ಸ್ಟಿಂಗ್​​ ಹಿಂದೆ ನಮ್ಮ ಪಕ್ಷದ ಮಹಿಳೆಯ ಕೈವಾಡ, 'ಆ' ಕ್ಷೇತ್ರದ ಟಿಕೆಟ್​ಗಾಗಿ ತಂದೆಗೆ ಬ್ಲಾಕ್​ಮೇಲ್​!...ಸ್ಫೋಟಕ ಹೇಳಿಕೆ ನೀಡಿದ ಸಚಿವ ಯತೀಂದ್ರ

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ತೇಜೋವಧೆ, ಘನತೆಗೆ ಧಕ್ಕೆ ತರುವ ಉದ್ಧೇಶದಿಂದಲೇ ಈ ಸ್ಟಿಂಗ್ ಆಪರೇಷನ್ ನಡೆಸಲಾಗಿದೆ ಎಂದು ಅವರ ಪುತ್ರ ಹಾಗೂ ನಗರಾಭಿವೃದ್ದಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಆರೋಪಿಸಿದ್ದಾರೆ.
ಸ್ಟಿಂಗ್​​ ಹಿಂದೆ ನಮ್ಮ ಪಕ್ಷದ ಮಹಿಳೆಯ ಕೈವಾಡ, 'ಆ' ಕ್ಷೇತ್ರದ ಟಿಕೆಟ್​ಗಾಗಿ ತಂದೆಗೆ ಬ್ಲಾಕ್​ಮೇಲ್​!...ಸ್ಫೋಟಕ ಹೇಳಿಕೆ ನೀಡಿದ ಸಚಿವ ಯತೀಂದ್ರ
Published on: 

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜಕೀಯ ತೇಜೋವಧೆ, ಘನತೆಗೆ ಧಕ್ಕೆ ತರುವ ಉದ್ಧೇಶದಿಂದಲೇ ಈ ಸ್ಟಿಂಗ್ ಆಪರೇಷನ್ ನಡೆಸಲಾಗಿದೆ ಎಂದು ಅವರ ಪುತ್ರ ಹಾಗೂ ನಗರಾಭಿವೃದ್ದಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಆರೋಪಿಸಿದ್ದಾರೆ. ಈ ಕೃತ್ಯದ ಹಿಂದೆ ತಮ್ಮದೇ ಕಾಂಗ್ರೆಸ್ ಪಕ್ಷದ ಮಹಿಳೆ ಹಾಗೂ ಮಾಧ್ಯಮ ಸಂಸ್ಥೆಯ ಮುಖ್ಯಸ್ಥರೊಬ್ಬರ ಕೈವಾಡವಿರುವ ಬಗ್ಗೆ ಯತೀಂದ್ರ ಅವರು ಸ್ಫೋಟಕ ಹೇಳಿಕೆ ನೀಡಿದ್ದು, ಇದು ರಾಜ್ಯ ರಾಜಕೀಯ ವಲಯದಲ್ಲಿ ಮತ್ತೊಂದು ಸುತ್ತಿನ ಚರ್ಚೆಗೆ ಗ್ರಾಸವಾಗಿದೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಯತೀಂದ್ರ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಇಬ್ಬರನ್ನು ವಶಕ್ಕೆ ಪಡೆದಿದ್ದು, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೂಡ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಿಗೆ ನಿಷ್ಪಕ್ಷಪಾತ ಹಾಗೂ ಪಾರದರ್ಶಕ ತನಿಖೆ ನಡೆಸಲು ನಿರ್ದೇಶನ ನೀಡಿದ್ದಾರೆ. ರಾಜ್ಯ ಪೊಲೀಸ್ ವ್ಯವಸ್ಥೆಯ ಮೇಲೆ ತಮಗೆ ಸಂಪೂರ್ಣ ಭರವಸೆಯಿದ್ದು, ಪ್ರಸ್ತುತ ನಡೆಯುತ್ತಿರುವ ತನಿಖೆಯಿಂದಲೇ ಸಂಪೂರ್ಣ ಸತ್ಯಾಂಶ ಹೊರಬರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಈ ಗಂಭೀರ ಸಂಚಿನ ಹಿಂದೆ ಸ್ವಪಕ್ಷೀಯರೇ ಭಾಗಿಯಾಗಿರುವ ವಿಡಿಯೋ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ಯತೀಂದ್ರ ಬಹಿರಂಗಪಡಿಸಿದರು. ವಿಡಿಯೋ ತುಣುಕುಗಳಲ್ಲಿ ಕಾಣಿಸುವಂತೆ, ಕಾಂಗ್ರೆಸ್ ಪಕ್ಷದ ಮಹಿಳಾ ನಾಯಕಿಯೊಬ್ಬರು ಮುಂಬರುವ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದ ಟಿಕೆಟ್ ಪಡೆಯುವ ದುರುದ್ದೇಶದಿಂದ ಈ ಸ್ಟಿಂಗ್ ಆಪರೇಷನ್ ನಡೆಸಿದ್ದಾರೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ಆದರೆ, ಪಕ್ಷದ ಒಬ್ಬಿಬ್ಬರು ಸ್ವಾರ್ಥ ರಾಜಕಾರಣಿಗಳು ಇಂತಹ ಕೃತ್ಯ ಎಸಗಿದ್ದ ತಕ್ಷಣ, ಇಡೀ ಕಾಂಗ್ರೆಸ್ ಪಕ್ಷವೇ ನಮ್ಮ ವಿರುದ್ಧವಾಗಿದೆ ಎಂದು ಭಾವಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ತಮ್ಮ ಸುದೀರ್ಘ 40 ವರ್ಷಗಳ ರಾಜಕೀಯ ಜೀವನದಲ್ಲಿ ಸಿದ್ದರಾಮಯ್ಯ ಅವರು ಎಂದಿಗೂ ಇಂತಹ ಕಳಂಕವನ್ನು ಎದುರಿಸಿಲ್ಲ, ತಮ್ಮ ರಾಜಕೀಯ ರಂಗದ ಕೊನೆಯ ಹಂತದಲ್ಲಿ ಇಂತಹ ಸುಳ್ಳು ಮತ್ತು ಗಂಭೀರ ಆರೋಪಗಳು ಎದುರಾದಾಗ ಸಹಜವಾಗಿಯೇ ತೀವ್ರ ಬೇಸರವಾಗುತ್ತದೆ. ಆದರೆ, ಸತ್ಯ ಸದಾ ನಮ್ಮ ಪರವಾಗಿದ್ದು, ಯಾವುದೇ ತನಿಖೆಯನ್ನೆದುರಿಸಲು ಸಿದ್ಧರಿದ್ದೇವೆ. ಅಂತಿಮವಾಗಿ ಸತ್ಯಕ್ಕೇ ಜಯ ಸಿಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net