ಸುರಭಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್‌ನಲ್ಲಿ ಅವ್ಯವಹಾರ:ಮರು ಲೆಕ್ಕಪರಿಶೋಧನೆಗೆ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ ಆದೇಶ- re-audit

ಸಹಕಾರ ಲೆಕ್ಕಪರಿಶೋಧನಾ ಇಲಾಖೆಯ ನಿರ್ದೇಶಕರಿಗೆ ಬರೆದ ಪತ್ರ
ಸಹಕಾರ ಲೆಕ್ಕಪರಿಶೋಧನಾ ಇಲಾಖೆಯ ನಿರ್ದೇಶಕರಿಗೆ ಬರೆದ ಪತ್ರ
Published on

ಬೆಂಗಳೂರು: ಸುರಭಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್‌ನಲ್ಲಿ ಅಕ್ರಮ ನಡೆದಿರುವ ಹಿನ್ನೆಲೆ 2025-26ನೇ ಸಾಲಿನ ಲೆಕ್ಕಪುಸ್ತಕಗಳ ಮರು ಲೆಕ್ಕಪರಿಶೋಧನೆ ನಡೆಸಿ ಮೂರು ದಿನದೊಳಗೆ ಪರಿಶೀಲನಾ ವರದಿ ಸಲ್ಲಿಸುವಂತೆ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ನಿರ್ದೇಶಕರು, ಬೆಂಗಳೂರು ನಗರ ಜಿಲ್ಲೆಯ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಜಂಟಿ ನಿರ್ದೇಶಕರಿಗೆ ಸೂಚಿಸಿದ್ದಾರೆ.

