ಸರ್ಕಾರಿ ಶಾಲೆಗಳನ್ನು ಮುಚ್ಚಲು ಬಿಡಬಾರದು

ಚಿತ್ರ ೩೦ ಕೆ.ಎಲ್.ಆರ್. ೦೬ : ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ತಾಲ್ಲೂಕು ಪಂಚಾಯ್ತಿಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಶಾಸಕ ಕೊತ್ತೂರು ಮಂಜುನಾಥ್, ಎಂಎಲ್‌ಸಿ ಅನಿಲ್‌ಕುಮಾರ್, ತಹಶೀಲ್ದಾರ್ ನಯನ ಮುಂತಾದವರು ಇದ್ದರು.
ಚಿತ್ರ ೩೦ ಕೆ.ಎಲ್.ಆರ್. ೦೬ : ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ತಾಲ್ಲೂಕು ಪಂಚಾಯ್ತಿಯ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಶಾಸಕ ಕೊತ್ತೂರು ಮಂಜುನಾಥ್, ಎಂಎಲ್‌ಸಿ ಅನಿಲ್‌ಕುಮಾರ್, ತಹಶೀಲ್ದಾರ್ ನಯನ ಮುಂತಾದವರು ಇದ್ದರು.
Published on
ವಿಜಯವಾಣಿ ಸುದ್ದಿಜಾಲ ಕೋಲಾರ
ಸರ್ಕಾರಿ ಶಾಲೆಗಳು ಮುಚ್ಚದಂತೆ ನೋಡಿಕೊಳ್ಳಬೇಕು. ಮುಂದಿನ ವರ್ಷದಿಂದ ಮಕ್ಕಳ ಹಾಜರಾತಿ ಹೆಚ್ಚಾಗಬೇಕು. ಉತ್ತಮ ಶಿಕ್ಷಕರಿದ್ದರು ಹಾಜರಾತಿ ಕಡಿಮೆಯಾಗುತ್ತಿರುವ ಕಾರಣಗಳನ್ನು ಹುಡುಕಬೇಕು ಎಂದು ಶಾಸಕ ಕೊತ್ತೂರು ಮಂಜುನಾಥ್ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಪಂಚಾಯ್ತಿ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಲ್ಲೂಕು ಪಂಚಾಯ್ತಿ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿ, ಶಿಕ್ಷಣ ಇಲಾಖೆಯ ಅಂಕಿಅAಶಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಮಧುಮಾಲತಿರವರಿಂದ ಮಾಹಿತಿ ಪಡೆದ ಸಂದರ್ಭದಲ್ಲಿ ಶಿಕ್ಷಣಾಧಿಕಾರಿಗಳು ಕೋಲಾರ ಜಿಲ್ಲೆಯಲ್ಲಿ ಪೋಷಕರು ಹಣವಂತರಾಗಿದ್ದಾರೆ. ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಹೆಚ್ಚಿಗೆ ಸೇರಿಸುತ್ತಿದ್ದಾರೆ. ಹೀಗೆ ಮುಂದುವರೆದರೆ ಮುಂದಿನ ೧೦ ವರ್ಷಗಳಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಬೇಕಾಗುತ್ತದೆ ಎಂದು ತಿಳಿಸಿದರು.
ಸರ್ಕಾರಿ ಶಾಲೆಗಳಲ್ಲಿ ಸರ್ಕಾರ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದೆ. ಬಿಸಿಯೂಟ, ಮೊಟ್ಟೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ನೀಡುತ್ತಿದ್ದರೂ ಏಕೆ ಹಾಜರಾತಿ ಕಡಿಮೆಯಾಗಿದೆ. ಗುಣಮಟ್ಟದ ಶಿಕ್ಷಕರು ಇರುವಲ್ಲಿ ಹಾಜರಾತಿಯನ್ನು ಏಕೆ ಹೆಚ್ಚಿಸಿಕೊಳ್ಳಬಾರದು. ಮುಂದಿನ ವರ್ಷದಿಂದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿಯೂ ಹಾಜರಾತಿ ಹೆಚ್ಚಾಗಬೇಕು. ಮತ್ತು ಎಸ್.ಎಸ್.ಎಲ್.ಸಿ. ಫಲಿತಾಂಶ ಶೇಕಡವಾರು ಹೆಚ್ಚಾಗಬೇಕು ಎಂದು ಶಾಸಕರು ಸೂಚಿಸಿದರು. ಪರೀಕ್ಷೆ ಫಲಿತಾಂಶ ಹೆಚ್ಚಳಕ್ಕೆ ಹೆಚ್ಚುವರಿ ತರಗತಿಗಳನ್ನು ನಡೆಸಲಾಗುತ್ತಿದೆ ಎಂದು ಶಿಕ್ಷಣಾಧಿಕಾರಿ ಮಧುಮಾಲತಿ ಮಾಹಿತಿ ನೀಡಿದರು.
