರಾದ ಜಿ.ಟಿ.ದೇವೇಗೌಡ, ಅನಿಲ್ ಚಿಕ್ಕಮಾದು, ಎಂಎಲ್‌ಸಿ ಡಾ.ಡಿ.ತಿಮ್ಮಯ್ಯ ಹಾಗೂ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಸೇರಿದಂತೆ ಪ್ರಮುಖ ಗಣ್ಯರು ಮಾವುತರ ಕುಟುಂಬಕ್ಕೆ ಒಬ್ಬಟ್ಟು, ತುಪ್ಪ, ಇಡ್ಲಿ, ವಡೆ, ದೋಸೆ, ಪೊಂಗಲ್, ಜಿಲೇಬಿ ಸೇರಿದಂತೆ ಹಲವು ವೈವಿಧ್ಯಮಯ ಖಾದ್ಯಗಳನ್ನು ಬಡಿಸಿ, ನಂತರ ಅವರೊಂದಿಗೇ ಕುಳಿತು ಉಪಾಹಾರ ಸೇವಿಸಿದರು.