ಠೇವಣಿದಾರರ ಹಿತದೃಷ್ಟಿಯಿಂದ ಸುರಭಿ ಸೌಹಾರ್ದ ಕ್ರೆಡಿಟ್ ಸಹಕಾರಿಯ ಲೆಕ್ಕಪುಸ್ತಕಗಳನ್ನು ಮರುಲೆಕ್ಕಪರಿಶೋಧನೆಗೆ ಒಳಪಡಿಸುವಂತೆ ಸಂಸ್ಥೆಯ ನಿರ್ದೇಶಕ ಟಿ.ಕೆ. ತಿಮ್ಮರಾಜು ಶೆಟ್ಟಿ ದೂರು ನೀಡಿದ್ದಾರೆ.
ದೂರು ಅರ್ಜಿಯಲ್ಲಿ ನೀಡಲಾಗಿರುವ ಅಂಶಗಳ ಬಗ್ಗೆ ಸಹಕಾರಿ ಸಂಸ್ಥೆಗೆ ಭೇಟಿ ನೀಡಿ ದೂರುದಾರರಿಂದ ಅಧಿಕೃತ ದಾಖಲಾತಿಗಳೊಂದಿಗೆ ಸಮಜಾಯಿಷಿ ಪಡೆದು, ಸಹಕಾರಿಯ ದಾಖಲಾತಿಗಳು ಹಾಗೂ ಲೆಕ್ಕಪರಿಶೋಧನಾ ವರದಿಯೊಂದಿಗೆ ಪರಿಶೀಲಿಸಲು ಸೂಚಿಸಲಾಗಿತ್ತು. ಮರುಲೆಕ್ಕಪರಿಶೋಧನೆಯ ಅಗತ್ಯತೆ ಬಗ್ಗೆ ಕಂಡಿಕೆವಾರು ಸ್ಪಷ್ಟ ಅಭಿಪ್ರಾಯ ಒಳಗೊಂಡ ವರದಿಯನ್ನು ನೀಡುವಂತೆ ಈಗಾಗಲೇ ಇಲಾಖೆಯ ಸುತ್ತೋಲೆ ಮೂಲಕ ಸೂಚಿಸಲಾಗಿತ್ತು. ಹಾಗಾಗಿ, ಅಕ್ರಮದ ಗಂಭೀರತೆ ಪರಿಗಣಿಸಿ ವಿಳಂಬ ಮಾಡದೇ 3 ದಿನದೊಳಗೆ ಪರಿಶೀಲನಾ ವರದಿಯನ್ನು ಇಲಾಖೆಗೆ ಸಲ್ಲಿಸುವಂತೆ ನಿರ್ದೇಶಕರು, ಜಂಟಿ ನಿರ್ದೇಶಕರಿಗೆ ತಾಕೀತು ಮಾಡಿದ್ದಾರೆ.
ನಿರ್ದೇಶಕರಿಗೆ ಪತ್ರ ಬರೆದು ಮನವಿ:
ಸುರಭಿ ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್‌ನಲ್ಲಿ 2025-26ನೇ ಸಾಲಿನ ವಾರ್ಷಿಕ ಲೆಕ್ಕಪರಿಶೋಧನೆಯಲ್ಲಿ ಅಕ್ರಮ ನಡೆದಿದೆ ಎಂದು ಸೊಸೈಟಿಯ ನಿರ್ದೇಶಕ ಟಿ.ಕೆ. ತಿಮ್ಮರಾಜ ಶೆಟ್ಟಿ ಎಂಬುವರು, ಸಹಕಾರ ಲೆಕ್ಕಪರಿಶೋಧನಾ ಇಲಾಖೆಯ ನಿರ್ದೇಶಕರಿಗೆ ಪತ್ರ ಬರೆದ್ದರು.
ಆಡಿಟ್ ವರದಿಯಲ್ಲಿ 1.70 ಕೋಟಿ ರೂ.ಹೆಚ್ಚುವರಿ ಕೃತಕ ಲಾಭ ತೋರಿಸಲಾಗಿದೆ. ಸಂಸ್ಥೆಯ 2.73 ಕೋಟಿ ರೂ.ಬಾಕಿ ಇರುವ ಸುಸ್ತಿದಾರರ ಖಾತೆಗಳನ್ನು ಮರೆಮಾಚಿ, ಕಡಿಮೆ ತೋರಿಸಲಾಗಿದೆ. ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಗೆ ಮೇ 19ರಂದು ಆಕ್ಷೇಪಣೆ ಸಲ್ಲಿಸಿದ್ದರೂ, ಅದನ್ನು ಪರಿಗಣಿಸದೆ ಹಳೆಯ ಬ್ಯಾಲೆನ್ಸ್ ಶೀಟ್ ಆಧಾರದಲ್ಲಿ ವರದಿ ಅಂತಿಮಗೊಳಿಸಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದರು.
ಸೊಸೈಟಿಯು ಆಡಳಿತ ಮಂಡಳಿ ಸಭೆಯಲ್ಲಿ ಎತ್ತಿದ ಆಕ್ಷೇಪಣೆಗಳನ್ನು ಕಡೆಗಣಿಸಿದೆ. ವಾರ್ಷಿಕ ಮಹಾಸಭೆಯನ್ನು ಅವಸರವಾಗಿ ಕರೆಯಲಾಗಿದ್ದು, ಇದು ಹೂಡಿಕೆದಾರರಲ್ಲಿ ಮತ್ತು ಸದಸ್ಯರಲ್ಲಿ ಅನುಮಾನಕ್ಕೆ ಕಾರಣವಾಗಿದೆ. ಹಾಗಾಗಿ, ಸಂಸ್ಥೆ, ಠೇವಣಿದಾರರ ಹಿತದೃಷ್ಟಿಯಿಂದ ಇಲಾಖೆಯು ತಕ್ಷಣ ಮಧ್ಯಪ್ರವೇಶಿಸಿ, ಬ್ಯಾಲೆನ್ಸ್ ಶೀಟ್ ಹಾಗೂ ಲೆಕ್ಕಪತ್ರಗಳನ್ನು ಮರು ತನಿಖೆಗೆ ಒಳಪಡಿಸಬೇಕು. ಹಾಗೆಯೇ, ಪಾರದರ್ಶಕ ಬ್ಯಾಲೆನ್ಸ್ ಶೀಟ್ ಸಿದ್ಧಪಡಿಸಲು ಸೊಸೈಟಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ನಿರ್ದೇಶಕರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net