ಅರಣ್ಯ ಇಲಾಖೆಯ ವಿರುದ್ಧ ಗರಂ :
ಒಂದು ವರ್ಷದಿಂದ ಅರಣ್ಯ ಇಲಾಖೆಗೆ ಎಷ್ಟು ಅನುದಾನ ಬಂದಿದೆ. ಎಲ್ಲೆಲ್ಲಿ ಗಿಡ ನಟ್ಟಿದ್ದೀರಿ ತೋರಿಸಬೇಕು. ಜನವರಿ ೫ ಮತ್ತು ೬ ರಂದು ತಾಲ್ಲೂಕಿನಲ್ಲಿ ಪ್ರವಾಸ ಕೈಗೊಳ್ಳುತ್ತೇನೆ. ಆಗ ಇಲಾಖೆಯ ಪ್ರಗತಿಯನ್ನು ತೋರಿಸಬೇಕು. ಕಾಡಂಚಿನಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಅಡುಗೆ ಅನಿಲವನ್ನು ಎಲ್ಲೆಲ್ಲಿ ನೀಡಿದ್ದೀರಿ. ಅವುಗಳ ದಾಖಲೆ ಸಮೇತ ತೋರಿಸಬೇಕು ಎಂದರು.
ಎಂ.ಎಲ್.ಸಿ. ಅನಿಲ್‌ಕುಮಾರ್ ಮಧ್ಯೆ ಪ್ರವೇಶಿಸಿ ನಮ್ಮ ಸ್ವಂತ ಊರಾದ ಮದನಹಳ್ಳಿ ಸಮೀಪ ಅರಣ್ಯ ಇಲಾಖೆಯರವರು ಗಿಡ ನೆಟ್ಟಿರುವುದಾಗಿ ಮಾಹಿತಿ ನೀಡಿದ್ದಾರೆ. ಇದು ತಪ್ಪು ಎಂದು ದೂರವಾಣಿಯ ಮೂಲಕ ಗ್ರಾಮ ಪಂಚಾಯ್ತಿ ಅಧ್ಯಕ್ಷರನ್ನು ಸಂಪರ್ಕಿಸಿದಾಗ ಗಿಡ ನೆಟ್ಟಿಲ್ಲ ಎಂಬ ಮಾಹಿತಿ ನೀಡಿದರು. ಅರಣ್ಯ ಇಲಾಖೆಯವರ ದಾಖಲೆಗಳಲ್ಲಿ ಗಿಡ ನೆಟ್ಟಿರುವ ಮಾಹಿತಿಯನ್ನು ತರಿಸಿಕೊಂಡಾಗ ಅದರಲ್ಲಿ ನಮೂದು ಆಗಿರುವುದನ್ನು ಕಂಡ ಶಾಸಕರು ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಖಾಸಗಿ ಬಸ್ಸುಗಳಿಗೆ ಕಡಿವಾಣ :
ಖಾಸಗಿ ಬಸ್ಸುಗಳು ಹಳ್ಳಿ ಮಾರ್ಗವಾಗಿ ಸಂಚರಿಸುವುದನ್ನು ಬಿಟ್ಟು ಹೈವೇ ರಸ್ತೆಗಳಲ್ಲಿ ಓಡಾಡುತ್ತಿವೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಆರ್.ಟಿ.ಓ ಅಧಿಕಾರಿಗಳಿಗೆ ಸೂಚನೆ ನೀಡಿದಾಗ ನಾವು ಆಗಾಗ ತಡೆದು ದಂಡ ಹಾಕುತ್ತಿದ್ದೇವೆ, ಆದರೂ ಓಡಾಡುತ್ತಿವೆ. ಕ್ರಮಕೈಗೊಳ್ಳಲು ನಮ್ಮ ಅಧೀನಕ್ಕೆ ಬರುವುದಿಲ್ಲ. ಬೆಂಗಳೂರಿನ ಪ್ರಾದೇಶಿಕ ಆಯುಕ್ತರಿಗೆ ಬರುತ್ತದೆ ಎಂದು ಆರ್.ಟಿ.ಓ ಅಧಿಕಾರಿಗಳು ಸೂಚಿಸಿದರು.
ಮುಂದಿನ ಕೆಡಿಪಿ ಸಭೆಗೆ ಬೆಂಗಳೂರಿನ ಪ್ರಾದೇಶಿಕ ಆಯುಕ್ತರನ್ನು ಕರೆಸುವಂತೆ ಸೂಚನೆ ನೀಡಿದರು. ಕೆಲವೊಂಸು ಇಲಾಖೆಗಳ ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಅಧಿಕಾರಿಗಳು ಸಮಗ್ರ ಮಾಹಿತಿ ಒದಗಿಸದೆ ಇದ್ದುದ್ದಕ್ಕೆ ಗರಂ ಆದ ಶಾಸಕರು ಹಿಂದಿನ ಸಭೆ ಮಾಹಿತಿಯೊಂದಿಗೆ ಬರಬೇಕು. ಅಧಿಕಾರಿಗಳು ಬರದೇ ಕೆಳಹಂತದ ಅಧಿಕಾರಿಗಳನ್ನು ಕಳುಹಿಸಿದರೆ ಪರಿಸ್ಥಿತಿ ನೆಟ್ಟಗೆ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಎಂ.ಎಲ್.ಸಿ.ಅನಿಲ್‌ಕುಮಾರ್, ತಹಶೀಲ್ದಾರ್ ನಯನ, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ವೈ.ಶಿವಕುಮಾರ್, ತಾಲ್ಲೂಕು ಅಧ್ಯಕ್ಷ ಮುನಿಯಪ್ಪ, ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್ ಮುಂತಾದವರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net